ಕಾಂತಾರ ಸಿನಿಮಾ ತಂಡಕ್ಕೆ ಕೋರ್ಟಿನಲ್ಲಿ ಗೆಲುವು ; ತೈಕ್ಕುಡಂ ತಕರಾರು ಅರ್ಜಿ ವಜಾ

ಕಾಂತಾರ ಸಿನಿಮಾದ ವರಾಹರೂಪಂ ಹಾಡಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಕೇರಳದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ವರಾಹಂ ರೂಪಂ ಹಾಡು ಬಳಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದ ಕೋಜಿಕ್ಕೋಡ್ ನ್ಯಾಯಾಲಯ ವಿವಾದದ ಬಗ್ಗೆ ಅಂತಿಮ ಆದೇಶ ಹೊರಡಿಸಿದ್ದು, ತೈಕ್ಕುಡಂ ಬ್ರಿಡ್ಜ್ ಹಾಕಿದ್ದ ಅರ್ಜಿಯನ್ನೇ ವಜಾ ಮಾಡಿದೆ.

ಕಾಂತಾರ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿದ ಬೆನ್ನಲ್ಲೇ ತೈಕ್ಕುಡಂ ಬ್ರಿಡ್ಜ್ ತಂಡದವರು ವರಾಹಂ ರೂಪಂ ಹಾಡಿನ ಬಗ್ಗೆ ಅಪಸ್ವರ ಎತ್ತಿ ಕೋರ್ಟ್ ಮೆಟ್ಟಿಲೇರಿದ್ದರು. ತಾವು ಮಾಡಿದ್ದ ನವರಸಂ ರೂಪಂ ಎನ್ನುವ ಆಲ್ಬಂ ಹಾಡಿನ ರೀತಿಯಲ್ಲೇ ವರಾಹಂ ರೂಪಂ ಹಾಡನ್ನು ಮಾಡಲಾಗಿದೆ. ಅದರ ಟ್ಯೂನ್ ನಲ್ಲಿ ಬಳಸಿದ್ದ ತಾಂತ್ರಿಕ ಶೈಲಿ ತಮ್ಮ ಹಾಡನ್ನು ಹೋಲುತ್ತದೆ, ನಮ್ಮ ಹಾಡಿನ ಧಾಟಿಯಿಂದ ಪ್ರೇರಿತಗೊಂಡು ವರಾಹ ರೂಪಂ ಹಾಡು ರೂಪಿಸಲಾಗಿದೆ ಎಂದು ಕೋಜಿಕ್ಕೋಡ್ ಕೋರ್ಟಿನಲ್ಲಿ ತಕರಾರು ಅರ್ಜಿ ಹಾಕಲಾಗಿತ್ತು. ನ್ಯಾಯಾಲಯ ಈ ಬಗ್ಗೆ ಪ್ರತಿವಾದಿಗಳ ಅಹವಾಲು ಕೇಳುವ ಮೊದಲೇ ಹಾಡಿನ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದರಿಂದ ಕಾಂತಾರ ಸಿನಿಮಾಕ್ಕೆ ಭಾರೀ ಹಿನ್ನಡೆ ಅನ್ನುವ ರೀತಿ ಸುದ್ದಿ ಹಬ್ಬಿತ್ತು. ಆದರೆ ಥಿಯೇಟರ್ ಗಳಲ್ಲಿ ಹಾಡಿನ ಬಳಕೆಯನ್ನು ಹಿಂಪಡೆಯುವ ಗೋಜಿಗೆ ಸಿನಿಮಾ ತಂಡ ಹೋಗಿರಲಿಲ್ಲ. ಈ ನಡುವೆ, ಸಿನಿಮಾ ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ ತಂಡದ ವಕೀಲರು ಕೋರ್ಟಿನಲ್ಲಿ ವಾದ ಮಂಡಿಸಿದ್ದರು. ಆನಂತರ, ಹೊಂಬಾಳೆ ಫಿಲಂಸ್ ತಂಡ, ರಿಷಬ್ ಶೆಟ್ಟಿ ಪರವಾಗಿ ಮತ್ತು ಸಂಗೀತ ನಿರ್ದೇಶಕ ಲೋಕನಾಥ್ ಪರವಾಗಿ ಪ್ರತ್ಯೇಕವಾಗಿ ವಕೀಲರು ಹಾಜರಾಗಿ ಹಾಡಿನ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದರು. ಅಲ್ಲದೆ, ತೈಕ್ಕುಡಂ ಬ್ರಿಡ್ಜ್ ಎತ್ತಿದ್ದ ತಕರಾರು ಅರ್ಜಿಗೆ ಮೌಲ್ಯವೇ ಇಲ್ಲ ಅನ್ನುವ ಬಗ್ಗೆ ಸೂಕ್ತ ದಾಖಲೆ ಇಟ್ಟು ವಾದ ಮಂಡಿಸಿದ್ದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಇಂದು ಅಂತಿಮ ಆದೇಶ ನೀಡಿದ್ದು, ತೈಕ್ಕುಡಂ ಬ್ರಿಡ್ಜ್ ತಂಡದ ಅರ್ಜಿಯನ್ನೇ ವಜಾ ಮಾಡಿದೆ. ಇದರಿಂದಾಗಿ ಕಾಂತಾರ ಸಿನಿಮಾದಲ್ಲಿ ಹಿಟ್ ಆಗಿದ್ದ ವರಾಹ ರೂಪಂ ಹಾಡಿನ ಪ್ರಸಾರಕ್ಕೆ ಯಾವುದೇ ಅಡ್ಡಿಯಿಲ್ಲ ಅನ್ನುವ ತೀರ್ಪನ್ನು ಕೋರ್ಟ್ ನೀಡಿದಂತಾಗಿದೆ. ಈ ಮೂಲಕ ಕಾಂತಾರ ಚಿತ್ರತಂಡಕ್ಕೆ ಜಯ ಸಿಕ್ಕಿದಂತಾಗಿದೆ.

Related Posts

Leave a Reply

Your email address will not be published. Required fields are marked *