ರಾಜ್ಯದಲ್ಲಿ ಬಹತೇಕ ಶಾಂತಿಯುತವಾಗಿ ನಡೆದ ಮತದಾನ : ಇವಿಎಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ
ವಿಧಾನಸಭೆ ಚುನಾವಣೆಯ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ. ಸರಾಸರಿ ಶೇ. 72.67 ಮತದಾನ ದಾಖಲಾಗಿದೆ. ಇದರೊಂದಿಗೆ 2,615 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದಂತಾಗಿದೆ. 224 ಕ್ಷೇತ್ರಗಳ 58,545 ಮತಗಟ್ಟೆಗಳಲ್ಲೂ ಮತದಾನ ಮುಗಿದಿದೆ. ಈ ಬಾರಿ ಎಲ್ಲೂ ಮರು ಮತದಾನ ಇಲ್ಲದಿರುವುದು ವಿಶೇಷ. ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನ ಕಂಡುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.75.87 ಮತದಾನ ದಾಖಲಾಗಿದ್ದು ಅಭ್ಯರ್ಥಿಗಳ ಎದೆಯಲ್ಲಿ ಡವ ಡವ ಶುರುವಾಗಿದೆ. ಜಿಲ್ಲೆಯಲ್ಲಿ ಒಟ್ಟು 17,81,389 ಮತದಾರರಿದ್ದು ಈ ಪೈಕಿ 13,51,582 ಮತದಾರರು ಮತ ಚಲಾಯಿಸಿದ್ದಾರೆ. 8,70,991 ಪುರುಷ ಮತದಾರರಲ್ಲಿ 6,58,761 ಹಾಗೂ 9,10,314 ಮಹಿಳಾ ಮತದಾರರಲ್ಲಿ 6,92,803 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಬೆಳ್ತಂಗಡಿ ಶೇ.80.33 ಮತ ದಾಖಲಿಸಿದ್ದು ಮೊದಲ ಸ್ಥಾನ ಪಡೆದಿದೆ. ನಗರ ಪ್ರದೇಶದ ಜನ ನಿರಾಸಕ್ತಿ ತೋರಿದ್ದು ಕಾರಣವೋ ಏನೋ, ಶೇ.64.89 ಮತದೊಂದಿಗೆ ಮಂಗಳೂರು ದಕ್ಷಿಣ ಕೊನೆಯ ಸ್ಥಾನದಲ್ಲಿದೆ. ಪುತ್ತೂರು ಕ್ಷೇತ್ರದಲ್ಲಿ 79.91 ಮತ ಚಲಾವಣೆಯಾಗಿದ್ದು ಗೆಲುವಿನ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.
ಮೂಡುಬಿದಿರೆಯಲ್ಲಿ ಶೇ. 76, ಮಂಗಳೂರು ನಗರ ಉತ್ತರದಲ್ಲಿ ಶೇ.71.6, ಮಂಗಳೂರು (ಉಳ್ಳಾಲ) ನಲ್ಲಿ ಶೇ. 77.38, ಬಂಟ್ವಾಳದಲ್ಲಿ ಶೇ 80.27 ಹಾಗೂ ಸುಳ್ಯದಲ್ಲಿ ಶೇ.78.53 ಮತದಾನವಾಗಿದೆ.