ಡಾಲರ್ ಮೇಲೆ ದಿನಾರ್ ವಿಜಯ

ಫೋರ್ಬ್ಸ್ 2023ರ ಲೆಕ್ಕಾಚಾರದ ಮೇಲೆ ಪ್ರಪಂಚದ ಅತಿ ಶಕ್ತಿಯುತ ಚಲಾವಣಾ ಹಣ ಯಾವುದು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವ್ಯಾಪಕತೆಯ ಯುಎಸ್‍ಎ ಡಾಲರ್‍ನದು ಹತ್ತನೆಯ ಸ್ಥಾನ. ಅದರ ಚಲಾವಣಾ ಬಲ ಕುಸಿದಿದೆ ಎನ್ನಬಹುದು. ಹಣ ಕಂಡರೆ ಹೆಣ ಬಾಯಿ ಬಿಡುತ್ತದೆ ಎಂಬುದು ಗಾದೆ. ಇದು ಕಾಮಿಡಿ ಕಿಲಾಡಿಗಳ ಸರಕಿನಂತೆ ಕಂಡರೂ ಲೋಕದ ಕ್ಷುಲ್ಲಕ ಭೀಕರ ಸತ್ಯಗಳಲ್ಲಿ ಒಂದು.

ತಿರುಕನ ಕನಸು ಧನಿಕನಾಗುವುದು. ಆದರೆ ಕಯ್ಯಲ್ಲಿ ನೋಟಿನ ಕಟ್ಟು ಇದ್ದರೂ ಅದಕ್ಕೆ ಏನೂ ಸಿಗದ ದೇಶಗಳೂ ಇವೆ. ಇದರಲ್ಲಿ ಎರಡು ವಿಧಾನ ಕೆಲವು ದೇಶಗಳ ಹಣಕ್ಕೆ ವಿದೇಶದ ಸರಕು ತುಂಬ ದುಬಾರಿ, ಆದರೆ ದೇಶದ ಒಳಗೆ ಅದು ಬಲವಂತವಾದುದೇ ಆಗಿರುತ್ತದೆ. ಮತ್ತೆ ಕೆಲವು ಜಾಗತಿಕ ದುರ್ಬಲ ಹಣ ಆಗಿರುತ್ತವೆ. ವಿಶ್ವದ ಕೊನೆಯ ಸ್ಥಾನದಲ್ಲಿ ಇದೆ ಇರಾನಿನ ರಿಯಲ್. ಒಂದು ಇರಾನಿನ ರಿಯಲ್‍ಗೆ ಸಾವಿರದ ಒಂದು ಡಾಲರ್‍ನಷ್ಟು ಮಾತ್ರ ಮೌಲ್ಯ. ಆದರೆ ಇರಾನ್ ದೇಶದ ಒಳಗೆ ಅದು ಉತ್ತಮ ಖರೀದಿಗೆ ಒದಗುತ್ತದೆ. ರೂಪಾಯಿಗಳಲ್ಲಿ ಜಾಗತಿಕವಾಗಿ ದುರ್ಬಲ ಎನಿಸಿರುವುದು ಇಂಡೋನೇಶಿಯಾದ ರುಪಿಯಾ. ಇದು ದೇಶದ ಒಳಗೆ ಮತ್ತು ಹೊರಗೆ ಎರಡೂ ಕಡೆ ದುರ್ಬಲ ಎನ್ನಲಾಗಿದೆ. ವಿಯೆಟ್ನಾಂ, ಸಿಯೆರಾ ಲಿಯೋನ್, ಉಜ್ಬೆಕಿಸ್ತಾನ್, ಗಿನಿಯಾ, ಪರುಗ್ವೆ, ಲಾವೋಸ್ ಮೊದಲಾದ ದೇಶಗಳ ಹಣಗಳು ಜಾಗತಿಕವಾಗಿ ದುರ್ಬಲ ಚಲಾವಣೆಯ ಹಣ ಎನಿಸಿವೆ.

