ದಿಲ್ಲಿಯ ವಾಯು ಮಾಲಿನ್ಯ ಮತ್ತು ರಾಜಕೀಯ ಕೊಳೆ
ದಿಲ್ಲಿಯ ಗಾಳಿಯ ಗುಣಮಟ್ಟವು ಅತಿ ಕೆಟ್ಟದಾಗಿ ಬದಲಾಗುತ್ತ ಸಾಗಿದೆ. ಅತಿಯಾದ ವಾಹನ ದಟ್ಟಣೆ ಮತ್ತು ಅಂಗಾರಾಮ್ಲ ಹೊರ ಸೂಸುವಿಕೆಯೆ ಇದಕ್ಕೆ ಕಾರಣ ಎನ್ನಲಾಗಿದೆ. ಭಾರತದ ರಾಜಧಾನಿಯ ಗಾಳಿ ಒಂದೇ ಅಲ್ಲ ರಾಜಕೀಯ ಗಾಳಿಯೂ ಕೆಟ್ಟು ಕೂತಿದೆ ಎನ್ನುವವರಿದ್ದಾರೆ. ರಾಜಕೀಯ ಗಾಳಿ ಕೆಟಿದ್ದರೆ ಅದನ್ನು ಸರಿ ಪಡಿಸಲು ಮತದಾರರಿಗೆ ಅವಕಾಶವಿದೆ. ಮತ ಯಂತ್ರ ಸಂಚು ಮಾಡಿದರೆ ಕಷ್ಟ. ಮತಯಂತ್ರವನ್ನೂ ರಿಪೇರಿ ಮಾಡಬೇಕಾದ ಅನಿವಾರ್ಯತೆ ಜನರಿಗಿದೆ. ಅದಕ್ಕಿಂತ ಮುಖ್ಯವಾಗಿ ಬೆಂಗಳೂರಿನ ಬಿಇಎಲ್‍ನಿಂದ ಪೂರೈಕೆಯಾದ 90,000ದಷ್ಟು ಇವಿಎಂ ಯಂತ್ರಗಳು ನಾಪತ್ತೆಯಾದ ಸಂಗತಿ ಹಿಂದೆ ವರದಿಯಾಗಿತ್ತು. ಆದರೆ ಚುನಾವಣಾ ಆಯೋಗವಾಗಲಿ, ಬೇರೆ ಯಾರೇ ಆಗಲಿ ಆ ಬಗೆಗೆ ಹೆಚ್ಚಿನ ಆಸಕ್ತಿ ವಹಿಸಿದಂತೆ ಇಲ್ಲ. ಅಂದರೆ ಇದೆಲ್ಲ ಮಾಮೂಲು ಎಂಬ ವರಸೆ.
ಮಲಿನಗೊಂಡ ಗಾಳಿಯ ಬಗೆಗೂ ಜನರ ಅಸಡ್ಡೆಯು ಇದೆಲ್ಲ ಮಾಮೂಲು ಎಂಬಂತೆಯೇ ಇದೆ. ಸಾಮಾನ್ಯ ಗಾಳಿಗೆ ರಾಸಾಯನಿಕಗಳು ಮತ್ತು ಜೈವಿಕ ಅಣುಗಳು ಸೇರಿಕೊಳ್ಳುವುದೇ ವಾಯು ಮಾಲಿನ್ಯದ ಪ್ರಮುಖ ಲಕ್ಷಣವಾಗಿದೆ. ಗಾಳಿಯಲ್ಲಿನ ಬೆಂಕಿವಾಯು ಎಂದರೆ ಆಕ್ಸಿಜನ್ ಕಡಿಮೆಯಾಗಿ ಬೆಂಕಿಸಾಯು ಎಂದರೆ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವು ಅಧಿಕವಾದುದನ್ನು ಕೂಡ ಗಾಳಿಯ ಮಲಿನತೆ ಎಂದೇ ಪರಿಗಣಿಸಬಹುದು. ಆದರೆ ಗಾಳಿಯ ಮಾಲಿನ್ಯ ಇನ್ನೂ ಕೆಟ್ಟ ಪರಿಣಾಮ ಬೀರುವುದಾಗಿದೆ.
