ಕಡಬ: ಸಂಪೂರ್ಣ ಹದಗೆಟ್ಟ ನೆಲ್ಯಾಡಿ-ಪಡುಬೆಟ್ಟು ರಸ್ತೆ: ಕೆಸರು ತುಂಬಿದ ರಸ್ತೆ, ವಾಹನ ಸವಾರರ ಪರದಾಟ
ಕಡಬದ ನೆಲ್ಯಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಯಾಡಿಯಿಂದ-ಪಡುಬೆಟ್ಟು ತನಕ ಹೋಗುವ ರಸ್ತೆ ಕೆಸರು ತುಂಬಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಸಂಚರಿಸಲು ಕಷ್ಟ ಅನುಭವಿಸುತ್ತಿದ್ದಾರೆ. ಕಡಬ ತಾಲೂಕಿನ ನೆಲ್ಯಾಡಿ ಗ್ರಾಮ ಪಂಚಾಯತ್ ಗೆ ಒಳಪಟ್ಟ ನೆಲ್ಯಾಡಿಯಿಂದ-ಪಡುಬೆಟ್ಟು ತನಕ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಪಂಚಾಯತ್ ವತಿಯಿಂದ ಮಣ್ಣುಹಾಕಿ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು,
ಜನಸಾಮಾನ್ಯರು ಹಾಗೂ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ. ರಸ್ತೆಯು ಕೆಸರುಮಯವಾಗಿ ಜಾರುವಂತಾಗಿದ್ದು, ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿರುವ ಕೆಸರು ಗುಂಡಿಗಳಿಗೆ ಬಿದ್ದು ಅದೇಷ್ಟೋ ಅಪಘಾತಗಳು ಸಂಭವಿಸುತ್ತಿದೆ. ಇದರಿಂದಾಗಿ ವಾಹನ ಚಲಾಯಿಸಲು ಕಷ್ಟಕರವಾದ ಪರಿಸ್ಥಿತಿ ಎದುರಾಗಿದೆ.
ಸುಮಾರು 600ಕ್ಕಿಂತಲೂ ಹೆಚ್ಚಿನ ಕುಟುಂಬಸ್ಥರಿಗೆ, ಶಾಲಾ ಮಕ್ಕಳಿಗೆ, ದೈನಂದಿನ ಚಟುವಟಿಕೆಗಳಿಗೆ ಹಾದು ಹೋಗಲು ಇದು ಒಂದೇ ರಸ್ತೆ ಆಸರೆಯಾಗಿರುತ್ತದೆ. ಆದ್ದರಿಂದ ಈ ರಸ್ತೆಯನ್ನು ಆದಷ್ಟು ಬೇಗ ದುರಸ್ಥಿ ಮಾಡಬೇಕಾಗಿ ಸ್ಥಳೀಯರು ವಿನಂತಿಸಿಕೊಂಡಿದ್ದಾರೆ.