ಕುಂದಾಪುರ: ಚೂರಿ ಇರಿತಕ್ಕೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತ್ಯು
ಕುಂದಾಪುರದಲ್ಲಿ ರವಿವಾರ ಸಂಜೆ ವೇಳೆ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕುಂದಾಪುರದ ರಾಘವೇಂದ್ರ (42) ರಾಘು ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕುಂದಾಪುರದ ಖಾರ್ವಿಕೇರಿ ನಿವಾಸಿ ರಾಘವೇಂದ್ರ ಶೇರುಗಾರ್ ರವಿವಾರ ರಾತ್ರಿ ಚಿಕ್ಕಮ್ಮನಸಾಲು ರಸ್ತೆಯ ಪೋಸ್ಟ್ ಆಫೀಸ್ ಬಳಿ ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರಿಗೆ ಸೈಡ್ ಕೊಡುವ ವಿಚಾರದಲ್ಲಿ ಗಲಾಟೆಯಾಗಿತ್ತು. ಗಲಾಟೆ ತೀವ್ರಗೊಂಡು ವ್ಯಾಗನರ್ ಕಾರಿನಲ್ಲಿದ್ದ ವ್ಯಕ್ತಿ ರಾಘವೇಂದ್ರರ ಕಾಲು ಮತ್ತು ಹೃದಯ ಭಾಗಕ್ಕೆ ಚೂರಿಯಿಂದ ಇರಿದು ಪರಾರಿಯಾಗಿದ್ದನು. ತೀವ್ರ ರಕ್ತಸ್ರಾವದೊಂದಿಗೆ ಒದ್ದಾಡುತ್ತಿದ್ದ ರಾಘವೇಂದ್ರರನ್ನು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರವಿವಾರ ತಡರಾತ್ರಿಯೇ ರಾಘವೇಂದ್ರರನ್ನು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಪಡಿಸಲಾಗಿತ್ತು. ಆದರೆ ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ರಾಘವೇಂದ್ರ, ಕಳೆದ ಕೆಲ ವರ್ಷಗಳಿಂದ ಕುಂದಾಪುರದಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.