ಅಂಕಿ ಅಂಶದ ಪ್ರಶ್ನೆಗೆ ಸೊನ್ನೆ ಸೊನ್ನೆ ಉತ್ತರ
ಜಿಎಸ್‍ಟಿ ವಂಚನೆಯಲ್ಲಿ ಗುಜರಾತ್ ಮತ್ತು ಮುಂಬಯಿಯ ಗುಜರಾತ್ ಉದ್ಯಮಿಗಳೇ ಮೊದಲ ಸ್ಥಾನದಲ್ಲಿರುವುದು ವರದಿಯಾಗಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರವು ಒಕ್ಕೂಟ ಸರಕಾರವು ತನಗೆ ಮಾಡಿರುವ ಹಣಕಾಸು ವಂಚನೆಯ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ನಡುವೆ ಲೋಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಯವರು ತೆರಿಗೆ ಪಾಲು ನೀಡಿಕೆ ಮತ್ತು ಅನುದಾನ ಕೊಡುವುದರಲ್ಲಿ ಬಿಜೆಪಿಯೇತರ ಸರಕಾರಗಳನ್ನು ಒಕ್ಕೂಟ ಸರಕಾರವು ವಂಚಿಸಿದೆ ಎಂದು ಆಳುವವರನ್ನು ತೀವ್ರವಾಗಿ ಟೀಕಿಸಿದರು. ಈ ಸಂದರ್ಭದಲ್ಲಿ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಅಧೀರ್ ರಂಜನ್ ಜೊತೆಗೆ ಮಾತಿನ ಯುದ್ಧ ನಡೆಸಿದರು. ಇಕ್ಕಡೆ ಆಯಾ ಪಕ್ಷದ ಬಾಯಿ ಪಡೆಯವರು ಜೋರು ಹೋರಾಹೋರಿ ನಡೆಸಿದರು.
ಫಲ ಮಾತ್ರ ಸೊನ್ನೆ. ಏಕೆಂದರೆ ವ್ಯಾಪಾರಂ ದ್ರೋಹ ಚಿಂತನಂ ಎಂಬ ಮಾತಿದೆ. ವ್ಯಾಪಾರಿಗಳು ತೆರಿಗೆ ವಂಚಿಸಿದರೆ ಮಾತ್ರ ಅವರು ಊರಿನ ದೇವಸ್ಥಾನಕ್ಕೆ ದಾನ ನೀಡುವವರಾಗುತ್ತಾರೆ. ಊರಿನಲ್ಲಿ ದಾನ ವೀರ ಶೂರ ಎನಿಸಿಕೊಳ್ಳುವವರು ಆಗುತ್ತಾರೆ. ಸುಂಕ ವಂಚನೆ ಬಹು ಪುರಾತನ ಚಾಳಿ. ಸರಕಾರಕ್ಕೆ 100 ವಂಚಿಸಲು, 20 ರೂಪಾಯಿ ಲಂಚ, 20 ರೂಪಾಯಿ ಹರಕೆ, ಕೊನೆಗೆ ಊರಲ್ಲಿ 20 ರೂಪಾಯಿ ದಾನ ಮಾಡಿದರೆ ನಿಕ್ಕಿ 100ಕ್ಕೆ 40 ರೂಪಾಯಿ ಲಾಭ ಇದನ್ನೆಲ್ಲ ಮಾಡಿಸಲು ಇಂದು ಸಿಎಗಳು ಇದ್ದಾರೆ. ಇವರು ಲೆಕ್ಕ ಪರಿಶೋಧಕರು. ಆದರೆ ವ್ಯಾಪಾರಿಗಳಿಂದ ಶುಲ್ಕ ಪಡೆದು, ಸರಕಾರಕ್ಕೆ ಕಡಿಮೆ ತೆರಿಗೆ ಸಲ್ಲಿಸುವುದು ಹೇಗೆ ಎಂದು ಸಲಹೆ ನೀಡುವವರೂ ಆಗಿದ್ದಾರೆ. ಇಂದು ಇದೆಲ್ಲ
ತೀರಾ ಮುಚ್ಚು ಮರೆಯ ವಿಷಯವೇನೂ ಅಲ್ಲ.
