ಹಿಮೋಫಿಲಿಯಾ ಎಂಬ ಪ್ರೀತಿಯ ನೆತ್ತರು

ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಈಗ ರಕ್ತ ಪ್ರೀತಿಯ ಹಿಮೋಫಿಲಿಯಾ ಸಮಗ್ರ ಕಾಳಜಿ ಕೇಂದ್ರ ಆರಂಭವಾಗಿದೆ. ಈಗ ಚುನಾವಣಾ ಕಾಲವಾದುದರಿಂದ ಈಗ ರಕ್ತ ಸಂಬಂಧ ಕಾಣಿಸದ ಜಿದ್ದಾಜಿದ್ದಿನ ಹೋರಾಟವೇ ಎಲ್ಲೆಡೆ ಕಾಣಿಸುತ್ತಿದೆ. ಮಿಶನರಿಗಳು, ಕ್ರಿಶ್ಚಿಯನರುಗಳು ಇಲ್ಲೆಲ್ಲ ಆಸ್ಪತ್ರೆಗಳನ್ನು ಆರಂಭಿಸಿದಾಗ ಇದ್ದ ಬರೇ ಸೇವೆ ಎಂಬುದು ಈ ಕಾಲಕ್ಕೆ ನಡೆಯದ ನಾಣ್ಯವೇ ಸರಿ. ಹಿಮೋಫಿಲಿಯಾ ಎನ್ನುವುದನ್ನು ನೆತ್ತರೊಸರು ಸಮಸ್ಯೆ ಎನ್ನಬಹುದು; ರಕ್ತಸ್ರಾವ ಎಂದೂ ಹೇಳುತ್ತಾರೆ.


ಹಿಮೋಫಿಲಿಯಾ ಎನ್ನುವುದು ಸಾಮಾನ್ಯವಾಗಿ ತಿಳಿದಿರುವಂತೆ ಅದು ಒಂದು ಕಾಯಿಲೆಯಲ್ಲ. ಅದು ದೇಹದ ಒಂದು ಕೊರತೆಯಾಗಿದೆ. ವಿಚಿತ್ರ ಊನಾಂಗ ಸ್ಥಿತಿಯಾಗಿದೆ. ಹಾಗಾದರೆ ಹಿಮೋಫಿಲಿಯಾ ಎಂದರೆ ಏನು? ನಿಮ್ಮ ದೇಹದ ಯಾವುದಾದರೂ ಭಾಗದಲ್ಲಿ ಒಂದು ಗಾಯವಾದರೆ ಕೂಡಲೆ ನೆತ್ತರಿನ ಪ್ಲೇಟೆಲೆಟ್ಸ್ ಎಂಬ ಕಿರುಬಿಲ್ಲೆಗಳು ಅಲ್ಲಿಗೆ ಧಾವಿಸಿ ಬಂದು ಗಾಯಕ್ಕೆ ಅಡ್ಡವಾಗಿ ಒಂದು ಬಲೆಯನ್ನು ಹೆಣೆಯುತ್ತದೆ. ಅಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ನೆತ್ತರು ನಷ್ಟ ಉಂಟಾಗುವುದಿಲ್ಲ.


ಆದರೆ ಹಿಮೋಫಿಲಿಯಾ ತೊಂದರೆಯಲ್ಲಿ ನೆತ್ತರ ಕಿರುಬಿಲ್ಲೆಗಳು ಇಲ್ಲದಿರುವುದು ಇಲ್ಲವೇ ಕಾರ್ಯವೆಸಗದ ಕಾರಣಕ್ಕೆ ನೆತ್ತರು ಹೆಪ್ಪುಗಟ್ಟುವುದಿಲ್ಲ. ಆದ್ದರಿಂದ ಗಾಯದಿಂದ ಒಂದೇ ಸಮನೆ ನೆತ್ತರು ಸೋರಿಹೋಗಿ ದೇಹದಲ್ಲಿ ನೆತ್ತರು ನಷ್ಟಕ್ಕೆ ಕಾರಣವಾಗುತ್ತದೆ. ಸ್ವಲ್ಪ ದೊಡ್ಡ ಕಾಯಿಲೆ ಆಗಿದ್ದಲ್ಲಿ ಈ ನೆತ್ತರೊಸರು ತೊಂದರೆಯು ಬಾಧಿತರಿಗೆ ಸಾವು ಕುಣಿಕೆಯೂ ಆಗಬಹುದು. ಆಧುನಿಕ ಚಿಕಿತ್ಸೆಯು ನಾನಾ ವಿಧದಲ್ಲಿ ಅದಕ್ಕೆ ಪರಿಹಾರವನ್ನು ಕಂಡು ಹಿಡಿದಿರುವುದೇ ಇಂದಿನ ಬೆಳವಣಿಗೆಯಾಗಿದೆ.


