ಏಣೂರು ಮೂರನೆಯ ಮಹಾಮಸ್ತಕಾಭಿಷೇಕ

ಅಚ್ಚ ತುಳು ನೆಲ ವೇಣೂರಿನಲ್ಲಿ ಮಹಾಮಸ್ತಕಾಭಿಷೇಕ. ಪ್ರತಿ 12 ವರ್ಷಕ್ಕೊಮ್ಮೆ ಗೊಮ್ಮಟ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಆದಿಯಲ್ಲಿ ಕ್ರಮವಾಗಿ ಮೂರು ಮಹಾ ಮಸ್ತಕಾಭಿಷೇಕ ನಡೆದು ಮಧ್ಯೆ ನಾನಾ ಕಾರಣಕ್ಕೆ ನಿಂತು ಹೋಗಿ ತೀರಾ ಕೊನೆಗೆ ಆರಂಭವಾದುದು ವೇಣೂರು ಮಹಾಮಸ್ತಕಾಭಿಷೇಕ. 2000 ಮತ್ತು 2012ನೇ ಇಸವಿಯಲ್ಲಿ ನಡೆದಿತ್ತು. ಇದು ವೇಣೂರಿನ ಈ ಕಾಲದ ಮೂರನೆಯ ಮಹಾಮಸ್ತಕಾಭಿಷೇಕ. ತುಳುನಾಡಿನ ಜೈನ ಭೂಮಿಕೆಯ ಮುಖ್ಯ ಕೊಂಡಿಗಳಾದ ಬೆದ್ರ ಅಥವಾ ಮೂಡಬಿದಿರೆ, ಕಾರ್ಲ ಇಲ್ಲವೇ ಕಾರ್ಕಳ, ಕುಡುಮ ಅಲ್ಲವೇ ಧರ್ಮಸ್ಥಳಗಳ ಜೈನ ಧಾರ್ಮಿಕ ಪಥಗಳ ನಡುವೆ ವೇಣೂರು ಇದೆ.

ಕರ್ನಾಟಕದಲ್ಲಿ 20 ಅಡಿಗಿಂತ ಎತ್ತರದ 5 ಗೊಮ್ಮಟ ಮೂರ್ತಿಗಳು ಇವೆ. ಅಲ್ಲದೆ ಸಣ್ಣ ಮೂರ್ತಿಗಳು, ಉಬ್ವು ಶಿಲ್ಪಗಳು ಹಲವು ಇವೆ. ಬಾದಾಮಿಯ ಗುಹಾಲಯ ಸಹಿತ ಇಂತಾ ಉಬ್ಬು ಶಿಲ್ಪ ಗೊಮ್ಮಟರನ್ನು ಹಲವು ಕಡೆ ನೋಡಬಹುದು. 57 ಅಡಿ ಎತ್ತರದ ಶ್ರವಣಬೆಳಗೊಳದ ಗೊಮ್ಮಟ, 42 ಅಡಿಯ ಕಾರ್ಕಳದ ಗೊಮ್ಮಟ, 39 ಅಡಿಯ ಧರ್ಮಸ್ಥಳದ ಗೊಮ್ಮಟ, 38 ಅಡಿಯ ವೇಣೂರು ಗೊಮ್ಮಟ, 20 ಅಡಿಯ ಮೈಸೂರು ಬಳಿಯ ಗೊಮ್ಮಟಗಿರಿಯ ಗೊಮ್ಮಟ ಈ ಅಯ್ದು ಮುಖ್ಯವಾದವುಗಳು. ವೇಣೂರು ಎಂಬ ಊರು ಪಲ್ಗುಣಿ ನದಿಯ ಏಣಿನ ಏರಿನಲ್ಲಿ ಇರುವುದರಿಂದ ಇದು ಏಣೂರು. ಕಾಲಾನಂತರದಲ್ಲಿ ವೇಣೂರು ಆಗಿದೆ. ತುಳುನಾಡಿನಲ್ಲಿ ಏಣಗುಡ್ಡೆ ಮೊದಲಾದ ಈ ರೀತಿಯ ಸ್ಥಳನಾಮಗಳು ಹಲವು ಇವೆ.
ವೇಣೂರು 1154ರಿಂದ 1786ರವರೆಗೆ ಅಜಿಲ ವಂಶದ ಆಳುಗೆ ಕಂಡ ಸಣ್ಣ ರಾಜ್ಯದ ರಾಜಧಾನಿ ಆಗಿತ್ತು. 1604ರಲ್ಲಿ ತಿಮ್ಮಣ್ಣಾಜಿಲನು ವೇಣೂರು ಗೊಮ್ಮಟನನ್ನು ನಿಲ್ಲಿಸಿದ್ದ. ಈಗಲೂ ಈ ಸುತ್ತ ಸಾಕಷ್ಟು ಜೈನರು ಇದ್ದಾರೆ.