ಜಿಎಸ್‍ಟಿ- ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳು 2023ರ ಏಪ್ರಿಲ್‍ನಿಂದ ಡಿಸೆಂಬರ್ ಕೊನೆಯವರೆಗೆ 14,597 ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಪತ್ತೆ ಹಚ್ಚದವು ಇನ್ನೂ ಹೆಚ್ಚು ಎನ್ನುವುದು ಎಂಕು ಅಂಬೋಣ. ಪತ್ತೆ ಹಚ್ಚಿದ್ದರ ಲೆಕ್ಕವನ್ನು ಸಂಸತ್ತಿನಲ್ಲಿ ಸರಕಾರ ಹೇಳಿದೆ. ತೆರಿಗೆ ವಂಚನೆ ಪತ್ತೆಯಾದವುಗಳಲ್ಲಿ 2,716 ಮಹಾರಾಷ್ಟ್ರದಲ್ಲಿ, 2,589 ಗುಜರಾತ್, 1,123 ಹರಿಯಾಣ, 1,089 ಪಡುವಣ ಬಂಗಾಳಗಳಲ್ಲಿ ಆಗಿದೆ. ಮಹಾರಾಷ್ಟ್ರದ ಉದ್ಯಮಿಗಳು ಗುಜರಾತಿಗಳೇ ಆಗಿದ್ದಾರೆ. ಆಂಧ್ರ ಮೊದಲಾದ ರಾಜ್ಯಗಳಲ್ಲಿ ನಕಲಿ ಇನ್‍ವಾಯ್ಸ್ ಸೃಷ್ಟಿಸಿ ಇನ್‍ಪುಟ್ ಟ್ಯಾಕ್ಸ್ ಕ್ರೆಡಿಟ್ ಮೂಲಕ ಜಿಎಸ್‍ಟಿ ವಂಚನೆ ಮಾಡುವ ಜಾಲವು ದೇಶದೆಲ್ಲೆಡೆಗೆ ಹರಡಿತ್ತು. ಅದರ ಗುಟ್ಟು ರಟ್ಟು ಮಾಡಲಾಗಿದೆ ಎಂದು ಹೇಳಲಾಗಿದೆ. ತೆರಿಗೆ ಅಧಿಕಾರಿಗಳು ಚಾಪೆ ಕೆಳಗೆ ನುಸುಳುವವರಾದರೆ ತೆರಿಗೆ ವಂಚಕರು ರಂಗೋಲಿಯ ಕೆಳಗೆ ನುಸುಳುವವರಾಗಿದ್ದಾರೆ.
ವಂಚನೆಯು ಪುರಾಣೋಕ್ತ, ನಾನಾ ರೂಪ ಧಾರಣೆಯಿಂದ ತೊಡಗಿ ತುಳಸಿಯನ್ನು ಕೆಡಿಸಿದ ದೈವೀಕ ಅತ್ಯಾಚಾರದಿಂದ ತೊಡಗಿ, ಹುಡುಗಿಯಾಗಿ ಬಂದು ಅಸುರರಿಗೆ ಅಮೃತ ದಕ್ಕದಂತೆ ಮೋಸ ಮಾಡುವವರೆಗೆ ಇದು ಹಾಸುಹೊಕ್ಕು. ಇತಿಹಾಸದಲ್ಲಿ ಹೆಜ್ಜೆ ಹೆಜ್ಜೆಗೆ ಇವರು ಸಿಗುತ್ತಾರೆ. ಕಾಮರಾಯ, ಮಲ್ಲಪ್ಪ ಶೆಟ್ಟಿ, ಮೀರ್ ಸಾದಿಕ್ ಎಂದು ಪಟ್ಟಿ ಬಹಳ ಉದ್ದವಾದುದು. ಕರ್ನಾಟಕದ ಈಗಿನ ಸರಕಾರದ ವಾದವೆಂದರೆ ನಮ್ಮ ಪ್ರಯತ್ನದಿಂದ ಬಂದ ಅಮೃತ ತೆರಿಗೆಯನ್ನು ಮೋದಿಯವರು ನಿರ್ಮಲಾ ಸೀತಾರಾಮನ್‍ರ ಮೂಲಕ ಬಿಜೆಪಿ ರಾಜ್ಯಗಳಿಗೆ ಹಂಚಿ ಬಿಜೆಪಿಯೇತರ ರಾಜ್ಯಗಳಿಗೆ ಇಂದಪತ್ ಮಾಡಿದ್ದಾರೆ ಎನ್ನುವುದಾಗಿದೆ. ಲೋಕ ಸಭೆಯಲ್ಲಿ ಹಣ ಹಂಚಿಕೆ, ಅನುದಾನ ನೀಡಿಕೆಯಲ್ಲಿ ಪಟ್ಟಭದ್ರ ಹಿತಾಸಕ್ತಿ ಕೆಲಸ ಮಾಡಿ, ಬಿಜೆಪಿಯೇತರ ಆಡಳಿತದ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದರು ಅಧೀರ್ ರಂಜನ್ ಚೌಧರಿ ಅವರು. ಅದಕ್ಕೆ ನಿರ್ಮಲಾ ಸೀತಾರಾಮನ್ ಅವರು ಇದು ಪಟ್ಟಭದ್ರ ಹಿತಾಸಕ್ತಿಯ ಪರ ಹೇಳಿಕೆಯಾಗಿದೆ. ಕೆಲವು ರಾಜ್ಯ ಸರಕಾರಗಳು ದುಂದು ವೆಚ್ಚ ಮಾಡಿವೆ ಎಂದರು.