ಗಾಳಿಯು ಚಲಿಸುತ್ತಲೇ ಇದ್ದು ಅದು ಭೂಮಿಯ ನಿತ್ಯದ ವ್ಯವಹಾರದೊಂದಿಗೆ ಹಾಸುಹೊಕ್ಕಾಗಿದೆ. ಅದು ಮೋಡಗಳನ್ನು ಹಾರಿಸುತ್ತದೆ, ಡಿಕ್ಕಿ ಹೊಡೆಸುತ್ತದೆ. ಕಡಲಿನಲ್ಲಿ ಗಾಳಿಯಿಲ್ಲದ ಪ್ರದೇಶ ಉಂಟು ಮಾಡಿ ಭಾರೀ ಮಳೆ ಗಾಳಿಯು ಕರಾವಳಿಗೆ ಅಪ್ಪಳಿಸುವಂತೆ ಮಾಡುತ್ತದೆ. ಗಾಳಿಯು ಕೆಲವು ಸಸ್ಯಗಳ ಬೀಜ ಪ್ರಸಾರವನ್ನೂ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ಗಾಳಿ ಕುಡಿದು ಬದುಕಿದ್ದೇವೆ. ಗಾಳಿ ಕುಡಿಯುವುದು ಮಾತ್ರ ಬಾಯಿಯಿಂದ ಅಲ್ಲ. ದೇಹದ ತುರ್ತು ಸ್ಥಿತಿಯಲ್ಲಿ ಮೂಗಿನ ಮೂಲಕ ಆಹಾರ ನೀಡಲಾಗುತ್ತದೆ. ಅದೇ ರೀತಿ ನಾವು ಜೀವವಾಯುವನ್ನು ಮೂಗಿನ ಮೂಲಕ ಕುಡಿಯುತ್ತೇವೆ. ಅದು ಶ್ವಾಸಕೋಶದ ಗಾಳಿ ಚೀಲಗಳಲ್ಲಿ ಸೋಸಲ್ಪಡುತ್ತದೆ.
ಜೀವವಾಯುವಿನ ಆಮ್ಲಜನಕವು ನೆತ್ತರಿಗೆ ಸೇರಿ ಜೀವದಾಯಿನಿ ಆಗುತ್ತದೆ. ಈ ಬದುಕು ಕಜ್ಜದ ವೇಳೆ ನಮ್ಮ ಶ್ವಾಸಕೋಶವು ಗಾಳಿಯಲ್ಲಿನ ಅಂಗಾರಾಮ್ಲವನ್ನು ಮತ್ತೆ ಮೂಗಿನ ಮೂಲಕ ಹೊರಗೆ ಕಳುಹಿಸುತ್ತದೆ. ಆ ಅಂಗಾರಾಮ್ಲವನ್ನು ಮರಗಿಡಗಳ ಹಸಿರು ಉಸಿರಾಡಿ ನಮಗೆ ಮತ್ತೆ ಆಮ್ಲಜನಕವನ್ನು ನೀಡುತ್ತವೆ. ಈ ಕೊಡುಕೊಳ್ಳುವಿಕೆ ಪ್ರಾಕೃತಿಕ ಜೀವ ಕೊಂಡಿಯಾಗಿದೆ. ದಿಲ್ಲಿಯಂತಾ ದೊಡ್ಡ ನಗರಗಳಲ್ಲಿ ಹಸಿರು ಮರೆಯಾಗುತ್ತ ಸಾಗಿರುವುದು ಸಹ ವಾಯು ಮಾಲಿನ್ಯದ ಮಟ್ಟವನ್ನು ಏರಿಸುತ್ತ ಸಾಗುತ್ತದೆ. ದಿಲ್ಲಿಯಾದರೇನು ಶಿವ, ಹಳ್ಳಿಯಾದರೇನು ಶಿವ ಎನ್ನುವಂತಿಲ್ಲ. ದಿಲ್ಲಿಯ ಗಾಳಿ, ರಾಜಕೀಯ, ವಾತಾವರಣ ಎಲ್ಲವೂ ಹಳ್ಳಿಗಿಂತ ಕೆಟ್ಟು ಕೂತಿರುತ್ತದೆ ಎನ್ನುವುದು ವಿಶ್ಲೇಷಣೆಗಳಿಂದ ಸ್ಪಷ್ಟಗೊಂಡಿದೆ.
