ಕುಂದಾಪುರ: ತಾಲೂಕು ಆಸ್ಪತ್ರೆಗೆ ವಿದ್ಯಾರ್ಥಿಗಳ ಭೇಟಿ, ಆಸ್ಪತ್ರೆಯ ಕಾರ್ಯವೈಖರಿ ವೀಕ್ಷಣೆ

ಕುಂದಾಪುರ: ಕಂಡ್ಲೂರಿನ ಝಿಯಾ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಕಾರ್ಯವೈಖರಿಗಳನ್ನು ವೀಕ್ಷಿಸಿದರು.

ಈ ಸಂದರ್ಭ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ಶಸ್ತ್ರಚಿಕಿತ್ಸಕರಾದ ಡಾ. ರೊಬರ್ಟ್ ರೆಬೆಲ್ಲೋ ವಿದ್ಯಾರ್ಥಿಗಳ ಜೊತೆ ಮಾತನಾಡಿ, ಸರಕಾರಿ ಸೇವೆ ಮಾಡುವುದು ಉತ್ತಮ ಅವಕಾಶ.

ಅದರಲ್ಲೂ ಸರಕಾರಿ ವೈದ್ಯ ವೃತ್ತಿ ದೇವರು ಮೆಚ್ಚುವ ಕೆಲಸ. ಯಾವುದೇ ಹಣ, ಹೆಸರಿನ ಹಿಂದೆ ಹೋಗಬಾರದು. ಶಿಕ್ಷಕರು ಮಕ್ಕಳಿಗೆ ಪಾಠ ಕಲಿಸುವಾಗ ಸೇವಾ ಮನೋಭಾವನೆ ಮೂಲಕ ಜಾತಿ, ಮತ, ಬೇಧವಿಲ್ಲದ ಸಮಾಜಕಳಕಳಿಯ ಚಿಂತನೆ ಮೂಡಿಸಬೇಕು ಎಂದರು.

ಇದೇ ವೇಳೆ ವಿದ್ಯಾರ್ಥಿಗಳು ರೋಗಿಗಳ ಬಳಿ ತೆರಳಿ ಆರೋಗ್ಯಕ್ಷೇಮ ವಿಚಾರಿಸಿ ಹಣ್ಣುಹಂಪಲು ನೀಡಿದರು. ವೈದ್ಯರುಗಳನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆದು ಅಗತ್ಯ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.

ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರದ ಪ್ರಧಾನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಸದಸ್ಯ ಮನ್ಸೂರ್ ಮರವಂತೆ, ಸಮಾಜಸೇವಕ ಝುನೇದ್, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಪಿಜಿಶಿಯನ್ ಡಾ. ನಾಗೇಶ್, ಶುಶ್ರೂಷಕ ಪ್ರಭಾರ ಅಧೀಕ್ಷಕಿ ಮಂಜುಳಾ ಶುಶ್ರೂಷಕಾಧಿಕಾರಿ ಶ್ಯಾಮಲಾ, ಆಪ್ತ ಸಮಾಲೋಚಕಿ ವೀಣಾ, ಐಟಿಡಿಪಿ ಸಂಯೋಜಕಿ ಸುಮಲತಾ, ಐಸಿಟಿಸಿ ಆಪ್ತ ಸಮಾಲೋಚಕಿ ನಳಿನಾಕ್ಷಿ ಹಾಗೂ ಆಸ್ಪತ್ರೆ ಸಿಬ್ಬಂದಿಗಳು, ಝಿಯಾ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಂಡ್ಲೂರು ಇದರ ಚಯರ್ಮೆನ್ ಮೌಲಾನಾ ಉಬೇದುಲ್ಲಾ ನದ್ವಿ, ಟ್ರಸ್ಟಿ ಮೌಲಾನಾ ರಿಝ್ವಾನ ನದ್ವಿ, ಶಾಲೆಯ ಸಹಾಯಕ ಮುಖ್ಯೋಪಾಧ್ಯಾಯಿನಿ ಕುಬ್ರಾ ನವಾಝ್, ಸಹ ಶಿಕ್ಷಕರಾದ ರುಝೈನಾ ಅಂಝುಮ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.