ಯುವ ಜನೋತ್ಸವದಲ್ಲಿ ಮುಂಜಾನೆ ಯೋಗ ಮತ್ತು ಧ್ಯಾನ ಶಿಬಿರ

ಧಾರವಾಡ, ಜ.13; ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಪ್ರತಿದಿನ ಮುಂಜಾನೆ ಯೋಗ ಮತ್ತು ಧ್ಯಾನ ಕಾರ್ಯಕ್ರಮ ಯುವ ಸಮೂಹದಲ್ಲಿ ನವೋಲ್ಲಾಸ ಮೂಡಿಸುತ್ತಿದೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಕೆ.ಸಿ.ಡಿ ಕಾಲೇಜು ಮೈದಾನದಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ 8 ಗಂಟೆವರೆಗೆ ಯೋಗ ಮತ್ತು ಧ್ಯಾನ ಶಿಬಿರ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಯೋಗ ಸಂಸ್ಥೆಯ ಪರಿಣಿತರು ಯೋಗ ಮತ್ತು ಧ್ಯಾನದ ಮಹತ್ವ ಕುರಿತು ಯುವ ಸಮೂಹಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಯುವ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ.

ಯೋಗ ತಜ್ಞರು ಯೋಗದ ವಿವಿಧ ಆಸನಗಳು, ಯೋಗದಿಂದ ದೈಹಿಕ ಮತ್ತು ಮಾನಸಿಕವಾಗಿ ಉಂಟಾಗುವ ಲಾಭ, ಆಧುನಿಕ ಜೀವನ, ಸ್ಪರ್ಧಾತ್ಮಕ ಯುಗದಲ್ಲಿ ಯೋಗದ ಪರಿಣಾಮಗಳ ಕುರಿತು ಮನೋಜ್ಞವಾಗಿ ತಿಳಿಸಿಕೊಡುತ್ತಿದ್ದಾರೆ. ಜೊತೆಗೆ ಯೋಗಾಸನಗಳ ಮೂಲಕ ದೈಹಿಕವಾಗಿಯೂ ಯುವ ಪ್ರತಿನಿಧಿಗಳನ್ನು ಪಳಗಿಸುತ್ತಿದ್ದಾರೆ. ನಂತರ ಧ್ಯಾನದ ವಿಧಾನಗಳು, ದೈನಂದಿನ ಜೀವನದಲ್ಲಿ ಧ್ಯಾನ ಮಾಡುವುದರಿಂದ ದೇಹದ ಆರೋಗ್ಯಕ್ಕೆ ಹೇಗೆ ಪೂರಕ ಎಂಬ ಕುರಿತು ಮಾಹಿತಿ ನೀಡುತ್ತಿದ್ದಾರೆ. ಯೋಗ ಮತ್ತು ಧ್ಯಾನದಿಂದ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳುವ ಕುರಿತಂತೆಯೂ ಅರಿವು ಮೂಡಿಸುತ್ತಿದ್ದಾರೆ