ಇಷ್ಟಕ್ಕೂ ಗಾಳಿ ಮಲಿನಗೊಂಡಿದೆ ಎಂದು ತಿಳಿಯುವುದು ಹೇಗೆ? ಎಕ್ಯೂಐ- ಏರ್ ಕ್ವಾಲಿಟಿ ಇಂಡೆಕ್ಸ್ ಮೂಲಕ ಗಾಳಿಯು ಮಲಿನಗೊಂಡಿದೆ ಎಂಬುದನ್ನು ಸೂಚಿಸಲಾಗುತ್ತದೆ. ಇದಕ್ಕಾಗಿ ಅಭಿವೃದ್ಧಿ ಪಡಿಸಿರುವ ಮಾಪಕವು 0ಯಿಂದ 500ರವರೆಗಿನ ಮಾಲಿನ್ಯ ಮಟ್ಟವನ್ನು ತೋರಿಸುತ್ತದೆ. ಮಾಲಿನ್ಯ ದಟ್ಟಣೆಯನ್ನು ಇದರಲ್ಲಿ ಲೆಕ್ಕ ಹಾಕಲಾಗುತ್ತದೆ. ದಿಲ್ಲಿಯ ವಾತಾವರಣ ಅತಿ ಮಾಲಿನ್ಯಗೊಂಡಾಗ ವಾತಾವರಣವನ್ನು ಹೊಂಜು ಆವರಿಸಿಕೊಂಡು ಎದುರಿನ ವಸ್ತುಗಳು ಸರಿಯಾಗಿ ಕಾಣುವುದಿಲ್ಲ.
ರಾತ್ರಿ ಮರಗಳು ಸೂರ್ಯನ ಕಿರಣ ಇಲ್ಲದೆ ಹಸಿರೆಲೆಯ ಮೂಲಕ ಆಹಾರ ಉತ್ಪತ್ತಿ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಬೆಳಿಗ್ಗೆ ವಾತಾವರಣದಲ್ಲಿ ಅಂಗಾರಾಮ್ಲದ ಅಂಶ ಹೆಚ್ಚು ಇರುತ್ತದೆ. ಇದು ಅಧಿಕವಾಗಿರುವ ಕಡೆ ಬೆಳಿಗ್ಗೆಯ ವಾಕಿಂಗ್ ಒಳಿತು ಮಾಡುವ ಬದಲು ಹಾನಿ ಮಾಡುವ ಸಾಧ್ಯತೆಯೂ ಇದೆ. ಹಾಗೆಂದು ಸಂಜೆ ವಾಕಿಂಗ್ ಮಾಡುವುದು ಕೂಡ ನಡಿಗೆ ಮಾಡುವವರಿಗೆ ಎಲ್ಲ ಕಾಲದಲ್ಲಿ ಸುರಕ್ಷಿತ ಎಂದು ಹೇಳಲಿಕ್ಕಾಗುವುದಿಲ್ಲ. ವಾತಾವರಣದಲ್ಲಿ ಮುಖ್ಯವಾಗಿ ನಗರಗಳಲ್ಲಿ ದಿನ ಸಾಗುತ್ತ ನಡೆದಂತೆ ಗಂಧಕದ ಡೈ ಆಕ್ಸೈಡ್, ಸೀಸದ ಅಂಶ ಇತ್ಯಾದಿ ಗಾಳಿಗೆ ಸೇರುತ್ತ ಹೋಗುತ್ತದೆ. ಇವೆಲ್ಲ ಆಮ್ಲಜನಕದ ಇನ್ನೊಂದು ರೂಪವಾದ ಗಾಳಿಯ ಮೇಲಿನ ಪದರವಾಗಿರುವ ಓಜೋನ್ ತೆರೆಗೆ ಹಾನಿ ಉಂಟು ಮಾಡುತ್ತದೆ.