ರಕ್ತಕೊರೆ ಇಲ್ಲವೇ ರಕ್ತಹೀನತೆ ಎನ್ನುವುದು ಬೇರೆ. ಅದರಲ್ಲಿ ಹಿಮೋಗ್ಲೋಬಿನ್ ಎಂದರೆ ಕೆಂಪು ರಕ್ತಕಣಗಳ ಕೊರತೆ ಕಂಡುಬರುತ್ತದೆ. ನೆತ್ತರೊಸರುವಿನಲ್ಲಿ ಪ್ಲೇಟೆಲೆಟ್ಸ್ ಕೊರತೆ ಇಲ್ಲವೇ ಅದರ ಕಜ್ಜಕೊರೆ ಕಂಡುಬರುತ್ತದೆ. ಎರಡೂ ಕೂಡ ಕೂಡಲೆ ಗಮನಿಸದಿದ್ದರೆ ಪ್ರಾಣಾಂತಿಕವಾದುದೇ ಆಗಿದೆ. ಹಿಮೋಫಿಲಿಯಾ ಎನ್ನುವುದು ಗ್ರೀಕ್ ಭಾಷೆಯ ಹಿಮೋ ಇಲ್ಲವೇ ಹೈಮಾ ಮತ್ತು ಫಿಲಿಯಾ ಎಂಬ ಎರಡು ಶಬ್ದಗಳಿಂದ ಬಂದಿದೆ. ಹೈಮಾ ಎಂದರೆ ನೆತ್ತರು ಮತ್ತು ಫಿಲಿಯಾ ಎಂದರೆ ಪ್ರೀತಿ.


ಹಿಮೋಫಿಲಿಯಾ ದೇಹದ ಕೊರತೆಯನ್ನು ಯಾರೂ ಪ್ರೀತಿಸದಿದ್ದರೂ ಅದಕ್ಕೆ ಪ್ರೀತಿಯ ನೆಂಟು ಇದೆ. ಏಕೆಂದು ಬಲ್ಲಿರಾ? ಇದು ಬಹುತೇಕ ವಂಶಪರಂಪರೆಯದಾಗಿ ಬರುತ್ತದೆ. ಹಾಗಾಗಿ ಪ್ರೀತಿಪಾತ್ರರೊಳಗೆ ಬರುವುದರಿಂದ ಇದನ್ನು ರಕ್ತಪ್ರೀತಿ ಎಂಬ ಅರ್ಥದಲ್ಲಿ ಹಿಮೋಫಿಲಿಯಾ ಎಂದು ಕರೆಯಲಾಗಿದೆ. ರಕ್ತ ಸಂಬಂಧದ ಇನ್ನೊಂದು ಮುಖವಿದು.


ವಿಶ್ವ ಸಂಸ್ಥೆಯ ಹೂ- ಲೋಕ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 10,000 ವ್ಯಕ್ತಿಗಳಲ್ಲಿ ಒಬ್ಬರು ನೆತ್ತರೊಸರು ತೊಂದರೆಯನ್ನು ಹೊತ್ತು ಹಟ್ಟುತ್ತಾರಂತೆ. ಅನುವಂಶಿಕವಾಗಿ ಬರುವ ಇದು ಹೆಣ್ಣುಮಕ್ಕಳ ವಿಷಯದಲ್ಲಿ ತುಸು ಮೃದು ಧೋರಣೆ ಹೊಂದಿದೆ. ಹಿಮೋಫಿಲಿಯಾ ಹೆಚ್ಚು ಕಂಡುಬರುವುದು ಗಂಡಸರಲ್ಲಿ. ಹಾಗೆಂದ ಕೂಡಲೆ ಹೆಂಗಸರನ್ನು ಬಿಟ್ಟಿದೆ ಎಂದು ಅರ್ಥವಲ್ಲ. ಸಂಖ್ಯೆಯಲ್ಲಿ ಕಡಿಮೆ ಅಷ್ಟೆ. ಎಂತೂ ಜಗತ್ತಿನ ಎಲ್ಲ ಅವಕಾಶಗಳಲ್ಲೂ ಹೆಣ್ಣಿಗೆ ಪಾಲು ಕಡಿಮೆ ತಾನೆ? ಇದಾದರೂ ಯಾಕೆ ಹೆಚ್ಚು ಇರಬೇಕು ಬಿಡಿ.


