ಕದ್ರಿ ಭೌಧದಿಂದ ಮಾಧ್ವಕ್ಕೆ

ಸಂಕ್ರಾಂತಿಯೊಂದಿಗೆ ನಾನಾ ದೈವ ದೇವರುಗಳ ಉತ್ಸವ ಗರಿಗೆದರುತ್ತದೆ. ಮಂಗಳೂರಿನ ಕದ್ರಿ ಆಲಯದಲ್ಲೂ ಉತ್ಸವದ ರಂಗು ಎದ್ದಿದೆ. ಹಿಂದೆಲ್ಲ ದೈವ ದೇವರುಗಳ ಉತ್ಸವ ಎಂದರೆ ಕೆಂಪು ಬಿಳಿಯ ಬಟ್ಟೆಯ ಅಲಂಕಾರ ಇರುತ್ತಿತ್ತು. ಈಗೆಲ್ಲ ಕೇಸರಿ ವಿಜಯ; ಭಗವಾ ಬಾವುಟ. ಕದ್ರಿ ಮಂಜುನಾಥ ಎಂದಾಗ ಕದರಿಕಾ ವಿಹಾರ ಎನ್ನುವರು. ಈ ಕದ್ರ, ಕದ್ರಾ, ಕದರಿ ಎಂಬ ಸ್ಥಳನಾಮ ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ, ಆಂಧ್ರದ ಹಲವು ಕಡೆ ಇವೆ. ಇವೆಲ್ಲ ಗುಡ್ಡದಿಂದ ಇಳಿದ ಕಡಿದು ಸ್ಥಳಗಳು. ಅದೇ ಕದ್ರಿ, ಕದ್ರಾ ಸ್ಥಳ ನಾಮದ ಮೂಲ ಇರುತ್ತದೆ.

ಕದ್ರಿ ಮಂಜುನಾಥ ಆಲಯವು ಹಿಂದೆ ಬೌದ್ಧ ವಿಹಾರವಾಗಿದ್ದು, ವಜ್ರಯಾನ, ನಾಥ ಪಂಥಕ್ಕೆ ಸೇರಿ, ಶೈವ ಆಗಿ ಬಳಿಕ ಮಾಧ್ವರ ವಸಾಹತು ಆಗಿ ಬದಲಾಗಿದೆ. ಕದ್ರಿಗೆ ಹೋದಾಗ ಗುಡ್ಡದಿಂದ ನೀರು ಇಳಿದು ಬರುವುದು ಕಾಣುತ್ತದೆ. ಅದರಿಂದ ಏಳು ಕೊಳಗಳು ತುಂಬಿ ಜನರ ಕೊಳಕಿಗೆ ಬಳಲಿರುವುದೂ ಕಾಣುತ್ತದೆ. ಗುಡ್ಡದಿಂದ ಬರುವ ನೀರಿಗೆ ಗೋಮುಖ ಇಟ್ಟಿದ್ದು ಅದನ್ನು ಗೋಮುಖ ತೀರ್ಥ ಎನ್ನುತ್ತಾರೆ. ಆದರೆ ದೇವಸ್ಥಾನದ ಬೆಂಗಡೆಯ ಪ್ರದೇಶಕ್ಕೆ ಹೋದರೆ ಮಳೆಯಂತೆ ಗುಡ್ಡದಿಂದ ನೀರು ಬೀಳುವುದನ್ನು ಕಾಣಬಹುದು. ಆ ಉಚಿತ ನೀರಿನಿಂದ ಅಲ್ಲಿ ಅಡಕೆ ತೋಟ, ತೆಂಗು ಇತ್ಯಾದಿ ಬೆಳೆ ಜೋರಾಗಿ ಬೆಳೆದಿದ್ದಾರೆ.

