ಕಾಟಿಪಳ್ಳ ಹುಡುಕಿದ ಕಾಟಿ
ಮಂಗಳೂರಿನ ಕದ್ರಿ, ನೀರುಮಾರ್ಗಗಳ ಹಲವೆಡೆ ಕಾಟಿ ನನ್ನ ಕಾಡು ಎಲ್ಲಿದೆ ಎಂದು ಹುಡುಕಿ ಹೋಗುವುದು ವರದಿಯಾಗಿದೆ. ಮಲೆನಾಡಿನ ಎಲ್ಲ ಕಡೆ ಯಾವ ಬೇಲಿಗಳಿಗೂ ಕಾಟಿ, ಕಾಡುಕೋಣ ಜಗ್ಗುವುದಿಲ್ಲ ಎಂದು ಮಲೆನಾಡಿಗರು ದೂರುತ್ತಿದ್ದಾರೆ.
ಕಾಡುಕೋಣಗಳಲ್ಲಿ ಕಾಡೆಮ್ಮೆ ಹೆಣ್ಣು ಇದ್ದರೂ ಕಾಡುಕೋಣ ಎಂದೇ ಕರೆಯುತ್ತಾರೆ. ಇದು ಪುರುಷ ವರ್ಗದ ಮೇಲಾಳ್ಕೆ ಕಿತಾಪತಿ ಎಂದು ಕೆಲವು ಮಹಿಳಾ ಹೋರಾಟಗಾರ್ತಿಯರು ದೂರಿದ್ದಾರೆ. ಮಲೆನಾಡಿಗರು ನಮ್ಮ ಬೇಲಿಯನ್ನು ಕಾಡುಕೋಣ ಮುರಿಯುತ್ತಿದೆ ಎಂದು ದೂರಿದ್ದಾರೆ. ಇವರು ಬೇಲಿ ಹಾಕಿದ್ದು ನಮ್ಮ ದಾರಿಗೆ, ನಮ್ಮ ನೆಲೆಗೆ ಎಂದು ಕಾಟಿಗಳು ಬೇಲಿ ಮುರಿದು ಪ್ರತಿಭಟನೆ ಮಾಡಿವೆ. ಅದು ಬಿಟ್ಟು ಅವನ್ನು ದೂರುವುದಾದರೂ ಯಾರಲ್ಲಿ? ಬಲವಾದ ಜೀವಿಗಳಾದರೂ ಮೂಕ ಪ್ರಾಣಿಗಳು ಇವು. ಇವುಗಳಲ್ಲಿ ಗುಂಪು ರಕ್ಷಣೆಯ ವ್ಯವಸ್ಥೆ ಇದೆಯಾದರೂ ಪೆÇೀಲೀಸು ವ್ಯವಸ್ಥೆ ಇಲ್ಲ.
ಕಾಟಿಗಳು ಎಂಟರಿಂದ ಹನ್ನೆರಡರ ಗುಂಪಿನಲ್ಲಿ ಓಡಾಡುವ ಜೀವಿಗಳು. ನೀರುಮಾರ್ಗಕ್ಕೆ, ಕದ್ರಿಗೆ ಒಂಟಿ ಕಾಟಿ ಬಂದದ್ದು ಏಕೆ? ಕಾಡು, ಹುಲ್ಲುಗಾವಲು ಹುಡುಕಿಕೊಂಡು ಬರುತ್ತೇನೆ ಎಂದು ಸಂಸಾರಕ್ಕೆ ಹೇಳಿ ಬಂದಿರಬಹುದೆ? ಅಥವಾ ನಮ್ಮ ಅಜ್ಜಿ ಮನೆ ಇದ್ದ ಕಾಟಿಪಳ್ಳ ಎಲ್ಲಿ ಎಂದು ಹುಡುಕುತ್ತ ಬಂದು ದಾರಿ ತಪ್ಪಿರಬಹುದೆ? ನಡೆಯುತ್ತ ನಡೆಯುತ್ತ ನವರಾತ್ರಿ ದಾಟಿ, ದೀಪಾವಳಿ ಕಳೆದು, ಕ್ರಿಸ್ಮಸ್‍ಗಾದರೂ ಇದು ತನ್ನ ಅಜ್ಜಿ ಮನೆ ಸೇರುತ್ತದೆನ್ನುವ ನಂಬಿಕೆ ಇಲ್ಲ.
