ರಸ್ತೆಯಲೆಲ್ಲಾ ಡೀಸೆಲ್ ಚೆಲ್ಲಿ ವಾಹನ ಸವಾರರ ಪರದಾಟ
ಉಡುಪಿ: ರಸ್ತೆಯಲ್ಲಿ ಡೀಸೆಲ್ ಚೆಲ್ಲಿದ ಪರಿಣಾಮ ವಾಹನಗಳು ಸ್ಕಿಡ್ ಆದ ಘಟನೆ ಉಡುಪಿ ನಗರದ ಸಿಟಿ ಬಸ್ ತಂಗುದಾಣದ ಬಳಿ ಬುಧವಾರ ರಾತ್ರಿ ನಡೆದಿದೆ. ಕಲ್ಸಂಕದಿಂದ ಉಡುಪಿಯತ್ತ ತೆರಳುತ್ತಿದ್ದ ಟ್ರಕ್ ಒಂದರಿಂದ ರಸ್ತೆಯ ಮೇಲೆ ಡೀಸೆಲ್ ಚೆಲ್ಲಲ್ಪಟ್ಟಿದೆ. ಈ ವೇಳೆ ಉಡುಪಿಯತ್ತ ತೆರಳುತ್ತಿದ್ದ ದ್ವಿಚಕ್ರ ವಾಹನಗಳು ಸ್ಕಿಡ್ ಆದ ಘಟನೆ ನಡೆದಿದೆ. ಸುಮಾರು 15ರಿಂದ 20 ರಷ್ಟು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಟ್ರಾಫಿಕ್ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಡೀಸೆಲ್ ಚೆಲ್ಲಿದ ಜಾಗದಲ್ಲಿ ಎಚ್ಚರಿಕೆ ಪಟ್ಟಿ ಹಾಕಲಾಯಿತು. ಉಡುಪಿ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಕಾರದಲ್ಲಿ ಬ್ಲೀಚಿಂಗ್ ಪೌಡರ್ ಬಳಿದು ನೀರು ಹಾಕಿ ರಸ್ತೆಯನ್ನು ಸ್ವಚ್ಛಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ವೇಳೆ ಕೆಲ ಕಾಲ ವಾಹನ ದಟ್ಟನೆ ಉಂಟಾಯಿತು.