ಸಮುದ್ರ ಮಧ್ಯೆ ಹೃದಯಾಘಾತ : ಜೀವ ಉಳಿಸಿದ ಕೋಸ್ಟ್‌ ಗಾರ್ಡ್‌ ತಂಡ

ಮೀನುಗಾರಿಕೆ ಮಾಡುತ್ತಿದ್ದ ವೇಳೆ ಸಮುದ್ರದ ಮಧ್ಯೆ ಹೃದಯಾಘಾತಕ್ಕೆ ಒಳಗಾದ ಮೀನುಗಾರನಿಗೆ ಸಮುದ್ರದಲ್ಲೇ ಪ್ರಥಮ ಚಿಕಿತ್ಸೆ ನೀಡಿರುವ ಕೋಸ್ಟ್‌ ಗಾರ್ಡ್‌ ಮೀನುಗಾರನ ಜೀವ ಉಳಿಸಿದೆ.

ಮೀನುಗಾರ ವಸಂತ ಎನ್ನುವವರಿ ಮೀನುಗಾರಿಕೆಗೆ ಹೋಗಿದ್ದ ಸಂದರ್ಭ ಪಣಂಬೂರು ತೀರದಿಂದ ಸುಮಾರು 36 ನಾಟಿಕಲ್‌ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಉಸಿರಾಟದ ಸಮಸ್ಯೆ ಪ್ರಾರಂಭವಾಗಿದೆ. ಇದನ್ನು ಗಮನಿಸಿದ ಇನ್ನೊಂದು ಮೀನುಗಾರಿಕಾ ದೋಣಿಯ ಸಿಬ್ಬಂದಿ ಕರಾವಳಿ ರಕ್ಷಣಪಡೆಯ ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿ ನೆರವಿಗೆ ಕೋರಿದ್ದಾರೆ. ಸ್ಪಂದಿಸಿದ ಕರಾವಳಿ ರಕ್ಷಣ ಪಡೆಯು ಸಾಗರ ರಕ್ಷಣ ಉಪಕೇಂದ್ರವನ್ನು (ಎಂಆರ್‌ಎಸ್‌ಸಿ) ಸನ್ನದ್ಧಗೊಳಿಸಿ, ತನ್ನೆಲ್ಲ ನೌಕೆಗಳಿಗೆ ತುರ್ತು ರಕ್ಷಣೆಯ ಅಗತ್ಯದ ಕುರಿತ ಸಂದೇಶವನ್ನು ರವಾನಿಸಿದೆ. ಈ ವೇಳೆ ಈ ದೋಣಿಗೆ ಸಮೀಪದಲ್ಲಿದ್ದ ಕರಾವಳಿ ರಕ್ಷಣ ಪಡೆಯ ಇಂಟರ್‌ಸೆಪ್ಟರ್‌ ದೋಣಿ ಸಿ 446, ವಸಂತ ಇದ್ದ ದೋಣಿ ಹತ್ತಿರ ಹೋಗಿ ಆರೋಗ್ಯ ತಪಾಸಣೆ ನಡೆಸಿ, ಪ್ರಥಮ ಚಿಕಿತ್ಸೆ ಒದಗಿಸಿತು. ಹೆಚ್ಚಿನ ಚಿಕಿತ್ಸೆ ಸಲುವಾಗಿ ಆ ಮೀನುಗಾರರನ್ನು ಅದೇ ದೋಣಿಯಲ್ಲಿ ಪಣಂಬೂರಿನ ನವಮಂಗಳೂರು ಬಂದರಿನ ದಕ್ಕೆಗೆ ಕರೆತರಲಾಯಿತು.ಬಂದರಿನ ಜೆಟ್ಟಿಯಲ್ಲಿ ತುರ್ತು ವೈದ್ಯಕೀಯ ಸೇವೆ ಒದಗಿಸಿ, ಬೆಂದೂರುವೆಲ್‌ನ ಎಸ್‌ಸಿಎಸ್‌ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ವೈದ್ಯಕೀಯ ನೆರವು ಒದಗಿಸಲಾಗಿದೆ.

Related Posts

Leave a Reply

Your email address will not be published.