ಜಿ ಎಸ್‍ ಟಿ ಉಕ್ಕಿಸಿದರೂ ಕರ್ನಾಟಕಕ್ಕೆ ಕತ್ತರಿ ಭಾಗ್ಯ

ಅರವಿಂದ ಪನಗರಿಯ ಅವರು 16ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ ಕರ್ನಾಟಕದ ತೆರಿಗೆ ಪಾಲು ಕಡಿಮೆ ಆಗಿರುವ ಅಂಶ ಹೊರ ಬಿದ್ದಿದೆ. ಅದೇ ವೇಳೆ ಗುಜರಾತಿಗೆ ಹಣಕಾಸು ವರುಷದ ತೆರಿಗೆ ಪಾಲು 51 ಶೇಕಡಾ ಹೆಚ್ಚು ಆಗಿರುವುದು ದೇಶವನ್ನೇ ಕಕ್ಕಾಬಿಕ್ಕಿಗೊಳಿಸಿದೆ.
ಕಳೆದ ಕೆಲವು ದಶಕಗಳಿಂದ ಗುಜರಾತಿಗಳು ವಿದೇಶಗಳಲ್ಲಿ ಹೋಗಿ ನೆಲೆಸುವುದು ಅಧಿಕವಾಗಿದೆ. ಕಳೆದೊಂದು ದಶಕದಿಂದ ದೇಶದಲ್ಲೇ ಅತಿ ಹೆಚ್ಚು ಗುಜರಾತ್ ಉದ್ಯಮಿಗಳು ಬ್ಯಾಂಕುಗಳಿಗೆ ಟೋಪಿ ಹಾಕಿ ಪರಾರಿಯಾಗಿದ್ದಾರೆ. ಸಂವಿಧಾನದ 371ನೇ ವಿಧಿಯಂತೆ ಮಹಾರಾಷ್ಟ್ರ ಗುಜರಾತಿನ ಕೆಲವು ಪ್ರದೇಶಗಳ ಕೈಗಾರಿಕಾಭಿವೃದ್ಧಿಗೆ ವಿಶೇಷ ಸ್ಥಾನಮಾನದ ಅನುಕೂಲ ಇದೆ. ಇದನ್ನು ಹೆಚ್ಚು ಬಳಸಿಕೊಂಡವರು ಗುಜರಾತಿಗಳಾಗಿದ್ದಾರೆ. ಈಗ ದೇಶದ ತೆರಿಗೆ ಪಾಲಿನಲ್ಲಿ ಕೂಡ ಗುಜರಾತಿಗೆ ದೊಡ್ಡ ಪಾಲು ಕೊಟ್ಟಿರುವುದು ಕೆಲವರು ಅದನ್ನು ದುರುಪಯೋಗಿಸಲು ಅನುಕೂಲವಾಗಲಿ ಎಂದು ಪ್ರತಿಪಕ್ಷಗಳು ಟೀಕಿಸುತ್ತಿವೆ.

ಈ ಬಗೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದು ತೆಂಕಣ ಭಾರತಕ್ಕೆ ಒಕ್ಕೂಟ ಸರಕಾರವು ರಾಜಕೀಯವಾಗಿ ಮಾಡುತ್ತಿರುವ ಮೋಸ ಎಂದು ಟೀಕಿಸಿದ್ದಾರೆ. ಕರ್ನಾಟಕದಿಂದ ಒಕ್ಕೂಟ ಸರಕಾರಕ್ಕೆ ಸಂಗ್ರಹವಾಗುವ ತೆರಿಗೆಯಲ್ಲಿ ಪ್ರತಿ ರೂಪಾಯಿಗೆ 15 ಪೈಸೆ ಮಾತ್ರ ರಾಜ್ಯಕ್ಕೆ ವಾಪಾಸಾಗುತ್ತಿದೆ. ಕರ್ನಾಟಕವು ಜಿಎಸ್‍ಟಿ ಸಂಗ್ರಹದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿ ಇದೆ. ಆದರೆ ತೆರಿಗೆ ಪಾಲಿನಲ್ಲಿ ಕೊನೆಯ ಒಂದೆರಡರ ಜೊತೆಗೆ ಇದೆ ಎನ್ನುವುದು ಕೂಡ ಬೆಳಕಿಗೆ ಬಂದಿದೆ.