ಈ ವರುಷವೂ ಏಪ್ರಿಲ್ 7ರಂದು ವಿಶ್ವ ಹಿಮೋಫಿಲಿಯ ದಿನ ಆಚರಣೆ ಕಂಡಿತು. ಆದರೆ ಅದರ ಅರಿವು ಎಷ್ಟು ಜನರನ್ನು ಮುಟ್ಟಿತು ಎನ್ನುವುದು ಅನುಮಾನ. ಈಗಂತೂ ಮತ ಕೇಳುವವರ ಪ್ರಚಾರ ಗಂಟಲಿನ ಎದುರು ಬೇರೆಲ್ಲ ಪ್ರಚಾರಗಳೂ ದೂರ ದೂರ ಕೇಳುವುದಿಲ್ಲ. ಆದರೂ ಕರ್ತವ್ಯ ವಿಮುಖರಾಗುವಂತಿಲ್ಲ ಎಂದು ಹಿಮೋಫಿಲಿಯಾ ದಿನಗಳು ಜಗತ್ತಿನ ಎಲ್ಲ ಕಡೆ ನಡೆಯುತ್ತವೆ. ಸಮಾನತೆಯೊಡನೆ ಎಲ್ಲರನ್ನೂ ಮುಟ್ಟುವುದು: ಜಾಗತಿಕ ಮಾನದಂಡದೊಡನೆ ರಕ್ತಸ್ರಾವ ತಡೆಗಟ್ಟುವಿಕೆ ಎನ್ನುವುದು ಈ ವರುಷದ ವಿಶ್ವ ಹಿಮೋಫಿಲಿಯಾ ದಿನದ ಧ್ಯೇಯ ವಾಕ್ಯವಾಗಿತ್ತು.
ಈ ರಕ್ತದೊಸರು ತೊಂದರೆಯ ಅತಿ ಮುಖ್ಯ ಸಮಸ್ಯೆ ಮಿದುಳಿಗೆ ಸಂಬಂಧಿಸಿದ್ದಾಗಿದೆ. ಮಿದುಳಿನಲ್ಲಿ ನೆತ್ತರೊಸರು ನಡೆದರೆ ಯಮ ಪಾಶವು ನಮ್ಮನ್ನು ಸುತ್ತಿಕೊಂಡಿತು ಎಂದೇ ಅರ್ಥ. ಮಿದುಳಿನಲ್ಲಿ ಒಳ ರಕ್ತಸ್ರಾವವಾದಾಗ ಕೂಡಲೆ ತಿಳಿಯದಿದ್ದರೆ ಮರಣದ ಬಳಿಕವೇ ಗುಟ್ಟು ರಟ್ಟಾಗುವ ಅಪಾಯವೂ ಇದೆ. ರಕ್ತಸ್ರಾವ ಇರುವವರಿಗೆ ಕೆಲವು ಸಂದರ್ಭಗಳಲ್ಲಿ ನಿಶ್ಚಿತ ಗುಂಪಿಗೆ ಸೇರಿದ ನೆತ್ತರನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಡಬೇಕಾಗುತ್ತದೆ. ಸಮಗ್ರ ಸೇವೆಯಲ್ಲಿ ಒದಗು, ಸಲ್ಲಿಸು, ಚಿಕಿತ್ಸೆ ನೀಡು, ಗುಣಪಡಿಸು ಎಲ್ಲ ಸೇರಿರುತ್ತದೆ.


ನೆತ್ತರೊಸರು ತಡೆಯಲು ಜಾಗತಿಕ ಮಾನದಂಡ ಯಾವುದು? ಅದನ್ನು ತಡೆಯಲು ವಿಶ್ವ ಮಟ್ಟದ ಆಧುನಿಕ ತಂತ್ರಜ್ಞಾನ ಬಳಸುವುದು ಎಂದು ಮಾತ್ರ ಅದಕ್ಕೆ ಅರ್ಥ. ಗಂಡಸರಲ್ಲಿ 5,000ದಲ್ಲಿ ಒಂದಾದರೂ ಮಗು ಹಿಮೋಫಿಲಿಯಾ ಹೊತ್ತು ಹುಟ್ಟುತ್ತದೆ. ಅನುವಂಶೀಯವಾಗಿ ಬರುವಾಗಲೂ ತಾಯಿಯಿಂದ ಮಗನಿಗೆ ಹಿಮೋಫಿಲಿಯಾ ಬಳುವಳಿಯಾಗಿ ಬರುತ್ತದೆಯಂತೆ. ಹೆಪ್ಪುಗಟ್ಟುವಿಕೆ ಕೊರತೆಯ ಪ್ರಮಾಣ ಮತ್ತು ಕಿರುಬಿಲ್ಲೆಗಳ ಕೊರತೆ ಹಾಗೂ ಕಾರ್ಯಕ್ಷಮತೆಯನ್ನು ಅನುಸರಿಸಿ ತೀವ್ರ, ಮಧ್ಯಮ, ಸೌಮ್ಯ ಎಂದು ಹಿಮೋಫಿಲಿಯಾದಲ್ಲಿ ಎ, ಬಿ, ಸಿ ಎಂದು ಮೂರು ಬಗೆ ಇದ್ದು, ಅದನ್ನನುಸರಿಸಿ ಚಿಕಿತ್ಸೆ ನಡೆಯುತ್ತದೆ.


