ಬೆಂಗಳೂರಿನಲ್ಲಿ ಸರ್ಕಾರದ ನಿರ್ಲಕ್ಷ್ಯಕ್ಕೆ ಎರಡು ಜೀವ ಬಲಿಯಾಗಿದೆ : ಕೆಪಿಸಿಸಿ ವಕ್ತಾರ ಅಮಲಾ ರಾಮಚಂದ್ರ

ಪುತ್ತೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾಮಗಾರಿಗಳು ಕುಸಿತವಾಗುತ್ತಿದೆ. ಬೆಂಗಳೂರಿನಲ್ಲಿ ಸರ್ಕಾರದ ನಿರ್ಲಕ್ಷ್ಯಕ್ಕೆ ಎರಡು ಜೀವ ಬಲಿಯಾಗಿದೆ. ರಸ್ತೆಯಲ್ಲಿ ಸಂಚರಿಸುವ ಸಮಯ ಎಲ್ಲಿ ಕುಸಿಯುತ್ತದೆ, ಮೇಲ್ಸೇತುವೆ ಎಲ್ಲಿ ತಲೆಗೆ ಬೀಳುತ್ತದೆ ಎಂದು ಭಯದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಅಮಲಾ ರಾಮಚಂದ್ರ ಹೇಳಿದರು.
ಈ ಹಿಂದೆ ಇದ್ದ ಯಾವ ಶಾಸಕರ ಅವಧಿಯಲ್ಲೂ ಇಷ್ಟು ಭ್ರಷ್ಟಾಚಾರ ಇರಲಿಲ್ಲ. ಅಕ್ರಮ ಸಕ್ರಮ ಮಂಜೂರಾತಿಯಲ್ಲಿ ಪ್ಯಾಕೇಜ್ ನೀಡಿದರೆ ಮಾತ್ರ ಕಡತ ಮುಂದುವರಿಯುವುದು ಎಂಬ ಆರೋಪ ಅರ್ಜಿದಾರರಿಂದ ಕೇಳಿ ಬರುತ್ತಿದೆ. ತಾಲೂಕು ಕಛೇರಿ, ಆರ್.ಟಿ.ಓ., ನೋಂದಣಿ ಕಛೇರಿ ಸೇರಿ ಎಲ್ಲಾ ಕಡೆ ಭ್ರಷ್ಟಾಚಾರ ತುಂಬಿಹೋಗಿದೆ. ಅಭಿವೃದ್ಧಿಯ ಕಡೆಗೆ ಗಮನ ನೀಡುವುದು ಬಿಟ್ಟು ಜನರ ಮನಸ್ಸು ಒಡೆಯುವ ಕಾರ್ಯ ಮಾತ್ರ ಮಾಡಲಾಗುತ್ತಿದೆ ಎಂದು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ,ರಾಜ್ಯ ಮಹಿಳಾ ಕಾಂಗ್ರೆಸ್ ನ ಕಾರ್ಯದರ್ಶಿ ಶಾಯಿರಾ ಜುಬೈದ್, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶಖೂರ್ ಹಾಜಿ, ಪುತ್ತೂರು ಮುಖಂಡ ಮೌರಿಸ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.