ತೆರಿಗೆ ಹಂಚಿಕೆ ಆಗುವಾಗ ಹಿಂದುಳಿದಿರುವ ಪ್ರದೇಶಕ್ಕೆ ಸ್ವಲ್ಪ ವಿಶೇಷ ಗಮನ ಕೊಡಬೇಕು ಎನ್ನುವುದು ಪುರಾತನ ಕಾಲದಿಂದಲೂ ಇರುವ ಒಂದು ಅಲಿಖಿತ ನಿಯಮ. ಆದರೆ ಭಾರತದ ಹಿಂದುಳಿದ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶಗಳಿಗೂ ತೆರಿಗೆ ಪಾಲು ಕಡಿಮೆ ಕೊಡಲಾಗುತ್ತಿದೆ. ಆ ರಾಜ್ಯಗಳಿಂದ ಜಿಎಸ್‍ಟಿ ಸಂಗ್ರಹ ಕಡಿಮೆ ಎನ್ನುವುದನ್ನು ಇದಕ್ಕೆ ಕಾರಣ ನೀಡಬಹುದಾದರೂ ಅಲ್ಪಸಂಖ್ಯಾಕರಿಗೆ ಲಾಭ ನಿರಾಕರಿಸುವ ಒಳ ಹುನ್ನಾರವನ್ನು ಬಿಹಾರ, ಉತ್ತರ ಪ್ರದೇಶದ ಬಿಜೆಪಿ ಹೊರತಾದ ರಾಜಕೀಯ ಪಕ್ಷಗಳು ಬೆಟ್ಟು ಮಾಡಿ ತೋರಿಸುತ್ತವೆ.


15ನೇ ಹಣಕಾಸು ಆಯೋಗದ ಲೆಕ್ಕದಂತೆ ಕಳೆದೆರಡು ವರುಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ತೆರಿಗೆ ಪಾಲು 89,574 ಕೋಟಿ ರೂಪಾಯಿ ಎಂದು ಗೊತ್ತು ಮಾಡಲಾಗಿತ್ತು. ಆದರೆ ಒಕ್ಕೂಟ ಸರಕಾರವು ಅದಕ್ಕೂ ಸೆಸ್ ಎನ್ನುವ ಉಪ ತೆರಿಗೆ ಸಾಕಷ್ಟು ಹಾಕಿ ಒಂದಷ್ಟು ಕಡಿಮೆ ಕೊಡುತ್ತದೆ. ರಾಜ್ಯಗಳಿಂದ ತೆರಿಗೆಯ ಆದಾಯ ಬಾಚಿಕೊಳ್ಳುವ ಕೇಂದ್ರ ಸರಕಾರವು ಅದರಲ್ಲಿ ಪಾಲು ಕೊಡುವಾಗ ಉಪ ತೆರಿಗೆ ಹಾಕುವುದನ್ನು ಬಹಳಷ್ಟು ರಾಜ್ಯ ಸರಕಾರಗಳು ಟೀಕಿಸಿವೆ.

2015- 16ರಲ್ಲಿ ಕರ್ನಾಟಕದ ತೆರಿಗೆ ಪಾಲು 24,789 ಕೋಟಿ ರೂಪಾಯಿ ಇತ್ತು. ರಾಜ್ಯದಿಂದ ತೆರಿಗೆ ಸಂಗ್ರಹ ಅಧಿಕಗೊಂಡುದರಿಂದ 2019- 20ರಲ್ಲಿ ರಾಜ್ಯಕ್ಕೆ ತೆರಿಗೆ ಪಾಲು 39,806 ಕೋಟಿ ರೂಪಾಯಿ ಸಿಕ್ಕಿತು. 2023- 24ರಲ್ಲಿ ಬೆಳವಣಿಗೆ ದರ 10 ಶೇಕಡಾಕ್ಕೂ ಹೆಚ್ಚು ಏರಿ ಕರ್ನಾಟಕದಿಂದ ಕೇಂದ್ರದ ಬೊಕ್ಕಸ ಸೇರಿದ್ದು 58,132 ಕೋಟಿ ರೂಪಾಯಿ. ಆದರೆ ಕರ್ನಾಟಕದ ಪಾಲು ಗೊತ್ತು ಮಾಡಿರುವುದು 37,252 ಕೋಟಿ ರೂಪಾಯಿ.
ಜಿಎಸ್‍ಟಿ ಸಂಗ್ರಹ ರಾಜ್ಯದಲ್ಲಿ ಹೆಚ್ಚು ಆದುದಕ್ಕೆ ರಾಜ್ಯಕ್ಕೆ ಹೆಚ್ಚು ತೆರಿಗೆ ಪಾಲು ಸಿಗಬೇಕಾಗಿದ್ದುದು ನ್ಯಾಯ. ಆದರೆ 2019ರಲ್ಲಿ ಕೊಟ್ಟ ಪಾಲಿಗಿಂತಲೂ ಕಡಿಮೆ ಮಾಡಲಾಗಿದೆ ಎಂದರೆ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ನೀತಿ ಒಕ್ಕೂಟ ಸರಕಾರದ್ದು ಎಂಬ ಟೀಕೆಯನ್ನು ಅಲ್ಲಗಳೆಯಲಾಗದು. 2019- 20ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇತ್ತು; ಈಗ ಇಲ್ಲ!