ನಿರ್ಮಲಾ ಸೀತಾರಾಮನ್ ತಮಿಳರಾದರೂ ಕನಾಟಕದಿಂದ ರಾಜ್ಯ ಸಭೆಗೆ ಹೋದವರು. ಈಗ ಕರ್ನಾಟಕವೇ ಬಿಜೆಪಿಯೇತರ ಸರಕಾರಗಳ ಪ್ರತಿಭಟನೆಯ ನೇತೃತ್ವ ವಹಿಸಿದಂತೆ ಕಾಣುತ್ತದೆ. ಇಲ್ಲಿ ಒಂದು ಚೋದ್ಯವನ್ನು ಕಾಣಬಹುದು. ಇಷ್ಟು ಲಕ್ಷ ರೂಪಾಯಿ ವಂಚಿಸಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಕಿ ಅಂಶ ಹೇಳುತ್ತಿದ್ದಾರೆ. ವಂಚಿಸಿಲ್ಲ ಎಂಬ ನಿರ್ಮಲಾ ಸೀತಾರಾಮನ್ ಇಲ್ಲವೇ ಬಿಜೆಪಿಯವರ ಮಾತಿನಲ್ಲಿ ಅಂಕಿಗಳೇ ಇಲ್ಲ. ಹಣಕಾಸಿನ ವಿಷಯದಲ್ಲಿ ಹೇಳಲು ಅಂಕಿಗಳು ಇಲ್ಲ ಎಂದರೆ ಏನರ್ಥ? ಸಿದ್ದರಾಮನಹುಂಡಿ ಸಿದ್ದರಾಮಯ್ಯನವರ ಪ್ರಕಾರ ಕಳೆದ ಐದು ವರುಷಗಳಿಂದ ಮೋದಿಯವರು ಮತ್ತು ನಿರ್ಮಲಾ ಸೀತಾರಾಮನ್‍ರವರಿಂದ ಕರ್ನಾಟಕಕ್ಕೆ 1.87 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ರಾಜ್ಯದ 100 ರೂಪಾಯಿ ಕೊಡುಗೆಯಲ್ಲಿ ರಾಜ್ಯಕ್ಕೆ 12 ರೂಪಾಯಿ ಮಾತ್ರ ಹಿಂದಕ್ಕೆ ಬರುತ್ತಿದೆ ಎಂಬುದು ಸತ್ಯ ಲೆಕ್ಕ. ಇನ್ನು ರಾಜ್ಯ ಬಿಜೆಪಿಯ ವಿಜಯೇಂದ್ರರು ರಾಜ್ಯದ ರಾಜಸ್ವ ಕೊರತೆ ಏಕೆ ಎನ್ನುತ್ತಿದ್ದಾರೆ. ಮೊದಲು ಸಿದ್ದರಾಮಯ್ಯನವರ ಖಚಿತ ಅಂಕಿಗಳಿಗೆ ಉತ್ತರ ಸಿಗದಿದ್ದರೆ ಅನುಮಾನ ಯಾರತ್ತ ತಿರುಗುತ್ತದೆ ಎಂಬುದನ್ನು ಬಿಜೆಪಿಯವರು ತಿಳಿದಿರಬೇಕು.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಇದೇ ಅಂಕಿ ಅಂಶಗಳನ್ನು ಹೇಳುತ್ತ ಒಕ್ಕೂಟ ಸರಕಾರದ ಈ ಮೋಸವನ್ನು ಎಷ್ಟು ದಿನ ಸಹಿಸಿಕೊಳ್ಳುವುದು ಎಂದಿದ್ದಾರೆ. ಇದಕ್ಕೆ ಬೊಮ್ಮಾಯಿ, ಅಶೋಕ್ ಮೊದಲಾದ ಬಿಜೆಪಿ ನಾಯಕರ ಉತ್ತರ ಹೇಗಿದೆ ನೋಡಿ. ರಾಜ್ಯ ಕಾಂಗ್ರೆಸ್ ಎಂಟು ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡಿದೆ. ರಾಜಕೀಯ ಸ್ಟಂಟ್ ಮಾಡುತ್ತಿದ್ದಾರೆ ಇತ್ಯಾದಿ. ಇಲ್ಲೂ ಹಣದ ಲೆಕ್ಕ ಯಾಕಿಲ್ಲ ಎಂದೇ ಕೇಳಬೇಕಾಗುತ್ತದೆ. ಈ ಉತ್ತರಗಳು ಎಂಕು ಪಣಂಬೂರಿಗೆ ಹೋಗಿ ಬಂದಷ್ಟೇ ಪೇಲವವಾಗಿವೆ. ರಾಜ್ಯಕ್ಕೆ ರಾಜ್ಯದಿಂದಲೇ ಜಮೆಯಾದ ತೆರಿಗೆಯಿಂದಲೇ ಪಾಲು, ಅನುದಾನ, ನೆರವು ಬರಬೇಕು. ಏಕೆಂದರೆ ರಾಜ್ಯಗಳು ಸೇರಿದರೆ ರಾಷ್ಟ್ರ ಹೊರತು, ರಾಷ್ಟ್ರಗಳನ್ನು ಒಡೆದು ರಾಜ್ಯವಲ್ಲ. ಸಂಸದ ಡಿ. ಕೆ. ಸುರೇಶ್ ಅವರು ಹೀಗೆಯೇ ಒಕ್ಕೂಟ ಸರಕಾರವು ವಂಚಿಸಿದರೆ ತೆಂಕಣ ರಾಜ್ಯಗಳವರು ಪ್ರತ್ಯೇಕತೆಯ ಧ್ವನಿ ಎತ್ತಬೇಕಾಗಿ ಬರಬಹುದು ಎಂದರು.