ಆಫ್ರಿಕಾದ ಉಗಾಂಡಾ ಮೊದಲಾದ ದೇಶಗಳಲ್ಲಿ ನೋಟಿನ ಕಟ್ಟುಗಳನ್ನು ರಸ್ತೆ ಬದಿಯಲ್ಲೇ ವಿನಿಮಯ ಮಾಡುವುದನ್ನು ನೋಡಬಹುದು. ಒಂದು ಕಟ್ಟು ನೋಟು ಕೊಟ್ಟರೆ ಒಂದು ಕಟ್ಟು ಹರಿವೆ ಸೊಪ್ಪು ಸಿಗುತ್ತದೆ. ನಿಮ್ಮ ಸಂಬಳವೂ ಅಲ್ಲೆಲ್ಲ ಲಕ್ಷಗಟ್ಟಲೆ ಇರುತ್ತದೆ. ಆದರೆ ಒಂದು ಸಾವಿರ ಕೊಟ್ಟರೆ ಒಂದು ಲೀಟರ್ ಹಾಲು ಸಿಗುವುದು ಕಷ್ಟ ಎಂದರೆ ನೀವು ಎಷ್ಟು ಉಳಿತಾಯ ಮಾಡಬಹುದು ಎಂಬುದನ್ನು ಲೆಕ್ಕ ಹಾಕಿ. ಕುವೈತ್‍ನ ಹಣ ಮಾತ್ರ ಏಳು ದಶಕಗಳಿಂದ ತನ್ನ ಬಲವನ್ನು ನಿರಂತರ ಉಳಿಸಿಕೊಂಡಿದೆ. ತುಳುನಾಡಿನ ನಗರಗಳ ಕ್ರಿಶ್ಚಿಯನರು ಆಸ್ತಿ ಹೊಂದಿದ್ದರೂ ಹಳ್ಳಿಗಾಡಿನ ಕ್ರಿಶ್ಚಿಯನರು ಬಡವರು; ಆಗಿದ್ದರು. 1970ರ ಹೊತ್ತಿಗೆ ಅವರು ಮೊದಲು ಹೋಗಿದ್ದು ಕುವೈತ್‍ಗೆ. 1980ರ ಹೊತ್ತಿಗೆ ಕುವೈತ್ ಹಣದ ಅವರ ಬಂಗಲೆಗಳು ತುಳುನಾಡಿನ ಊರುಗಳಲ್ಲಿ ಮೇಲೇಳತೊಡಗಿದವು. ಏಕೆಂದರೆ ಒಂದು ಕುವೈತ್ ದಿನಾರ್ ಭಾರತದಲ್ಲಿ 270.23 ರೂಪಾಯಿ ಆಗುತ್ತದೆ. ನೀವು ಕುವೈತ್‍ನಲ್ಲಿ ಲಕ್ಷ ದಿನಾರ್ ಉಳಿಸಿದ್ದರೆ ಭಾರತದಲ್ಲಿ ನೀವು ಕೋಟ್ಯಾಧೀಶರು. ಕರಾವಳಿಯ ಮುಸ್ಲಿಮರು ಸಹ ಕೊಲ್ಲಿ ಜಣಜಣದ ಬಲ ಪಡೆದವರು.

