ಬಿ.ಎಸ್.ವೈ ಭೇಟಿ ಮಾಡಿದ ಕಾರ್ಕಳ ಟಿಕೆಟ್ ಆಕಾಂಕ್ಷಿ ಮಮತಾ ಹೆಗ್ಡೆ
ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿರುವ ಡಾ.ಮಮತಾ ಹೆಗ್ಡೆ ಅವರು ತನ್ನ ಬೆಂಬಲಿಗರೊಂದಿಗೆ ಸೋಮವಾರ ಶಿಕಾರಿಪುರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಪ್ರಾಮಾಣಿಕ ರಾಜಕಾರಣ ಮಾಡ ಬಯಸಿರುವ ತನಗೆ ಕಾರ್ಕಳದಿಂದ ಬಿಜೆಪಿ ಮೂಲಕ ಸ್ಪರ್ಧೆ ಮಾಡಲು ಅವಕಾಶ ನೀಡಬೇಕು ಎಂದು ಮಮತಾ ಹೆಗ್ಡೆ ಅವರು ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಬಿ.ಎಸ್. ವಿಜಯೇಂದ್ರ ಅವರನ್ನು ಕೂಡ ಭೇಟಿ ಮಾಡಿದರು.
ಸಚಿವ ಸುನಿಲ್ ಕುಮಾರ್ ವಿರುದ್ಧ ವ್ಯಾಪಕ ಭ್ರಷ್ಟಾಚಾರದ ಆರೋಪಗಳಿವೆ, ನಿರಂತರವಾಗಿ ಮುತಾಲಿಕ್ ಅವರು ಸುನಿಲ್ ಕುಮಾರ್ ಅವರ ಭ್ರಷ್ಟಾಚಾರವನ್ನು ಬಹಿರಂಗಪಡಿಸುತ್ತಿದ್ದಾರೆ, ಇದು ಬಿಜೆಪಿ ಪಕ್ಷಕ್ಕೆ ಕಾರ್ಕಳದಲ್ಲಿ ಬಾರಿ ಮುಜುಗರ ಉಂಟುಮಾಡುತ್ತಿದೆ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ . ಈ ಹಿನ್ನೆಲೆಯಲ್ಲಿ ಕಾರ್ಕಳದ ಹಾಲಿ ಶಾಸಕರಿಗೆ ಟಿಕೆಟ್ ಕೊಡಬಾರದು ಎಂದು ಮಮತಾ ಹೆಗ್ಡೆ ಅವರ ಬೆಂಬಲಿಗರು ಯಡಿಯೂರಪ್ಪ ಅವರನ್ನು ಮನವಿ ಮಾಡಿದರು.
ಮಮತಾ ಹೆಗ್ಡೆ ಅವರು ಈಗಾಗಲೇ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸುತ್ತಿದ್ದು ಮಮತಾ ಹೆಗ್ಡೆ ಅವರ ಪರವಾಗಿ ಬಾರಿ ಒಲವು ವ್ಯಕ್ತವಾಗುತ್ತಿರುವುದರಿಂದ ಮಮತಾ ಹೆಗ್ಡೆ ಅವರಿಗೆ ಟಿಕೆಟ್ ನೀಡುವಂತೆ ಬಿ.ಎಸ್.ವೈ ಅವರನ್ನು ಬಿಜೆಪಿ ಕಾರ್ಯಕರ್ತರ ನಿಯೋಗ ಆಗ್ರಹಿಸಿತು.
ಮನವಿ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ ಅವರು ದಿಲ್ಲಿಯಲ್ಲಿ ನಡೆಯಲಿರುವ ಸಂಸದೀಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸುತ್ತೇವೆ ಎಂದು ನಿಯೋಗಕ್ಕೆ ಭರವಸೆ ನೀಡಿದರು.
ನಿಯೋಗದಲ್ಲಿ ಕಾರ್ಕಳ ಬಂಟ್ಸ್ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಶಾಂತಲಾ ಶೆಟ್ಟಿ, ಬಿಜೆಪಿ ಕಾರ್ಯಕರ್ತರಾದ ವಿಶಾಲಾಕ್ಷಿ , ಮಾಯಾ ಶೆಟ್ಟಿ, ಚೇತನಾ ಶೆಟ್ಟಿ, ಯಶೋಧ, ಗೌರಿ ರಮೇಶ್ , ಜಾನವಿ ರೆಡ್ಡಿ ಮೊದಲಾದವರು ಭಾಗವಹಿಸಿದ್ದರು.