ಇಲ್ಲಿನ ರಾಜ್ಯಗಳ ನ್ಯಾಯದ ಕೋರಿಕೆಯ ಸ್ವರ ಇದೆ. ಅದರ ಗುರುತೇ ಕೆಲವರಿಗೆ ಆಗುತ್ತಿಲ್ಲ ಎಂದರೆ ಏನರ್ಥ? ರಾಜ್ಯದಲ್ಲಿ ಕಳೆದ 15 ವರುಷಗಳಿಂದ ಸಂಸದರಾಗಿ ಬಿಜೆಪಿಯವರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರುತ್ತಿದ್ದಾರೆ. ಆದರೆ ಸಂಸದರ ನಿಧಿಯಿಂದ ಆಚೆಗೆ ಈ ಸಂಸದರು ರಾಜ್ಯದ ಹಿತಾಸಕ್ತಿಯ ಬಗೆಗೆ ಲೋಕ ಸಭೆಯಲ್ಲಿ ಮಾತನಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗಲೂ ಸಂಸತ್ತಿನಲ್ಲಿ ಬಾಯಿ ತೆರೆದಿಲ್ಲ ಎನ್ನುವುದನ್ನು ಅವರು ಒಪ್ಪಿಕೊಳ್ಳಬೇಕು. ಸಿದ್ದರಾಮಯ್ಯನವರ ಪ್ರಕಾರ 2017ರಿಂದ ರಾಜ್ಯಕ್ಕೆ ತೆರಿಗೆ ಪಾಲು ನೀಡಿಕೆಯಲ್ಲಿ 1,87,867 ಕೋಟಿ ರೂಪಾಯಿ ಅನ್ಯಾಯವಾಗಿದೆ. ಬಡಗಣ ಭಾರತದವರೂ ಅಭಿವೃದ್ಧಿ ಹೊಂದಬೇಕು. ಆದರೆ ಬಿಜೆಪಿಯೇತರ ರಾಜ್ಯಗಳಿಗೆ ವಂಚಿಸದೆಯೇ ಅಲ್ಲಿಗೂ ಹೆಚ್ಚುವರಿ ಹಣ ನೀಡಬೇಕು. ಅದು ಆಳುವವರ ಚತುರತೆ ಆಗುತ್ತದೆ ಎಂದೂ ಸಿದ್ದರಾಮಯ್ಯನವರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಳೆದ ವಾರ ಸರಕಾರದ ಹಣ ವೆಚ್ಚ ಮಾಡಲು 200 ಗುಂಪು ಮದುವೆ ಮಾಡಲಾಯಿತು. ಇದರಲ್ಲಿ ವರ ಇಲ್ಲದೆಯೇ ಮದುವೆ, ಬಾಡಿಗೆ ನಾಟಕದ ನಟ ನಟಿಯರ ಮದುವೆ ಎಮದೆಲ್ಲ ನಡೆದಿದೆ. ಗುಂಪು ಮದುವೆಯಲ್ಲಿ ಉಂಡವನೆ ಜಾಣ. ಇವು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಡೆಯುವ ನೂರಾರು ಅಂದಾದುಂದಿಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾದ ಒಂದು. ಇಂತಾದ್ದಕ್ಕೆಲ್ಲ ತೆಂಕಣದ ರಾಜ್ಯಗಳ ತೆರಿಗೆಯ ಪಾಲುಗಳನ್ನು ನೀಡುವುದು ಅಕ್ಷಮ್ಯ ಎಂದು ಕೂಡ ಹೇಳಬಹುದು.
ಬರಹ: ಪೇರೂರು ಜಾರು