ಕರ್ನಾಟಕದಲ್ಲಿ ಅನಧಿಕೃತವಾಗಿ ಜೈನರು ಕ್ರಿಸ್ತಪೂರ್ವ ಒಂದೂವರೆ ಸಾವಿರ ವರುಷಗಳ ಹಿಂದೆ ಬಂದಿರಬಹುದು. ಆದರೆ ಅಧಿಕೃತವಾಗಿ ಅವರು ಬಂದುದು ಕ್ರಿಸ್ತ ಪೂರ್ವ ಮೂರನೆಯ ಶತಮಾನದಲ್ಲಿ. ಮೌರ್ಯ ಸಾಮ್ರಾಜ್ಯದಲ್ಲಿ ತೀವ್ರ ಬರಗಾಲ ಇತ್ತು. ಚಂದ್ರಗುಪ್ತ ಮೌರ್ಯನಿಗೆ ವಯಸ್ಸೂ ಆಗಿತ್ತು. ಆತನು ರಾಜ್ಯಾಧಿಕಾರವನ್ನು ಮಗ ಬಿಂದುಸಾರನಿಗೆ ಒಪ್ಪಿಸಿ ಭದ್ರಬಾಹು ಜೈನ ಮುನಿಯ ಜೊತೆಗೆ ತೆಂಕಣಕ್ಕೆ ಬಂದನು. ಬಂದು ನಿಂತುದು ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿ. ಇಲ್ಲಿ ಚಂದ್ರಗುಪ್ತನ ಬಸದಿ, ಗುಹೆ ಇತ್ಯಾದಿ ಇವೆ. ಇದೇ ಗುಹೆಯಲ್ಲಿ ಚಂದ್ರಗುಪ್ತ ಮೌರ್ಯನು ಸಲ್ಲೇಖನ ವ್ರತ ನಡೆಸಿ ಸಾವಿಗೀಡಾದ. ಸಲ್ಲೇಖನ ಎಂದರೆ ಆಹಾರ ತ್ಯಜಿಸಿ ತಾವೇ ಧ್ಯಾನಸ್ಥ ಸಾವು ಕಾಣುವುದಾಗಿದೆ. ಗಂಗ, ಹೊಯ್ಸಳ ಮೊದಲಾದ ಜೈನ ರಾಜಸತ್ತೆಯಲ್ಲದೆ ಕರ್ನಾಟಕದ ಎಲ್ಲ ರಾಜಸಭೆಗಳಲ್ಲಿ ಜೈನರು ಇದ್ದರು ಮತ್ತು ಕರ್ನಾಟಕದ ರಾಜಸತ್ತೆಗಳು ಜೈನ ಧರ್ಮವನ್ನು ಪೆÇೀಷಿಸಿವೆ.
ಕರ್ನಾಟಕದಲ್ಲಿ ಜೈನ ಧರ್ಮವೇ ಹಲವಕ್ಕೆ ಆದಿಯಾಗಿದೆ. ಆದಿಕವಿ ಪಂಪನಿಂದ ಹಿಡಿದು ಹಂಪನಾವರೆಗೆ ಸಾಹಿತ್ಯ ಸಂಶೋಧನಾ ಪರಂಪರೆ ಇದೆ. ಮೂಡಬಿದಿರೆಯ ರತ್ನಾಕರವರ್ಣಿಯಂತೂ ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು, ರಯ್ಯಾ ಮಂಚಿದಿ ಎನೆ ತೆಲುಗ, ಅಯ್ಯಯ್ಯೊ ಎಂಚ ಪೆÇರ್ಲಾಂಡೆಂದು ತುಳುವರು ಮಯ್ಯುಬ್ಬಿ ಕೇಳಬೇಕಣ್ಣ ಎಂದಿದ್ದಾರೆ. ಮಹಾಮಸ್ತಕಾಭಿಷೇಕ ಅಯ್ಯಯ್ಯ ಎಂಚ ಪೆÇರ್ಲಾಂಡು ಆದೀತು ಬಿಡಿ.

ವೇಣೂರಿನ ಗೊಮ್ಮಟ ಮೂರ್ತಿಯನ್ನು ಬೀರು ಕಲ್ಕುಡ ಕೆತ್ತಿದ್ದಾಗಿ ತುಳು ಪಾಡ್ದನ ಹೇಳುತ್ತದೆ. ಶ್ರವಣಬೆಳಗೊಳ, ಕಾರ್ಕಳದ ಗೊಮ್ಮಟರನ್ನೂ ಬೀರು ಕಲ್ಕುಡ ಕೆತ್ತಿದನಂತೆ ಅದು ಅಸಾಧ್ಯ ಶ್ರವಣಬೆಳಗೊಳ ಕಾರ್ಕಳ ಕಾಲ 500 ವರುಷದಷ್ಟು, ಕಾರ್ಕಳ ವೇಣೂರು ಗೊಮ್ಮಟ ಕಾಲ 150 ವರುಷದಷ್ಟು ಅಂತರ ಇದೆ. ಬೀರು ಕಲ್ಕುಡನ ವಂಶಜರೇ ಕೆತ್ತಿದರು ಎಂದು ಬೇಕಾದರೆ ಇಟ್ಟುಕೊಳ್ಳಬಹುದು. ತುಳುನಾಡಿನ ಪ್ರಖ್ಯಾತ ದೈವಗಳಾದ ಕಲ್ಕುಡ ಕಲ್ಲುರ್ಟಿ ಆದವರು ಈ ಬೀರು ಕಲ್ಕುಡ ಮತ್ತು ತಂಗಿ ಕಾಳಮ್ಮ ಎನ್ನುವುದು ತುಳು ಪಾಡ್ದನ ಕಥಾನಕ.