ಎಕ್ಯೂಐ- ಗಾಳಿಯ ಗುಣಮಟ್ಟದ ಸೂಚ್ಯಂಕವು 66ರ ಒಳಗೆ ಇದ್ದರೆ ಆನಂದವೋ ಆನಂದ. 99ರ ಒಳಗಿದ್ದರೆ ಸಂತಸಕರವೇ ಸರಿ. ಅದರ ಮೇಲೆ 149ರವರೆಗಿದ್ದರೆ ಗಾಳಿ ಕೆಟ್ಟದಾಗಿ ಸಂತೋಷ ಕಸಿದುಕೊಳ್ಳುವ ಕಾಲ ಬಂತು ಎನ್ನಬಹುದು. ಅದಕ್ಕೆ ಮೇಲೆ ಸೂಚ್ಯಂಕ 200ರವರೆಗೂ ಬಂದರೆ ಅಲ್ಲಿಗೆ ಆನಂದ ನಷ್ಟ. ಸೂಕ್ಷ್ಮದೇಹಿಗಳು ಹೊರಗೆ ಹೋದರೆ ಅಪಾಯ. ಗಾಳಿಯ ಗುಣಮಟ್ಟದ ಸೂಚ್ಯಂಕವು 200ಕ್ಕೂ ಮೇಲೆ ಹೋದರೆ ಎಲ್ಲ ಮಾನವರಿಗೂ ಅದು ಅನಾಹುತಕಾರಿಯೇ ಆಗಿರುತ್ತದೆ. ಆದ್ದರಿಂದ ಕಟ್ಟೆಚ್ಚರ ಅಗತ್ಯ.
ದಿಲ್ಲಿಯಲ್ಲಿ ಗಾಳಿ ಗುಣಮಟ್ಟದ ಸೂಚ್ಯಂಕವು ಇತ್ತೀಚಿನ ದಿನಗಳಲ್ಲಿ 250ರ ಆಚೀಚೆ ಇರುತ್ತದೆ. ಕೆಲವೊಮ್ಮೆ 300ರ ಹತ್ತಿರ ಬಂದುದೂ ಇದೆ. ಹಸಿರು ನಾಶ, ಅತಿಯಾದ ವಾಹನ ಸಂಚಾರ ಮತ್ತು ಇಂಧನ ಬಳಕೆ ಇದ್ದರೂ ದಿಲ್ಲಿಯವರು ಆರೋಪ ಹೊರಿಸುವುದು ಹರಿಯಾಣ ಮತ್ತು ಪಂಜಾಬದ ರೈತರ ಮೇಲೆ. ಅಲ್ಲಿನ ರೈತರು ಬೆಳೆ ಮುಗಿದು ಮರು ಬೆಳೆಗೆ ಹೋಗುವಾಗ ಗದ್ದೆಗೆ ಬೆಂಕಿ ಹಾಕುತ್ತಾರೆ. ಹಾಗೆ ಬೆಂಕಿ ಹಾಕಿದಾಗ ಅದರಿಂದ ಉತ್ಪಾದನೆ ಆಗುವ ಕಾರ್ಬನ್ ಡೈ ಆಕ್ಸೈಡ್ ಗಾಳಿಯಲ್ಲಿ ಬೇರೆ ಕಡೆಗೆ ಹೊರಡುತ್ತದೆ. ದಿಲ್ಲಿಗೂ ಸ್ವಲ್ಪ ಹೋಗಬಹುದು ಅಷ್ಟೆ. ಎಲ್ಲ ಬರಲವಕಾಶವಿಲ್ಲ. ದಿಲ್ಲಿ ಆಳುವವರು ರೈತರ ಗೋಳನ್ನು ಕೇಳದಿದ್ದರೆ ಹರಿಯಾಣ ಪಂಜಾಬದ ರೈತರು ದಿಲ್ಲಿ ಮೇಲೆ ಗದ್ದೆ ಸುಡು ಹೊಗೆ ದಾಳಿ ನಡೆಸುವುದು ಒಳಿತು ಎಂದು ಕಾಣುತ್ತದೆ.