ಭಾರತೀಯರು ಕೆಲವರಿಗೆ ಈಗ ದುಬಾಯಿ ಮಾವನ ಮನೆ. ಅಮೆರಿಕ, ಜರ್ಮನಿ, ಬ್ರಿಟನ್, ಆಸ್ಟ್ರೇಲಿಯಾ ಮೊದಲಾದ ದೇಶಗಳ ಅವರ ಕನಸು ಜೀವಂತ. ಯಾಕೆಂದರೆ ಭಾರತದ ರೂಪಾಯಿ ಜಾಗತಿಕ ಬಲದಲ್ಲಿ ಹಿಂದಿದೆ. ಅದರ ಜಾಗತಿಕ ಬೇಡಿಕೆ ಕೂಡ ಕಡಿಮೆ. ಒಂದು ದೇಶದ ಹಣದ ಶಕ್ತಿಯನ್ನು ಗುರುತಿಸಲು ಕೆಲವನ್ನು ಗಮನಿಸಿ ಲೆಕ್ಕ ಹಾಕಲಾಗುತ್ತದೆ. ಆರ್ಥಿಕ ಬೆಳವಣಿಗೆಯ ದರ, ರಾಜಕೀಯ ಸ್ಥಿರತೆ, ಜಾಗತಿಕವಾಗಿ ಅವರ ಹಣಕ್ಕೆ ಇರುವ ಬೇಡಿಕೆ, ಪ್ರಾಕೃತಿಕ ಸಂಪನ್ಮೂಲದ ಲಭ್ಯತೆ. ಇವು ನಿಮ್ಮ ನಾಡಿನ ಹಣದ ಮೌಲ್ಯ ಮತ್ತು ಲೋಕ ಶಕ್ತಿಯನ್ನು ಲೆಕ್ಕ ಹಾಕಲು ಒದಗುವವುಗಳಾಗಿವೆ. ವಿಶ್ವ ಸಂಸ್ಥೆಯು 180 ದೇಶಗಳ ಚಲಾವಣೆಯ ಹಣವನ್ನು ಮಾನ್ಯ ಮಾಡಿದೆ. ಕೆಲವಕ್ಕೆ ಆ ಭಾಗ್ಯ ಸಿಕ್ಕಿಲ್ಲ. ಭಾರತ ತೊರೆದ ನಿತ್ಯಾನಂದ ಸ್ವಾಮೀಜಿಯ ಕೈಲಾಸ ದೇಶದ ಹಣ ಹೊಸದಾಗಿ ಅವುಗಳಲ್ಲಿ ಒಂದು. ಟೋಕನ್ ಬಿಟ್ಟರೆ ಡಾಲರ್ ಬಳಕೆ ಅವರದು.

ಕುವೈತ್ ದಿನಾರ್, ಬಹರೇನ್ ದಿನಾರ್, ಓಮನಿ ರಿಯಲ್, ಜೋರ್ಡಾನಿಯನ್ ದಿನಾರ್, ಗಿಬ್ರಾಲ್ಟರ್ ಪೌಂಡ್, ಬ್ರಿಟಿಷ್ ಪೌಂಡ್, ಕೇಮನ್ ದ್ವೀಪಗಳ ಡಾಲರ್, ಸ್ವಿಸ್ ಫ್ರಾಂಕ್, ಯೂರೋಪಿನ ಯೂರೋ, ಯುಎಸ್‍ಎಯ ಡಾಲರ್ ಮೊದಲ ಹತ್ತು ಸ್ಥಾನಗಳಲ್ಲಿ ಇರುವ ಜಾಗತಿಕ ಧನ ಭೀಮ ಎನಿಸಿವೆ. ಕುವೈತ್‍ನ ಒಂದು ದಿನಾರ್ 270.23 ರೂಪಾಯಿ ಇಲ್ಲವೇ 3.25 ಡಾಲರ್ ಬಾಳುತ್ತದೆ. ಬಹರೇನ್ ದಿನಾರ್‍ಗೆ 220.4 ರೂಪಾಯಿ ಅಲ್ಲವೇ 2.65 ಡಾಲರ್ ಸಿಗುತ್ತದೆ. ಓಮನಿ ರಿಯಲ್ ಒಂದಕ್ಕೆ 215.84 ರೂಪಾಯಿ ಅಥವಾ 2.60 ಡಾಲರ್ ದಕ್ಕುತ್ತದೆ. ಜೋರ್ಡಾನಿಯನ್ ದಿನಾರ್ ಒಂದು 170.10 ರೂಪಾಯಿ ಇಲ್ಲದಿದ್ದರೆ 1.141 ಡಾಲರ್ ಪಡೆಯುತ್ತದೆ. ಗಿಬ್ರಾಲ್ಟರ್ ಮತ್ತು ಬ್ರಿಟಿಷ್ ಪೌಂಡುಗಳು ಕ್ರಮವಾಗಿ ರೂ. 105.520 ಮತ್ತು 105.54 ರೂಪಾಯಿ ಮೌಲ್ಯ ಹೊಂದಿವೆ. ಎರಡೂ 1.27 ಡಾಲರ್ ಗಳಿಸುತ್ತವೆ. ಇಲ್ಲಿ ಬಂದ ಭಾರತೀಯ ರೂಪಾಯಿಯು ಒಂದು ಡಾಲರ್ ಪಡೆಯಲು 83.10 ರೂಪಾಯಿ ಕೊಡಬೇಕು.