14ನೇ ಹಣಕಾಸು ಆಯೋಗದ ಕಾಲದಲ್ಲಿ ರಾಜ್ಯದ ಭಾಗಿಸಬಹುದಾದ ತೆರಿಗೆ ಪಾಲು 4.71 ಶೇಕಡಾ ಇದ್ದುದು 15ನೇ ಹಣಕಾಸು ಆಯೋಗದ ಅವಧಿಯಲ್ಲಿ 3.64 ಶೇಕಡಾಕ್ಕೆ ಇಳಿದಿದೆ. ಇನ್ನು ಅದು ಮೂರು ಮುಟ್ಟಿ ಮೂರಾಬಟ್ಟೆ ಆಗುವ ದಿನ ದೂರವಿಲ್ಲ. ಗುಜರಾತಿಗೆ ಭಾಗಿಸಬಹುದಾದ ತೆರಿಗೆ ಪಾಲು ಪ್ರಮಾಣವು ಕಳೆದ ಬಾರಿಗಿಂತ 51 ಶೇಕಡಾದಷ್ಟು ಹೆಚ್ಚು ಆದುದೇಕೆ ಎಂದು ಪ್ರಧಾನಿ ಉತ್ತರಿಸಬೇಕು ಎನ್ನುವುದು ರಾಜ್ಯದ ಮುಖ್ಯಮಂತ್ರಿಯವರ ಪ್ರಶ್ನೆಯಾಗಿದೆ.

ತೆಂಕಣದ ರಾಜ್ಯಗಳಿಂದ ಹೆಚ್ಚಿನ ಜಿಎಸ್‍ಟಿ ಒಕ್ಕೂಟ ಸರಕಾರದ ಬೊಕ್ಕಸಕ್ಕೆ ಹೋಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದರಲ್ಲಿ ತೆಂಕಣ ರಾಜ್ಯಗಳಿಗೆ ಪ್ರಾಮಾಣಿಕ ಹಂಚಿಕೆ ಆಗುತ್ತಿಲ್ಲ. ಕೆಲವು ರಾಜ್ಯಗಳಿಗೆ ಅನ್ಯಾಯವಾಗಿ ಹೆಚ್ಚು ಕೊಡಲಾಗುತ್ತಿದೆ ಎನ್ನಲಾಗಿದೆ.


ಜಿಎಸ್‍ಟಿ – ಸರಕು ಮತ್ತು ಸೇವಾ ತೆರಿಗೆಯನ್ನು 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಂಗ್ರಹಿಸಲಾಗುತ್ತದೆ. ಅದರಲ್ಲಿ 40 ಶೇಕಡಾಕ್ಕೆ ಕಡಿಮೆ ಇಲ್ಲದಂತೆ ರಾಜ್ಯದ ಪಾಲು ಕೊಡಬೇಕು. ಆದರೆ ಕೇಂದ್ರವು ರಾಜ್ಯದಲ್ಲಿ ತಾನು ಮಾಡುವ ಅಭಿವೃದ್ಧಿಗೆ ಒತ್ತು ನೀಡುವುದರಿಂದ ರಾಜ್ಯಕ್ಕೆ ಕೊಡುವ ಪಾಲು ಹಳ್ಳ ಹಿಡಿಯುತ್ತಿದೆ. ಕೊರೋನಾ ಕಾಲದಲ್ಲಿ ಕೆಲವು ರಾಜ್ಯಗಳಲ್ಲಿ ಜಿಎಸ್‍ಟಿ ಸಂಗ್ರಹ ಇಳಿದಿತ್ತು. ಅದೂ ಒಂದು ನೆಪ. ಜಿಎಸ್‍ಡಿಪಿ- ರಾಜ್ಯಗಳ ಒಟ್ಟು ಉತ್ಪಾದನಾ ಪ್ರಮಾಣದ 3 ಶೇಕಡಾದಷ್ಟು ಮಾತ್ರ ಜಿಡಿಪಿ ಹೆಚ್ಚಿನ ರಾಜ್ಯಗಳದ್ದು. ಇದನ್ನು ಗಮನಿಸಿದರೂ ಕರ್ನಾಟಕದ ಜಿಡಿಪಿ ಸಂಗ್ರಹ ಹೆಚ್ಚು ಇದ್ದು, ಅದರಲ್ಲಿ ವಾಪಾಸು ಪಾಲು ಮಾತ್ರ ಕಡಿಮೆ ಇರುವುದನ್ನು ನ್ಯಾಯ ಎಂದು ಪರಿಗಣಿಸಲಾಗದು.

ಸಂವಿಧಾನದ 280ನೇ ವಿಧಿಯಂತೆ ಹಣಕಾಸು ಆಯೋಗವನ್ನು ರಚಿಸಲಾಗುತ್ತದೆ. 1951ರಲ್ಲಿ ಮೊದಲ ಹಣಕಾಸು ಆಯೋಗ ರಚನೆ ಆರಂಭಗೊಂಡಿದೆ. 15ನೇ ಹಣಕಾಸು ಆಯೋಗ 2017ರಲ್ಲಿ ರಚನೆ ಕಂಡಿತ್ತು. ಈಗ 16ನೇ ಫೈನಾನ್ಸ್ ಕಮಿಶನ್ ರಚನೆಯಾಗಿದೆ. ಹಣಕಾಸು ಆಯೋಗದ ಪ್ರಧಾನ ಕೆಲಸವು‌ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳ ಹಣಕಾಸು ಹಂಚಿಕೆಯಲ್ಲಿ ಸಮನ್ವಯ ಸಾಧಿಸುವುದಾಗಿದೆ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.