ಕಾರ್ಕಳ: ನಾಪತ್ತೆಯಾಗಿದ್ದ ಹೆಡ್ ಕಾನ್ ಸ್ಟೇಬಲ್ ಶೃತಿನ್ ಶೆಟ್ಟಿ ಶವವಾಗಿ ಪತ್ತೆ || V4NEWS
ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಶೃತಿನ್ ಶೆಟ್ಟಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದು ಇಂದು ಅವರ ಶವವು ಕಾರ್ಕಳದ ಪುರಿಯ ಸಾರ್ವಜನಿಕ ಬಾವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶೃತಿನ್ ಶೆಟ್ಟಿ ಕಾಣೆಯಾಗಿರುವ ಕುರಿತು ಅವರ ಪತ್ನಿ ದೂರು ದಾಖಲಿಸಿದ್ದರು. ಕಾಪು ಜನಾರ್ದನ ದೇವಸ್ಥಾನ ಬಳಿಯಿರುವ ಅಂಗಡಿಮನೆ ನಿವಾಸಿಯಾಗಿರುವ ಶೃತಿನ್ ಶೆಟ್ಟಿ ಗುರುವಾರ ರಾತ್ರಿ 7.30ಕ್ಕೆ ಹೆಂಡತಿಗೆ ಫೋನ್ ಮಾಡಿ ನಾನು ನಂದಿಕೂರಿನಲ್ಲಿದ್ದು, ಮನೆಗೆ ಬರುತ್ತಿರುವುದಾಗಿ ಹೇಳಿದ್ದರು. ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು.
ರಾತ್ರಿಯಿಡೀ ಮನೆಗೆ ಬಾರದಿರುವ ಹಿನ್ನೆಲೆಯಲ್ಲಿ ಗಾಬರಿಯಾದ ಪತ್ನಿ ಪೂಜಾ ಶೆಟ್ಟಿ ಶುಕ್ರವಾರ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. 2008ರ ಬ್ಯಾಚಿನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದ ಶೃತಿನ್ ಶೆಟ್ಟಿ ಎರಡು ತಿಂಗಳ ಹಿಂದೆಯಷ್ಟೇ ಬಡ್ತಿಯಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಆಗಿ ಬಂದಿದ್ದರು.