ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು : ಮೂಲ್ಕಿ-ಮೂಡುಬಿದರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ಅಮರಶ್ರೀ ಹೇಳಿಕೆ
ಮೂಡುಬಿದಿರೆ: ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಅಭಿವೃದ್ಧಿಯಾಗದಿರುವ ಹಲವಾರು ಯೋಜನೆಗಳಿವೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ, ಉದ್ಯೋಗ, ವಸತಿ, ಆರೋಗ್ಯ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಪರಿಹಾರ ಕಾಣದೆ ಹಾಗೇ ಉಳಿದುಕೊಂಡಿದೆ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಹೆಚ್ಚಿನ ಒತ್ತನ್ನು ನೀಡುವ ಉದ್ದೇಶವನ್ನು ಹೊಂದಿದ್ದೇನೆ ಎಂದು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ಪುತ್ರಿ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಅವರು ಹೇಳಿದರು.
ಮುಲ್ಕಿ-ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ.ಅಮರಶ್ರೀ ಅವರು ಮಂಗಳವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪರಿಹಾರವನ್ನು ಕಂಡುಕೊಳ್ಳದೆ ಹಾಗೆ ಬಾಕಿ ಉಳಿದಿರುವ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಮನೆ ಮನೆಗೆ ತೆರಳಿ ಜೆಡಿಎಸ್ ಪಕ್ಷ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದೇನೆ. ಮುಂದಿನ ಐದು ವರುಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಯ ದೂರದೃಷ್ಠಿ ಚಿಂತನೆಯ ರೂಪುರೇಶೆಗಳನ್ನು ಸಿದ್ಧಪಡಿಸಿದ್ದು, ಆ ಪ್ರಕಾರವಾಗಿಯೇ ನಡೆಯುವುದಾಗಿ ಹೇಳಿದರು.
ಕುಮಾರ ಸ್ವಾಮಿಯವರ ಪಂಚರತ್ನ ಯೋಜನೆ, ಕಳೆದ ಬಾರಿ ರೈತರಿಗೆ ನೀಡಲಾದ 25ಸಾವಿರ ಕೋಟಿ ಕೃಷಿಸಾಲ, ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳ ಪಟ್ಟಿಯೊಂದಿಗೆ ಮನೆ ಮನೆಗೆ ಕಾರ್ಯಕರ್ತರೊಂದಿಗೆ ತೆರಳಿ ತಿಳಿಸುತ್ತಿದ್ದೇನೆ ಎಂದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಆಸಿಫ್, ಹಿರಿಯ ಕಾರ್ಯಕರ್ತ ಹರಿಪ್ರಸಾದ್ ಶೆಟ್ಟಿ, ಶಿವದತ್ತ್ ಕೆ.ಬಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.