ಲಾಡುಲಾಲ್ ಲಬಕ್ ದಾಸ್
ಬೆಂಗಳೂರಿನ ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿ ಹಾಗೂ ಜೂಗನಹಳ್ಳಿಯ ಬಂಗಲೆ ವಾಸಿ ಲಾಡುಲಾಲ್ ಪಿಟ್ಲಿಯಾ ಅವರು ಈಗ ರಾಜಸ್ತಾನದ ಸಹಾರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎನ್ನುತ್ತದೆ ಸುದ್ದಿ.
ಬೆಂಗಳೂರಿನ ಚಿಕ್ಕಪೇಟೆಯ ಬಟ್ಟೆ ವ್ಯಾಪಾರವೆಲ್ಲ ಗುಜರಾತ್, ರಾಜಸ್ತಾನಿಗಳ ಕಯ್ಯಲ್ಲಿ ಇದೆ ಎಂಬ ಕೆಲವರದು ಟೀಕೆಯಲ್ಲ ಸತ್ಯ. ಕನ್ನಡ ಹೋರಾಟಗಾರರು ಕೆಲವರು ರಾಜ್ಯೋತ್ಸವದ ಸಮಯದಲ್ಲಿ ಇದನ್ನು ನಗದು ಮಾಡಿಕೊಳ್ಳುವುದು ನಡೆದಿದೆ. ನಲವತ್ತೈದು ವರುಷಗಳ ಹಿಂದೆ ಚಿಕ್ಕಪೇಟೆಯಲ್ಲಿ ಒಂದು ಫಲಕ ಇತ್ತು. ಅದನ್ನು ಕನ್ನಡಿಗರು ಹಸುಮುಖ ಹುಲಿಬಾಯಿ ಎಂದು ಓದುತ್ತಿದ್ದರು. ಆಗ ಅದರ ಅರ್ಥವೂ ಗೊತ್ತಿರಲಿಲ್ಲ ಬಿಡಿ. ಇತರ ಭಾಷಿಕರು ಬರೆಸುವ ಬೋರ್ಡಿನಿಂದಾಗಿ ಆ ಹೆಸರು ಹಾಗಾಗಿತ್ತು. ನಿಜವಾಗಿ ಅದು ಹಸ್‍ಮುಖ್ ಹಲ್‍ಭಾಯಿ ಎಂದರೆ ನಗುಮುಖ ನೇಗಿಲ ತಮ್ಮ.
ಬೆಂಗಳೂರಿನ ಬಟ್ಟೆ ವ್ಯಾಪಾರಿ ಲಾಡು ಲಾಲ್ ಹೆಸರಿನ ಬಗೆಗೆ ನಾನಾ ಟಿಪ್ಪಣಿಗಳು ಇವೆ. ಕೆಲವು ಕನ್ನಡಿಗರು ಲಾಡು ಎಲ್ಲ ಇವರೇ ತಿಂದು ನಮಗೆ ಕಾಡು ತೋರಿಸುವ ವ್ಯಾಪಾರಿಗಳು ಎನ್ನುವುದಿದೆ. ಲಾಡು ಶಬ್ದ ಬಡಗಣ ಭಾರತದ್ದಾದರೆ, ಉಂಡೆ ಎನ್ನುವುದು ತುಳು ಕನ್ನಡ ದ್ರಾವಿಡವಾಗಿದೆ. ಅವರ ಸಿಹಿ ಉರುಟು ಲಾಡು, ನಮ್ಮ ಸಿಹಿ ಉರುಟು ಉಂಡೆ ಎಂದು ಅಲ್ಲ.
ಈ ಲಾಡು ಹೆಸರು ಕರ್ನಾಟಕಕ್ಕೆ ಬಹಳ ಹಳೆಯದು. ಗುಜರಾತಿನ ಒಂದು ಲಾಡು ಮುಂದೆ ಲಾಡ್ ಆದ ವ್ಯಾಪಾರಿ ಕುಟುಂಬ ಟಿಪ್ಪು ಸುಲ್ತಾನ್ ಕಾಲದಲ್ಲಿ ಬೆಂಗಳೂರು, ಮೈಸೂರಿಗೆ ಬಂದು ನೆಲೆಸಿತು.
