ಕಿನ್ನಿಗೋಳಿ : ರಾಷ್ಟ್ರೀಯ ಕೈಮಗ್ಗ ಸಪ್ತಾಹ : ಹಿರಿಯ ನೇಕಾರರಿಗೆ ಪ್ರಶಸ್ತಿ ,ಖಾದಿ, ಕೈಮಗ್ಗ ಬಳಸಿ : ರಾಜ್ಯಸಭಾ ಸದಸ್ಯ ಅನಿಲ್ ಪ್ರಸಾದ್ ಹೆಗ್ಡೆ ಮನವಿ

ಕೈಮಗ್ಗದ ಸೀರೆಗಳನ್ನು ಹಾಗೂ ಖಾದಿ ವಸ್ತ್ರಗಳನ್ನು ಧರಿಸಲು ಜನತೆ ಹೆಚ್ಚಿನ ಒಲವು ತೋರಿಸಬೇಕು, ಈ ರೀತಿ ಮಾಡಿದರೆ ಮಾತ್ರ ಖಾದಿ ಮತ್ತು ಕೈಮಗ್ಗವನ್ನು ಉಳಿಸಲು ಸಾಧ್ಯ , ಈ ನಿಟ್ಟಿನಲ್ಲಿ ಉಡುಪಿ ಸೀರೆಯನ್ನು ಜನಪ್ರಿಯತೆಗೊಳಿಸಿದ ಕದಿಕೆ ಟ್ರಸ್ಟ್‍ನ ಕೆಲಸ ಶ್ಲಾಘನೀಯವಾದುದು ಎಂದು ಬಿಹಾರದಿಂದ ರಾಜ್ಯಸಭೆಗೆ ಆಯ್ಕೆಯಾದ ಕನ್ನಡಿಗ ರಾಜ್ಯಸಭಾ ಸದಸ್ಯ ಅನಿಲ್ ಪ್ರಸಾದ್ ಹೆಗ್ಡೆ ಅವರು ಹೇಳಿದರು.ಮಂಗಳೂರು ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸಂಘದಲ್ಲಿ ಕದಿಕೆ ಟ್ರಸ್ಟ್ ನಬಾರ್ಡ್ ಬೆಂಬಲದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ಕೈಮಗ್ಗ ಸಪ್ತಾಹ ಹಾಗೂ ನೇಕಾರರ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯಸಭಾ ಸದಸ್ಯ ಅನಿಲ್ ಅವರು ಮಾತನಾಡಿ ಕೈಮಗ್ಗ ಹಾಗೂ ಖಾದಿಯನ್ನು ಉಳಿಸುವಲ್ಲಿ ಸರಕಾರದ ಪಾತ್ರಕ್ಕಿಂತಲೂ ಜನತೆಯ ಪಾತ್ರ ಬಹುಮುಖ್ಯವಾದುದು ಎಂದು ಹೇಳಿದರು.

ಜನತೆ ಸ್ವಯಂ ಪ್ರೇರಣೆಯಿಂದ ದೇಸಿಯ ಉತ್ಪನ್ನಗಳನ್ನು ಬಳಸಿದರೆ ಗ್ರಾಮೀಣ ಗುಡಿಕೈಗಾರಿಕೆ ಬೆಳೆಯುತ್ತದೆ, ಆ ಮೂಲಕ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿರಿಯ ನೇಕಾರರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ತಾಳಿಪಾಡಿ ನೇಕಾರ ಸಂಘದ ಹಿರಿಯ ಸದಸ್ಯ ಬೂಬ ಶೆಟ್ಟಿಗಾರ್ ಅವರಿಗೆ ನೇಕಾರ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಶಿವಳ್ಳಿ ನೇಕಾರರ ಸಂಘದ ಸದಸ್ಯ ಜಾರ್ಜ್ ಅಮ್ನನ್ನ , ಉಡುಪಿ ನೇಕಾರ ಸಂಘದ ವಿಠಲ ಶೆಟ್ಟಿಗಾರ್ ,ಪಡುಪಣಂಬೂರು ನೇಕಾರ ಸಂಘದ ಬೂಬ ಶೆಟ್ಟಿಗಾರ್ , ತಾಳಿಪಾಡಿ ನೇಕಾರರ ಸಂಘದ ಮಾಲತಿ ಶೆಟ್ಟಿಗಾರ್ ಅವರಿಗೆ ಉತ್ತಮ ನೇಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಹಿರಿಯ ನೇಕಾರ ವ್ಯಾಸರಾಯ ಶೆಟ್ಟಿಗಾರ್ , ಕಿನ್ನಿಗೋಳಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಾಯೀಶ ಚಾಟ , ನಬಾರ್ಡ್ ಅಧಿಕಾರಿ ಸಂಗೀತಾ ಕರ್ತಾ , ಸೆಲ್ಕೋ ಸಂಸ್ಥೆಯ ಆಡಳಿತ ಅಧಿಕಾರಿ ಗುರುಪ್ರಕಾಶ್ ಶೆಟ್ಟಿ , ಮಂಗಳೂರು ವಿ.ವಿ. ಕಾಲೇಜು ನಿಕಟಪೂರ್ವ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರ್ , ವಿಫೋರ್ ನ್ಯೂಸ್ ಚಾನೆಲ್ ಸಂಪಾದಕ ತಾರಾನಾಥ್ ಗಟ್ಟಿ ಕಾಪಿಕಾಡ್ ಭಾಗವಹಿಸಿದರು.

ಉಡುಪಿ ಸೀರೆ ವೆಬ್ ಸೈಟ್ ಬಗ್ಗೆ ಕದಿಕೆ ಟ್ರಸ್ಟ್ ನ ಅಧ್ಯಕ್ಷೆ ಮಮತಾ ರೈ ಅವರು ಮಾಹಿತಿ ನೀಡಿದರು. ಬಿ.ಸಿ.ಶೆಟ್ಟಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಾಧವ ಶೆಟ್ಟಿಗಾರ್ ವಂದಿಸಿದರು. ಪಾವನ ಆಚಾರ್ಯ ನೇತೃತ್ವದದ ವಿಪಂಚಿ ಬಳಗದ ವೀಣಾ ವಾದನ ಜೊತೆಗೆ ನೇಕಾರರ ಚರಕ ಜುಗಲ್ ಬಂಧಿ ಕಾರ್ಯಕ್ರಮಕ್ಕೆ ಇಂಪು ತಂದುಕೊಟ್ಟಿತು. , ನೇಕಾರರು ತಾವೇ ನೇಯ್ದ ಸೀರೆಗಳೊಂದಿಗೆ ಫ್ಯಾಶನ್ ನಡಿಗೆ ಕಾರ್ಯಕ್ರಮ ನಡೆಸಿಕೊಟ್ಟರು. ದೀನೇಶ್ ಶೆಟ್ಟಿಗಾರ್ ಅವರು ಸಿದ್ದಪಡಿಸಿದ ಸರಳವಾದ ಆಟಿಯ ಊಟ ಕಾರ್ಯಕ್ರಮಕ್ಕೆ ಇನ್ನಷ್ಟು ಸವಿಯನ್ನು ತಂದಿತ್ತು.

Related Posts

Leave a Reply

Your email address will not be published.