ಕದ್ರಿ ಗುಡ್ಡದಿಂದ ತೀರ್ಥ ಬರಲು, ತೋಟಕ್ಕೆ ನೀರು ಹರಿಯಲು ಮೇಲಿನ ವಿಸ್ತಾರವಾದ ಪದವು ಹೊಂದಿರುವ ಲ್ಯಾಟರೈಟ್ ಮುರಕಲ್ಲು ಕಾರಣ. ಈ ಮುರಕಲ್ಲು ನೀರು ಹಿಡಿದಿಡುವ ಗುಣ ಹೊಂದಿದೆ. ಅದು ಒಸರುತ್ತಿರುವುದು ಪ್ರಾಕೃತಿಕ ವಿಸ್ಮಯಗಳಲ್ಲಿ ಒಂದು ನಿಜ. ಆದರೆ ಅದು ಇಂತಾ ಸ್ಥಳಗಳಲ್ಲಿ ಸಹಜ ಕ್ರಿಯೆ. ಇನ್ನು ಕೆಲವೆಡೆ ವಿಸ್ತಾರವಾದ ಬಂಡೆಗಲ್ಲು ನೀರಿನ ಟ್ಯಾಂಕ್ ಆಗಿ ಹತ್ತಿರಕ್ಕೆ ನೀರು ಹರಿಸುತ್ತದೆ. ಕಾರಿಂಜೇಶ್ವರದ ಕೆರೆಗೆ ಈ ಎರಡೂ ಕ್ರಿಯೆ ನೀರು ಒದಗಿಸುತ್ತದೆ. ಕೆಲವೆಡೆ ಬತ್ತದಿರುವ ಕೆರೆಗಳನ್ನು ಕಾಣಬಹುದು. ಇದಕ್ಕೆ ಕಾರಣ ಎರಡು ನದಿ ತೊರೆಗಳ ನಡುವೆ ಇರುವ ಒಳ ತೊರೆ ಸಂಬಂಧ ಆಗಿರುತ್ತದೆ. ಏತದಿಂದ ಕೆರೆಯ ನೀರನ್ನು ಬರಿದಾಗಿಸುತ್ತಲೆ ಕೆರೆ ಸರ್ರನೆ ತುಂಬುವುದು ಹಿಂದಿನವರು ಕಣ್ಣಾರೆ ಕಂಡ ದೃಶ್ಯಗಳಾಗಿವೆ.

ಕದ್ರಿ ದೇವಾಲಯದ ಮೂಲ ದೇವರು ಮಂಜುಶ್ರೀ ಮತ್ತು ಅವಲೋಕಿತೇಶ್ವರ. ಬೌದ್ಧ ಧರ್ಮದ್ದು. ಮುಂದೆ ಇದು ಬೌದ್ಧ ವಜ್ರಯಾನಿ ನಾಥರ ನೆಲೆ. ಬೌದ್ಧ ಧರ್ಮವು ಮೇಲು ಜಾತಿಯವರ ಮಹಾಯಾನ ಮತ್ತು ಅವರ ಬುದ್ಧಿಗೆ ತಕ್ಕಂತೆ ಕೆಳ ಜಾತಿಯವರ ಹೀನಯಾನ ಎಂದು ಬುದ್ಧ ಮರಣಿಸುತ್ತಲೇ ಒಡೆದಿದೆ. ಅಶೋಕ ಚಕ್ರವರ್ತಿಯ ಮೊಮ್ಮಗ ಬ್ರಹದೃತನವರೆಗೆ ಮೂಲ ಬೌದ್ಧ ಧರ್ಮ ಇತ್ತು. ಅನಂತರ ಮೂಲ ಬೌದ್ಧ ಧರ್ಮ ಉಳಿದಿಲ್ಲ. ಮುಂದೆ ಅದು ನಾನಾ ಕವಲುಗಳಾಗಿ ಒಡೆಯಿತು. ಅದರಲ್ಲಿ ನಾಥರೂ ಬರುತ್ತಾರೆ. ಮುಂದೆ ನಾಥ ಪಂಥದವರು ಹಿಂದೂ ಹಿಂದೆ ಹೋದರು. ವಜ್ರಯಾನ ಎನ್ನುವುದು ಬೌದ್ಧರ ತಾಂತ್ರಿಕ ಆರಾಧನೆಯ ಕವಲು ಆಗಿದೆ. ಮುಂದೆ ಈ ಪ್ರದೇಶ ಆಲುಪ ಅರಸರ ವಶವಾಯಿತು. ಅಲ ಎಂದರೆ ನೀರಿನ ಹೆಜ್ಜೆಯ ಪ್ರದೇಶ; ಅಲ್ಲಿನ ದೊರೆಗಳು ಅಲುಪರು, ಆಲುಪರು. ಮೂಲ ಶಾಸನಗಳಲ್ಲಿ ಅಲುಪ ಎಂದೇ ಇದೆ. ಅಲುಪ ಅರಸ ಕುಂದವರ್ಮನು ಇಲ್ಲಿದ್ದ ಮೂಲ ಮೂರ್ತಿಗಳಲ್ಲಿ ಒಂದಾದ ಧ್ಯಾನಿ ಬುದ್ಧ ಅವಲೋಕಿತೇಶ್ವರ ಶಿಲ್ಪದ ಕೆಳಗೆ ತನ್ನ ಶಾಸನ ಬರೆದು ಶಿವಭಕ್ತ ಎಂಬ ಅಂಕಿತವನ್ನು ಹಾಕಿದ.