ಬ್ರಿಟಿಷ್ ಮತ್ತು ಟಿಪ್ಪು ಯುದ್ಧಗಳಿಂದಾಗಿ ಈ ಕುಟುಂಬ ಮದರಾಸಿಗೆ ವಲಸೆ ಹೋಯಿತು. ಪ್ಯಾಟರ್ಸ್ ರಸ್ತೆಯಲ್ಲಿ ಇವರ ವ್ಯವಹಾರ ಮತ್ತು ದೊಡ್ಡ ಆಸ್ತಿ, ರಸ್ತೆಗಳು, ಸ್ಮಾರಕಗಳೆಲ್ಲ ಇವೆ. ಮಹಾ ದಾನಿ ಎನ್ನಲಾದ ಲಾಡ್ ಗೋವಿಂದ ದಾಸ್ ಸ್ಮಾರಕ ಇದೆ. ಲಾಡ್ ಕೃಷ್ಣ ದಾಸ್, ಬಾಲ ಮುಕುಂದದಾಸ್ ಮೊದಲಾದ ರಸ್ತೆಗಳು ಇವೆ. ನಾಲಿಗೆ ಸುಟ್ರೂ ತಮಿಳೇ ಹೊರತು ಹಿಂದಿ ಮಾತನಾಡಲಾರೆ ಎನ್ನುವ ತಮಿಳರಲ್ಲೂ ಇವರು ವ್ಯಾಪಾರ ಮಾಡಿದ್ದಾರೆ. ಇಲ್ಲಿ ಇನ್ನೊಂದು ವಿಷಯ ಬೆಂಗಳೂರು ಒತ್ತಿನ ಹಳ್ಳಿಗಳಲ್ಲಿ ಮತ್ತು ಚೆನ್ನೈ ಮೂಲ ಭಾಗಗಳಲ್ಲಿ ತೆಲುಗರೇ ಹೆಚ್ಚು. ಮದರಾಸನ್ನು ಆಂಧ್ರಕ್ಕೆ ಸೇರಿಸಬೇಕು ಎಂಬ ಹೋರಾಟವೂ ನಡೆದಿತ್ತು. ಕೋಲಾರದ ತೆಲುಗರು ಭಾಷಾವಾರು ರಾಜ್ಯ ರಚನೆ ವೇಳೆ, ತೆಲುಗು ನಮ್ಮ ಮನೆ ಮಾತು, ಕನ್ನಡ ನಮ್ಮ ಮಾರುಕಟ್ಟೆ ಭಾಷೆ ಎಂದಿದ್ದರು.
ಲಾಡ್ ಲಬಕ್ ದಾಸ್ ಎನ್ನುವುದು ತಮಿಳಿನ ಪ್ರಸಿದ್ಧ ಹಾಸ್ಯ ಪಾತ್ರ. ಅದು ನಾನಾ ಬಗೆಯಲ್ಲಿ ಬರಹ, ನಾಟಕ ಎಂದು ಅಲ್ಲಿ ಜನ ರಂಜಿಸಿದೆ. ಮಂಗಳೂರಿನ ಕೊಡುಗೈ ದಾನಿ ಆಗಿದ್ದ ರಾಮಪ್ಪಣ್ಣನವರನ್ನು ರಾಂಪ ಜೋಕ್ಸ್‍ನಲ್ಲಿ ಮುಳುಗಿಸಿದ್ದಕ್ಕೂ ಇದಕ್ಕೂ ಸಂಬಂಧವಿಲ್ಲ. ಲಾಡ್ ಲಬಕ್ ದಾಸ್ ಎಂಬುದನ್ನು ಬ್ರಿಟಿಷರ ಕಾಲದ ಜನಪ್ರಿಯ ರಾಜ್ಯಪಾಲರಾಗಿದ್ದ ಲಾರ್ಡ್ ಲಬೊಗ್ ಡಾಶ್ ಜೊತೆಗೆ ಚೆನ್ನೈನವರು ಕಲಕುವುದೂ ಇದೆ. ಇವರು ಭಾರತೀಯರ ಪರ ಕೆಲಸ ಮಾಡಿದ ಬ್ರಿಟಿಷ್ ಎಂದು ಖ್ಯಾತರು.
ಪ್ರೀತಿಯ ಲಾಡ್‍ಲಿ ಇಲ್ಲವೆ ಲಾಡ್‍ಲ ಎಂಬ ಡಾರ್ಲಿಂಗ್ ಅರ್ಥದ ಶಬ್ದದಿಂದ ಲಾಡು, ಲಾಡ್ ಇತ್ಯಾದಿ ಹೆಸರುಗಳು ಬಂದಿವೆ. ಕೆಲವು ವಿಚಿತ್ರ ಹೆಸರುಗಳು ಇವೆ. ಗುಜರಾತಿನ ಪ್ರಸಿದ್ಧ ಹೆಸರುಗಳಲ್ಲಿ ಒಂದು ಪಂಕಿಲ. ಇದಕ್ಕೆ ಮಣ್ಣಿನ ಮೂಲದ ಎಂದು ಅರ್ಥ. ಮಣ್ಣಿನ ಮಗ ಎಂದು ಹೇಳಿದರೆ ಮಾಜೀ ಪ್ರಧಾನಿ ದೇವೇಗೌಡರೂ ನಕ್ಕು ಬಿಟ್ಟಾರು.
✍ ಬರಹ: ಪೇರೂರು ಜಾರು