ಅದರಲ್ಲಿ ಸತ್ಯವಂತೂ ಇಲ್ಲ. ಹಾಗೆ ಸುಡುವಾಗಿನ ಗಾಳಿ ಮಲಿನತೆಯೂ ಬಹುತೇಕ ಆ ರಾಜ್ಯಗಳಲ್ಲಿಯೇ ಸುತ್ತುತ್ತಿರುತ್ತದೆ. ಪಂಜಾಬ್ ಮತ್ತು ಹರಿಯಾಣಕ್ಕೆ ರಾಜಧಾನಿಯಾಗಿರುವ ಚಂಡೀಗಡವು ಏಕೆ ದಿಲ್ಲಿಯಷ್ಟು ವಾಯು ಮಾಲಿನ್ಯ ಕಂಡಿಲ್ಲ ಎನ್ನುವ ಪ್ರಶ್ನೆಯನ್ನು ರೈತರು ದಿಲ್ಲಿಯ ಕದೀಮರಿಗೆ ಕೇಳಬೇಕಾಗಿದೆ. ಗಾಳಿ ಬಂದತ್ತ ತೂರಿಕೋ ಎಂಬುದು ಧಾನ್ಯ ಒಕ್ಕುವುದಕ್ಕೆ ಹುಟ್ಟಿದ ನುಡಿ. ಅದು ಗಾದೆಯಾಗಿ ಗೆದ್ದೆತ್ತಿನ ಬಾಲ ಹಿಡಿಯುವವರಿಗೆ ಬಾಲ ಹಿಡಿಯುವವರಿಗೆ ಅಂಟಿಕೊಂಡಿದೆ.
ದಿಲ್ಲಿ ರಾಜಕೀಯದಲ್ಲಿ ಹೀಗೆ ಗೆದ್ದೆತ್ತಿನ ಬಾಲ ಹಿಡಿಯುವ ರಾಜಕಾರಣ ಹೊಸದೇನಲ್ಲ. ಅದಾದ ಮೇಲೆ ಅದು ಖರೀದಿ ರಾಜಕಾರಣಕ್ಕೆ ಬಂದು ರಾಜಕೀಯದ ಗಾಳಿಯನ್ನು ಮಲಿನ ಮಾಡಿದೆ. ಈಗ ಟಿಕೆಟ್‍ಗಾಗಿ ಗೆಲ್ಲುವವರು ಎನ್ನುವವರ ಬಾಲ ಹಿಡಿಯುವುದು ಮತ್ತು ಟಿಕೆಟ್ ಸಿಗದಿದ್ದರೆ ಮರು ದಿನವೇ ಪಕ್ಷ ಬದಲಾಯಿಸುವುದು ಎಲ್ಲ ನಡೆದಿದೆ. ಇದಕ್ಕೆ ಒದ್ದೆತ್ತಿನ ಬಾಲ ಬಿಡುವುದು ಎಂದು ಗಾದೆ ಹುಟ್ಟು ಹಾಕಬಹುದು.
ಬರಹ: ಪೇರೂರು ಜಾರು
ಹಿರಿಯ ಸಂಪಾದಕರು