ಕಾರ್ಕಳ: ಕಾಂಗ್ರೆಸ್ ಪಕ್ಷದಿಂದ ಶಾಸಕ ಸುನೀಲ್ ಕುಮಾರ್ ವಿರುದ್ಧ ಪ್ರತಿಭಟನೆ
ಕಾರ್ಕಳ : ಪರಶುರಾಮ ನಕಲಿ ಮೂರ್ತಿ ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಯನ್ನು ಗುಜುರಿಗೆ ಹಾಕಿ ಅವ್ಯವಹಾರ ವೆಸಗಿದ್ದಾರೆ. ಅದರ ಮೂಲಕ ಬಿಜೆಪಿ ಸರಕಾರದ ಕರ್ಮಕಾಂಡಗಳು ಹೊರಗೆ ಬರುತ್ತಿವೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಕಾರ್ಕಳ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಬಳಿಯ ಮೈದಾನದಲ್ಲಿ ಶಾಸಕ ಸುನೀಲ್ ಕುಮಾರ್ ವಿರುದ್ಧ ನಡೆದ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಕ್ಕರೆ ಕಾರ್ಖಾನೆ ಹಗರಣ ದಲ್ಲಿ 15 ಕೋಟಿ, ನಕಲಿ ಮೂರ್ತಿಯ ಹಗರಣದಲ್ಲು ಅವ್ಯವಹಾರ ಕೃಷಿ ಸಚಿವೆ ಶೋಭಕರಂದ್ಲಾಜೆ ಕ್ಷೇತ್ರದಲ್ಲಿ ನಡೆದಿದೆ. ಇದಕ್ಕೆ ಅವರು ಉತ್ತರ ನೀಡಲಿ. ಧಾರ್ಮಿಕ ವಿಚಾರ ಮುಂದಿಟ್ಟು ಚುನಾವಣೆಯಲ್ಲಿ ಗೆದ್ದಿದ್ದಾರೆ. ಧಾರ್ಮಿಕ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ. ಬಿಜೆಪಿ ಕರಾವಳಿಗರಿಗೆ ಕುಚ್ಚಲಕ್ಕಿ ನೀಡದೆ ದ್ರೋಹ ಬಗೆದಿದೆ. ಡಿಮ್ಡ್ ಪಾರೆಸ್ಟ್‍ಗೆ ಹಂಗಾಮಿ ಹಕ್ಕು ಪತ್ರ ನೀಡಿ ಕಣ್ಣಿಗೆ ಮಣ್ಣೆರಚಿದೆ. ಅದಕ್ಕೆ ಮಹತ್ವವೆ ಇಲ್ಲ. ಸರಕಾರ ಸಮಗ್ರವಾಗಿ ತನಿಖೆ ಮಾಡಲು ಉಸ್ತುವಾರಿ ಸಚಿವೆ ಹಾಗು ಪ್ರವಾಸೋದ್ಯಮ ಸಚಿವರಲ್ಲಿ ಮನವಿ ಮಾಡಿದರು.