ಈತನ ಅನುಯಾಯಿಗಳು ಇಲ್ಲಿ ಲಿಂಗ ಇಟ್ಟರು. ಮಂಜುಶ್ರೀ ಎಂಬ ಬೌದ್ಧ ಆಲಯ ಆಗಿದ್ದುದರಿಂದ ಮಂಜುನಾಥ ಎಂದು ಕರೆದರು. 13ನೇ ಶತಮಾನದಲ್ಲಿ ಸ್ಥಳೀಯರು ಹಲವರು ಇದಕ್ಕೆ ಸ್ಥಳ ದಾನ ಮಾಡಿರುವುದು ಕಂಡು ಬರುವ ಶಾಸನ ಇದೆ. ಆದರೂ ಇದು 16ನೇ ಶತಮಾನದ ಬಳಿಕವೇ ಸಂಪೂರ್ಣ ಶೈವ ಆಲಯ ಆಯ್ತು. 18ನೇ ಶತಮಾನದಲ್ಲಿ ನಾಥ ಮಠದವರು ಇಲ್ಲಿಯ ಪೂಜೆಗೆ ಮಾಧ್ವ ಭಟ್ಟರನ್ನು ನೇಮಿಸಿದರು. ಈಗ ಇದು ಹೆಸರಿಗೆ ಮಂಜುಶ್ರೀ ಬೌದ್ಧ ನೆರಳು, ಮಠದ ರೀತ್ಯಾ ನಾಥ, ಮಂಜುನಾಥ ಎಂದು ಶೈವ, ಪೂಜೆಯಿಂದ ವೈಷ್ಣವ ಎಂದು ವಿವಿಧತೆಯಲ್ಲಿ ಏಕತೆಯನ್ನು ಕಂಡಿದೆ. ಮೂಲ ಮೂರ್ತಿಗಳನ್ನು ಗರ್ಭಗುಡಿಯ ಆಚೆ ಕಲ್ಲಿನ ಕಟಾಂಜನದ ಮೇಲೆ ಇಡಲಾಗಿದೆ.

ಬೌದ್ಧ ಮೂಲದ ಮೂರ್ತಿಗಳ ಹೆಸರನ್ನು ಬದಲಿಸಲಾಗಿದೆ. ಮಾಧ್ಯರು ಅವುಗಳನ್ನು ನಾರಾಯಣ, ವೇದವ್ಯಾಸ ಎಂದಿತ್ಯಾದಿಯಾಗಿ ಹೆಸರಿಸಿದ್ದಾರೆ. ಆದರೆ ಆ ಮೂರ್ತಿಗಳ ಪ್ರಭಾವಳಿಯಲ್ಲಿ ಬುದ್ಧನ ಕಿರು ಶಿಲ್ಪ ಕೆತ್ತನೆ ಇದೆ. ನಾರಾಯಣ, ವೇದವ್ಯಾಸರು ಬುದ್ಧನ ಬಳಿಕದವರು ಎಂದು ಬೇಕಾದರೆ ಈ ಮೂರ್ತಿಗಳ ಪ್ರಭಾವಳಿಯ ಆಧಾರದ ಮೇಲೆ ಹೇಳಬಹುದು. ಅವಲೋಕಿತೇಶ್ವರ ಮೂರ್ತಿಯು ಭಾರತದ ಅತಿ ಸುಂದರ ಶಿಲ್ಪಗಳಲ್ಲಿ ಒಂದು ಎನ್ನುವುದು ಸಂಶೋಧಕರ ಅಭಿಮತವಾಗಿದೆ. ಇಲ್ಲಿ ನಾಥ ಪಂಥದ ಮಚೇಂದ್ರನಾಥ, ಗೋರಕನಾಥ, ಶೃಂಗಿನಾಥ ಮೊದಲಾದವರ ಮೂರ್ತಿಗಳು ಸಹ ಇವೆ.