ಹಣ ಎನ್ನುವುದು ನ್ಯಾಯ ಬದ್ಧ ಸಲ್ಲಿಕೆಯ ಮಾನ್ಯತೆಯನ್ನು ದೇಶದಲ್ಲಿ ತಯಾರಾಗುವಾಗಲೆ ಪಡೆಯುತ್ತವೆ. ಆದರೆ ಅದರ ವ್ಯಾಪಕತೆಯು ಬೇರೆ ದೇಶಗಳಲ್ಲಿ ಅದಕ್ಕೆ ಕುದುರುವ ಬೇಡಿಕೆಗಳನ್ನು ಅವಲಂಬಿಸಿದೆ. ಒಂದು ದೇಶದ ಹಣದ ಶಕ್ತಿ ವರ್ಧನೆ ಆಗುವುದು ಅದಕ್ಕೆ ಹೆಚ್ಚೆಚ್ಚು ದೇಶಗಳಿಂದ ಬೇಡಿಕೆ ಹೆಚ್ಚುವುದರಿಂದ. ನಮ್ಮ ವಿದೇಶೀ ವಿನಿಮಯ ಮೀಸಲು, ನಮ್ಮ ಆಮದು ರಫ್ತು ಪ್ರಮಾಣ ಇವುಗಳೆಲ್ಲ ಸಹ ಒಂದು ದೇಶದ ಧನಬಲದ ವಿಶ್ವ ಮೌಲ್ಯವನ್ನು ನಿರ್ಧರಿಸುತ್ತವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕಳೆದ ಅರ್ಧ ಶತಮಾನದಲ್ಲಿ ಅಭಿವೃದ್ಧಿ ಹೊಂದಿದ ದೇಶ ಎನಿಸುತ್ತಿರುವುದು ಚೀನಾ ಮಾತ್ರ. ಆದರೆ ಆ ದೇಶದ ಹಣಕ್ಕೆ ಜಾಗತಿಕವಾಗಿ ಪ್ರಾಮುಖ್ಯತೆ, ಬೇಡಿಕೆ ಬಂದಿಲ್ಲ. ಅದು ರಫ್ತು ಮಾಡಿದಷ್ಟು ಆಮದು ಮಾಡಿಕೊಳ್ಳುತ್ತಿಲ್ಲ. ಜಾಗತಿಕವಾಗಿ ಎರಡನೆಯ ಆರ್ಥಿಕತೆ ಆಗಿರುವ ಚೀನಾದ ಹಣ ಡಾಲರ್ ಎದುರು ಭಾರತಕ್ಕಿಂತ ಬಲಶಾಲಿ. ಆದರೆ ಜಾಗತಿಕ ವ್ಯಾಪಕತೆಯಲ್ಲಿ ಅದು ಭಾರತಕ್ಕಿಂತ ಹಿಂದೆ ಇದೆ ಎಂಬುದು ಒಂದು ಲೆಕ್ಕಾಚಾರ.

\

Related Posts

Leave a Reply

Your email address will not be published.