ಕಾಟಿಪಳ್ಳದ ಕಾಡು, ಹುಲ್ಲು, ಪಳ್ಳ ಎಲ್ಲವೂ ಇಂದು ಇಲ್ಲ. ಪಣಂಬೂರು ಹೊಸ ಮಂಗಳೂರು ಬಂದರು ಮಾಡುವಾಗ ಅಲ್ಲಿಂದ ಒಕ್ಕಲೆಬ್ಬಿಸಿದವರಿಗೆ ಕಾಟಿಗಳನ್ನು ಓಡಿಸಿ ಜಾಗ ಕೊಟ್ಟರು. ಅದು ಕೈ ಬದಲಾಗಿ ಕಾಂಕ್ರೀಟ್ ಕಾಡು ಆದುದರಿಂದ ಇಲ್ಲಿ ಈಗ ಎರಡು ಕಾಲಿನ ಕಾಟಿಗಳು ಮಾತ್ರ ಇವೆ. ನಟಿ ರಾಜಕಾರಣಿ ಜಯಮಾಲ ಬಾಲಕಿಯಾಗಿದ್ದಾಗ ಪಣಂಬೂರಿನ ಅವರಿಗೂ ಇಲ್ಲಿ ಜಾಗ ಸಿಕ್ಕಿತ್ತು. ಅವರ ಕುಟುಂಬ ಅದನ್ನು ಮಾರಿ ಘಟ್ಟ ಹತ್ತಿತ್ತು.
ಒಂದೂವರೆ ಒಂದೂಮುಕ್ಕಾಲು ಮೀಟರ್ ಎತ್ತರ ಬೆಳೆಯುವ ಕಾಟಿಗಳು ಇಳಿಜಾರು ಬೆನ್ನುಭುಜ ಹೊಂದಿರುವುದು ವಿಶೇಷ ಲಕ್ಷಣವಾಗಿದೆ. ಸಹಜವಾಗಿ ಹುಲ್ಲು ಮೇಯುವ ಜಾತಿಯ ಪ್ರಾಣಿಗಳಂತೆ ಹೊಟ್ಟೆ ಡುಮ್ಮಣ್ಣ ಆದರೂ ಬಲಶಾಲಿ ಕೊಂಬಿನ ಪ್ರಾಣಿಗಳು ಇವು.
ಭಾರತೀಯ ಬೈಸನ್, ಗೌರ್ ಎಂದು ಕರೆಯಲ್ಪಡುವ ಇದನ್ನು ಬೋವಿನ್‍ಗಳ ಬಸ್ ಗೌರಸ್ ವರ್ಗದಲ್ಲಿ ಇಟ್ಟಿದ್ದಾರೆ. ಭಾರತದ ಕೆಲವು ಕಡೆ ಕಂಡರೂ ಮುಖ್ಯವಾಗಿ ತೆಂಕಣ ಭಾರತದ ಎಲ್ಲ ಕಾಡು ಗುಡ್ಡೆ ಎಡೆಗಳಲ್ಲಿ ಕಾಟಿ ಇಲ್ಲವೇ ಕಾಡುಕೋಣಗಳು ಇವೆ. ಜನರು ಎಷ್ಟೇ ಪ್ರಯತ್ನ ಪಟ್ಟರೂ ಕಾಟಿ ನಿರ್ವಂಶ ಆಗಲು ಬಿಟ್ಟಿಲ್ಲ. ತಮ್ಮ ಕಾಡು ಆಕ್ರಮಿಸಿದವರ ವಿರುದ್ಧ ಮೊಕದ್ದಮೆ ಹೂಡದಿದ್ದರೂ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಆಗಾಗ ನುಗ್ಗಿ ಬರುತ್ತವೆ. ಮಂಗಳೂರಿಗೆ ಭೇಟಿ ಕೊಟ್ಟ ಕಾಟಿ ಕೂಡ ಒತ್ತುವರಿ ಮಾನವರಿಗೆ ಎಚ್ಚರಿಕೆ ಕೊಡಲು ಬಂದ ಕಾಟಿ ಆಗಿರಬಹುದು.
✍ ಬರಹ: ಪೇರೂರು ಜಾರು