ನ್ಯಾಯಧೀಶ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಪರಶುರಾಮ ಮೂರ್ತಿ ಯನ್ನು ಕದ್ದು ಮುಚ್ಚಿ ಸಾಗಿಸುವ ಮೂಲಕ ಬಿಜೆಪಿ ಪಕ್ಷದ ಕಳ್ಳತನ ಬಯಲಾಗಿದೆ. ನಕಲಿ ಪರಶುರಾಮನ ಮೂರ್ತಿ ನಿರ್ಮಾಣ ಮಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ನೈತಿಕತೆಯಿದ್ದರೆ ಸತ್ಯ ಒಪ್ಪಿಕೊಳ್ಳಲಿ ಎಂದು ಆಗ್ರಹಿಸಿ, ಮೂರ್ತಿ ತೆರವು ಮಾಡಲು ಕಾನೂನು ಪ್ರಕ್ರಿಯೆಗಳಿವೆ. ಆದರೆ ಯಾವುದೇ ಮುನ್ಸೂಚನೆ ನೀಡದೆ ಪ್ರತಿಮೆ ತೆರವು ಗೊಳಿಸಿದ್ದು ಅಕ್ಷಮ್ಯ ಅಪರಾಧವಾಗಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ ಪರಶುರಾಮ ಸೃಷ್ಟಿಯ ನಾಡಿನಲ್ಲಿ ನಕಲಿ ಪರಶುರಾಮ ಮೂರ್ತಿ ನಿರ್ಮಾಣ ಮಾಡಿ ನೈತಿಕತೆಯನ್ನು ಪ್ರಶ್ನಿಸುತಿದ್ದಾರೆ . ಅದರ ಮೂಲಕ ರಾಜ್ಯದ ಜನರ ಭಾವನೆಗೆ ದ್ರೋಹ ವೆಸಗಿದ್ದಾರೆ . ಚುನಾವಣೆಗಾಗಿ ತರಾತುರಿ ಕಾಮಗಾರಿ ಅಲ್ಲ. ವಂಚನಾ ಕಾಮಗಾರಿಯಾಗಿದೆ. ಈಗ ಹಿಂದುತ್ವ ಪ್ರಶ್ನಿಸುವ ಕಲ್ಲಡ್ಕ ಪ್ರಭಾಕರ್ ಭಟ್ ಎಲ್ಲಿದ್ದಾರೆ , ನಕಲಿ ಮೂರ್ತಿ ಬಗ್ಗೆ ಹಿಂದು ಸಂಘಟನೆಗಳು ಏಕೆ ಪ್ರತಿಭಟಿಸಲಿಲ್ಲ. ನಿರ್ಮಿತಿ ಕೇಂದ್ರ ಅಧಿಕಾರಿ ಅರುಣ್ ಕುಮಾರ್, ಭಾಗಿಯಾದ ಇಂಜಿನಿಯರ್ ಗಳನ್ನು ಸಸ್ಪೆಂಡ್ ಮಾಡುವವರೆಗು ಕಾಂಗ್ರೆಸ್ ಪಕ್ಷ ವಿರಮಿಸುವುದಿಲ್ಲ ಎಂದರು.
ಕಾಂಗ್ರೇಸ್ ಮುಖಂಡರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಪಕ್ಷ ಎಂದಿಗೂ ದ್ರೋಹ ಎಸಗಿಲ್ಲ. ಆದರೆ ನಕಲಿ ಮೂರ್ತಿ ನಿರ್ಮಾಣ ಮೂಲಕ ಧಾರ್ಮಿಕ ಭಾವನೆಯನ್ನು ಕೆರಳಿಸುವ ಕಾರ್ಯವಾಗಿದೆ. ಪ್ರವಾಸೋದ್ಯಮ ಸಚಿವರೊಂದಿಗೆ ಮಾತನಾಡಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಕಂಚಿನ ಪರಶುರಾಮ ಪ್ರತಿಮೆ ನಿರ್ಮಾಣ ಮಾಡಿಯೆ ಸಿದ್ಧ ಎಂದರು. ನಕಲಿ ಮೂರ್ತಿ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದ ಸಮಾನ ಮನಸ್ಕರಾದ ದಿವ್ಯನಾಯಕ್ ಸೇರಿದಂತೆ ಎಲ್ಲರನ್ನೂ ಅಭಿನಂದಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್, ಜಿಲ್ಲಾ ವಕ್ತಾರ ವಿಕಾಸ ಹೆಗ್ಡೆ, ಕೆಪಿಸಿಸಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಉಡುಪಿ ಪ್ರಸಾದ್ ಕಾಂಚನ್ , ಡಾ.ಅಂಶು , ಗೋಪಾಲ್ ಪೂಜಾರಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಡಿ ಅರ್ ರಾಜು ಕೆ.ಪಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಅನಿತಾ ಡಿಸೋಜ, ಕಿಶನ್ ಕೊಳ್ಕೆಭಯಲು, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಬಾಯಿರಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಕಾರ್ಯಕ್ರಮ ನಿರೂಪಿಸಿದರು…