ಆಮ್ ಆದ್ಮಿ ಪಕ್ಷದಿಂದ ನಾಗರಿಕ ಕುಂದುಕೊರತೆ ಪೊರ್ಟಲ್ ಬಿಡುಗಡೆ
ಮಂಗಳೂರು : ಆಮ್ ಆದ್ಮಿ ಪಕ್ಷ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಶ್ರಯದಲ್ಲಿ ನಾಗರಿಕ ಕುಂದುಕೊರತೆ ಪೊರ್ಟಲ್ ಬಿಡುಗಡೆ ಕಾರ್ಯಕ್ರಮ ಅ.2, ಭಾನುವಾರದಂದು ನಗರದ ಬಿಜೈ ಚರ್ಚ್ ಹಾಲ್ ನಲ್ಲಿ ಜರಗಿತು. ಬಾಂಬೆ ಮತ್ತು ಕರ್ನಾಟಕ ಹೈ ಕೋರ್ಟ್ ನ ನಿವೃತ ನ್ಯಾಯಮೂರ್ತಿ ಮೈಕಲ್ ಎಫ್ ಸಲ್ದಾನ ಅವರು ನಾಗರಿಕ ಕುಂದುಕೊರತೆ ಪೊರ್ಟಲ್ ಅನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಇಂದು ಆರಂಭಗೊಂಡ ಈ ಪೋರ್ಟಲ್ ಒಂದು ವರ್ಷದೊಳಗೆ ಮಂಗಳೂರಿನಲ್ಲಿ ಸಂಚಲನ ತರಲಿದ್ದು, ಇಡೀ ದೇಶಕ್ಕೆ ಮಾದರಿಯಾಗಲಿದೆ. ಈ ಪೋರ್ಟಲ್ ಆಡಳಿತ ವ್ಯವಸ್ಥೆಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಜನಪರ ಕೆಲಸ ಮಾಡಲು ಕಾರಣವಾಗುತ್ತದೆ ಎಂದರು.
ಅರವಿಂದ್ ಕೇಜ್ರಿವಾಲ್ ಒಬ್ಬ ಹಾರ್ಡ್‌ಕೋರ್ ವೃತ್ತಿಪರ ವ್ಯಕ್ತಿ ಆಗಿದ್ದಾರೆ. ಅವರನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಅವರು ಮಾಹಿತಿ ಇಟ್ಟು ಕೊಂಡು ಸಂಪೂರ್ಣ ಡೇಟಾದೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಅಂತವರ ನೇತ್ರತ್ವದಲ್ಲಿರುವ ಪಕ್ಷದೊಂದಿಗೆ ಕೈಜೊಡಿಸುವುದು ತುಂಬಾ ಹೆಮ್ಮೆಯ ವಿಚಾರ. ಇಂದಿನ ಆಡಳಿತದಲ್ಲಿ ಪಕ್ಷಾಂತರ ವಿರೋಧಿ ಕಾನೂನು ಬಹಳಷ್ಟು ದುರ್ಬಳಕೆಯಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ 167 ಶಾಸಕರನ್ನು ಖರೀದಿಸಲಾಗಿದೆ ಮತ್ತು 6 ರಾಜ್ಯ ಸರ್ಕಾರಗಳನ್ನು ಬಿಳಿಸಲಾಗಿದೆ. ಇದರಿಂದ ದೇಶದ ಮೇಲೆ ತುಂಬಾ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ನ್ಯಾಯಮೂರ್ತಿ ಮೈಕಲ್ ಎಫ್ ಸಲ್ದಾನ ಅವರು ಅಭಿಪ್ರಾಯ ಪಟ್ಟರು.
ಆಮ್ ಆದ್ಮಿ ಪಕ್ಷ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸಂತೋಷ ಕಾಮತ್ ಅವರು ಮಾತನಾಡಿ, ನಮ್ಮ ಪಕ್ಷ ಐದು ವಿಚಾರಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಎಲ್ಲಾ ಮಕ್ಕಳಿಗೂ ವಿದ್ಯಾಭ್ಯಾಸದ ವ್ಯವಸ್ಥೆ ಸಿಗಬೇಕು, ಎಲ್ಲಾ ನಾಗರಿಕರಿಗೂ ಉತ್ತಮ ಆರೋಗ್ಯ ವ್ಯವಸ್ಥೆ ಸಿಗಬೇಕು, ಭ್ರಷ್ಟಾಚಾರದ ವಿರುದ್ಧ ಹೋರಾಡಿ ಭ್ರಷ್ಟಾಚಾರವನ್ನು ನೀರ್ಮೂಲನೆ ಮಾಡಬೇಕು. ಎಲ್ಲಾ ಜನತೆಗೂ ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಬೇಕು, ನಮ್ಮ ದೇಶದ ಮೇಲೆ ಗೌರವ ಅಭಿಮಾನದೊಂದಿಗೆ ಈ ದೇಶದಲ್ಲಿರುವುದಕ್ಕೆ ಹೆಮ್ಮೆ ಪಡಬೇಕು. ಈ ಪಂಚ ಸೂತ್ರ ನಮ್ಮ ಪಕ್ಷದ ಸಿದ್ದಾಂತವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆ ಹಾಗೂ ಪಾಲಿಕೆ ಚುನಾವಣೆಗೆ ಸಂಬಂಧ ಪಟ್ಟಂತೆ ಕೆಲವೊಂದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಯಿತು.
ವೇದಿಕೆಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ ಅದಮಲೆ, ಆಮ್ ಆದ್ಮಿ ಪಕ್ಷದ ರಾಜ್ಯ ಜತೆ ಕಾರ್ಯದರ್ಶಿ ವಿವೇಕಾನಂದ ಸಲಿನ್ಸ ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಪುಚ್ಚಪಾಡಿ, ಮಹಿಳಾ ವಿಭಾಗದ ಅಧ್ಯಕ್ಷೆ ಬೆನೆಟ್ ನವಿತಾ ಮೊರಾಸ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಸಂಚಾಲಕ ವಿಜಯನಾಥ ವಿಠ್ಠಲ ಶೆಟ್ಟಿ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಚಾಲಕ ವಿಶುಕುಮಾರ್, ಮಂಗಳೂರು ಉತ್ತರ ಕ್ಷೇತ್ರದ ಮುಖಂಡ ಸಂದೀಪ್ ಶೆಟ್ಟಿ, ದ.ಕ. ಜಿಲ್ಲಾ ಅಪ್ ಖಜಾಂಚಿ ಆವ್ರೆನ್ ಡಿಸೋಜಾ, ಕಚೇರಿ ಸಂಚಾಲಕ ರವಿಪ್ರಸಾದ, ಜತೆ ಕಾರ್ಯದರ್ಶಿ ಡೆಸ್ಮಂಡ್ ಡಿಸೋಜಾ ಮತ್ತಿತರರು ಉಸ್ಥಿತರಿದ್ದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಸಂಚಾಲಕ ಪ್ರಸಾದ್ ಬಜೀಲಕೆರಿ ಸ್ವಾಗತಿಸಿದರು. ಮಾಧ್ಯಮ ಸಂಚಾಲಕ ವೆಂಕಟೇಶ್ ಎನ್. ಬಾಳಿಗಾ ಮುಖ್ಯ ಅತಿಥಿಗಳ ಪರಿಚಯ ಪತ್ರ ಓದಿದರು. ಡಿಲೋನ್ ಲೋಬೋ ನಿರುಪಿಸಿದರು. ಬೆನೆಟ್ ನವಿತಾ ಮೊರಾಸ್ ವಂದಿಸಿದರು.