ಅತ್ತಿಮಬ್ಬೆ, ಕಾಳುಮೆಣಸು ರಾಣಿ ಚೆನ್ನಭೈರಾದೇವಿ, ಅಬ್ಬಕ್ಕಂದಿರು, ಸಿರಿಭೂವಲಯ ಬರೆದ ಕುಮುದೇಂದು ಮುನಿ, ಶಿವಕೋಟ್ಯಾಚಾರ್ಯ ಎಂದು ಜೈನ ಚರಿತ್ರೆ ಕರ್ನಾಟಕದ ತುಂಬ ಇದೆ. ಅಚ್ಚರಿ ಎಂದರೆ ಕುಮುದೇಂದು ಮುನಿ ಇದ್ದ ನಂದಿ ಬೆಟ್ಟದ ಪ್ರದೇಶ ಜೈನ ಬಾಣರಿಂದ ಆಳಲ್ಪಟ್ಟಿತ್ತು. ಬಾಣರು ತಮ್ಮನ್ನು ಮಹಾಬಲಿಯ ವಂಶಸ್ಥರು ಎಂದು ಹೇಳಿಕೊಂಡಿದ್ದಾರೆ. ತಿಮ್ಮಣ್ಣಾಜಿಲನು ತನ್ನನ್ನು ಚಾವುಂಡರಾಯನ ವಂಶಜ ಎಂದು ಹೇಳಿಕೊಂಡಿದ್ದಾನೆ. ಈ ಚಾವುಂಡರಾಯ ಗಂಗರ ವಂಶಜನಾಗಿದ್ದು, ಗಂಗ ಮಹಾ ದಂಡನಾಯಕ ಆಗಿದ್ದ.

ಇಡೀ ಭಾರತ ವ್ಯಾಪಿಸಿದ್ದ ಜೈನರು ಹಿಂದೂ ಎತ್ತಿದ ಕ್ರಿಸ್ತ ಶಕ ನಾಲ್ಕನೆಯ ಶತಮಾನದ ಗುಪ್ತ ಸಾಮ್ರಾಜ್ಯದ ಬಳಿಕ ತೆಂಕಣಕ್ಕೆ ಒತ್ತರಿಸಲ್ಪಟ್ಟರು. ತೆಂಕಣದಲ್ಲಿ ಅವರ ಪ್ರಮುಖ ನೆಲೆ ಕರ್ನಾಟಕ. ಬಿಟ್ಟಿದೇವನು ವೈಷ್ಣವಕ್ಕೆ ಮತಾಂತರ ಹೊಂದಿ ಹೊಯ್ಸಳ ಸಾಮ್ರಾಜ್ಯವನ್ನು ಅಡವಿಟ್ಟ ಮೇಲೆ ಜೈನರ ಮರಿ ರಾಜಸತ್ತೆಗಳು ಉಳಿದುದು ತುಳುನಾಡಿನಲ್ಲಿ ಮಾತ್ರ. ನಾಲ್ಕು ಪ್ರಮುಖ ಗೊಮ್ಮಟ ಮೂರ್ತಿಗಳು ಸಹ ತುಳುನಾಡಿನ ಮೂಲ ವಲಯದಲ್ಲೇ ಇವೆ. ಜೈನರು ತೀರಾ ಕೆಲ ಸಂಖ್ಯೆಯವರಾಗಲು ಕಾರಣ ಆ ಧರ್ಮದಲ್ಲಿ ಇರುವ ಜನಸಾಮಾನ್ಯರು ಆಚರಿಸಲು ಸಾಧ್ಯವಾಗದ ಧರ್ಮಾಚರಣೆ ನಿಯಮಗಳು ಎನ್ನಬಹುದು. ಎಷ್ಟು ಗಳಿಸಿದರೂ ಕೊನೆಗೆ ಎಲ್ಲ ಹಂಚಿ ಬರಿಗಯ್ಯಲ್ಲಿ ಹೋಗಬೇಕು. ಗೊಮ್ಮಟ ಬತ್ತಲೆ ನಿಂತುದರ ಅರ್ಥ ಸರ್ವ ಪರಿತ್ಯಾಗ. ಹಾಗಾಗಿ ಜೈನರು ಕೂಡ ಭಾರತದಲ್ಲಿ ಅಲ್ಪಸಂಖ್ಯಾತ ವರ್ಗದವರು. ವೇಣೂರು ಮಸ್ತಕಾಭಿಷೇಕಕ್ಕೂ ರಾಜ್ಯದ ಅಲ್ಪಸಂಖ್ಯಾತರ ಇಲಾಖೆಯಿಂದ ನಿಧಿ ದೊರಕಿದೆ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.