ಹಿಮೋಫಿಲಿಯಾ ಇರುವವರಲ್ಲಿ ಒಸಡುಗಳಲ್ಲಿ, ಮೂಗಿನಲ್ಲಿ, ಮಲ ಮೂತ್ರಗಳಲ್ಲಿ ರಕ್ತ ಹೋಗುವುದು ಕೂಡ ಕೆಲವೊಮ್ಮೆ ಆಗುತ್ತದೆ. ಆದರೆ ಮಿದುಳಿನ ಬಳಿಕ ಹೆಚ್ಚು ಅಪಾಯಕಾರಿಯಾದುದು ಕೀಲುಗಳಲ್ಲಿ ರಕ್ತ ಸೋರುವುದಾಗಿದೆ. ಇದು ಅವರನ್ನು ದೈಹಿಕವಾಗಿ ಏನೂ ಮಾಡಗೊಡದ ಸ್ಥಿತಿಗೆ, ಕೊನೆಗೆ ಮೃತ ಸ್ಥಿತಿಗೆ ತಳ್ಳಬಹುದು. ನೆತ್ತರೊಸರು ತೊಂದರೆ ಇರುವವರು ಯಾವ ರೀತಿಯಲ್ಲೂ ದೇಹದಲ್ಲಿ ಗಾಯವಾಗದಂತೆ ಎಚ್ಚರ ವಹಿಸಬೇಕು. ಇದು ಮುಕ್ಕಾಲು ಪಾಲು ಸಮಸ್ಯೆಯನ್ನು ಸರಳಗೊಳಿಸುತ್ತದೆ.


ರಕ್ತ ಹೆಪ್ಪುಗಟ್ಟುವುದನ್ನು ತ್ರಂಬೋಸಿಸ್ ಎನ್ನುತ್ತಾರೆ. ಇದು ಕೂಡ ಗ್ರೀಕ್ ಮೂಲದ ಶಬ್ದವಾಗಿದೆ. ಹೆಪ್ಪುಗಟ್ಟುವ ವ್ಯವಸ್ಥೆ ಎಂದು ಅರ್ಥ. ಕಿರುಬಿಲ್ಲೆಗಳು ಎನ್ನುವ ತ್ರೆಂಬೋಸೈಟ್ಸ್ ಇಲ್ಲವೇ ಪ್ಲೇಟೆಲೆಟ್ಸ್‍ಗಳು ಫೈಬ್ರಿನ್ ಎಂಬುದರೊಡನೆ ಬೆರೆತು ಹೆಪ್ಪುಗಟ್ಟುವಿಕೆ ಸಾಧ್ಯವಾಗುತ್ತದೆ. ಕಾಲ ಕೆಟ್ಟಾಗ ಎಲ್ಲ ಕೈಕೊಡುತ್ತದೆ ಎಂಬುದು ರೋಗಲಕ್ಷಣ. ಆದರೆ ಹಿಮೋಫಿಲಿಯಾ ಹುಟ್ಟುವಾಗಲೇ ದೊರೆತ ಒಲವಿನ ಕೊಡುಗೆ. ಈಗ ಸಮಗ್ರ ಚಿಕಿತ್ಸೆಗಳು ಲಭ್ಯವಿರುವುದರಿಂದ ಅದಕ್ಕೆಲ್ಲ ಹೆದರುವ ಕಾರಣವಿಲ್ಲ. ಧೈರ್ಯವೇ ಅರ್ಧ ಕಾಯಿಲೆ ಗುಣ ಪಡಿಸುತ್ತದೆ ಎನ್ನುತ್ತಾರೆ. ಹಾಗೇನಾದರೂ ಆದರೆ ಆಸ್ಪತ್ರೆಗಳವರು, ವೈದ್ಯರು ಎಲ್ಲಿಗೆ ಹೋಗಬೇಕು?


ಬರಹ: ಪೇರೂರು ಜಾರು, ಹಿರಿಯ ಸಂಪಾದಕರು

Related Posts

Leave a Reply

Your email address will not be published.