ಇಲ್ಲಿನ ಇತರ ಕೆಲವು ಕಂಬಗಳ ಮೇಲೂ ಬುದ್ಧ ಕೆತ್ತನೆ ಇದೆ. ಅವುಗಳಲ್ಲಿ ಅತಿ ಮುಖ್ಯವಾದುದು ದೊಡ್ಡ ದೀಪದ ಕಂಬ. ಇದರ ಕೆಳಗೂ, ಗುಡ್ಡದೇರಿನ ಕಲ್ಲಿನ ಕಂಬದ ಕೆಳಗೂ ಬುದ್ಧ ಶಿಲ್ಪಗಳು ಇವೆ. ಈ ಕಂಚಿನ ದೀಪದ ಸ್ತಂಭವು ಬಿರುವನೊಬ್ಬನ ಕೊಡುಗೆ ಎನ್ನಲಾಗಿದೆ. ಕೊರಗ ತನಿಯ ಕೊರಗಜ್ಜನನ್ನು ಕೊಂದ ಬಳಿಕ ಕದ್ರಿ ಗುಡ್ಡದ ಕೊರಗ ಸಮುದಾಯದವರು ಕಾಪು ಕಾಡು ಈಗಿನ ಕಾಪಿಕಾಡ್ ಸೇರಿದಂತೆ ಕಾಣುತ್ತದೆ. ಕೊರಗಜ್ಜನ ಸಾಕು ತಾಯಿ ಬಯ್ದತಿಯು ಕದ್ರಿ ದೇವರಿಗೆ ಹರಕೆ ಹೊತ್ತುದಾಗಿ ಪಾಡ್ದನದಲ್ಲಿದೆ. ಬಹುಶಾ ಆಕೆಯ ವಂಶಜರು ಈ ಹರಕೆ ಹೀಗೆ ತೀರಿಸಿರಬಹುದು.

ಇಲ್ಲಿ ಪಾಂಡವರ ಗವಿ ಎಂಬವು ಸಹ ಇವೆ. ಇವು ಪಂಡು ಗವಿಗಳು. ಪಂಡು ಎಂದರೆ ಪಾಚಿ ಹಿಡಿದ ಕಲ್ಲಿನ ಬಳಿಯವು. ನಾಸಿಕದ ಬಳಿ ಸಹ ಬೌದ್ಧ ಗವಿಗಳು ಇದ್ದು, ಅವು ಸಹ ಪಂಡು ಗವಿಗಳು ಆಗಿದ್ದುದು ಈಗ ಪಾಂಡವ ಗವಿಗಳು ಎನಿಸಿವೆ. ಭಾರತದಲ್ಲಿ ಗುಹಾಲಯ, ಕಲ್ಲು ಗವಿಗಳನ್ನು ಆರಂಭಿಸಿದವರು ಬೌದ್ಧರು. ಅನಂತರ ಜೈನರು. ಮುಂದೆ ಈ ಗುಹಾಲಯಗಳಲ್ಲಿ ಹಿಂದೂ ವಿಸ್ತರಣೆ ಆಗಿದೆ. ಜೈನ ವಿಷ್ಣುವನ್ನು ಜೈನ ಧರ್ಮದಿಂದ ವೈಷ್ಣವ ಪಂಥಕ್ಕೆ ಹೋದ ಜೈನರು ಆರಾಮವಾಗಿ ವೈದಿಕ ಮಾಡಿಕೊಂಡಿದ್ದಾರೆ. ಕದ್ರಿಯ ಮೂಲ ಆಲಯವು ಬದಲಾಗಿ 14ನೇ ಶತಮಾನದಲ್ಲಿ ದೇವಾಲಯವು ಪೂರ್ಣ ಶಿಲೆಯ ರೂಪ ಪಡೆದಿದೆ. ಆಗ ಇದು ವಿಜಯನಗರ ವಾಸ್ತು ರೂಪ ಪಡೆದಿದೆ. ಆಗಿನ ವಿಜಯನಗರದ ಸಂಗಮ ಅರಸರು ಶೈವರಾಗಿದ್ದರು ಎಂಬುದನ್ನು ಸಹ ಮರೆಯುವಂತಿಲ್ಲ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.