ಮಂಗಳೂರು: ಕಾಂಕ್ರೀಟು ಕಡಿದು ತೋಡಿದ ಗುಂಡಿ : ಅವೈಜ್ಞಾನಿಕತೆಗೆ ಬೇಕಿದೆ ಒಂದು ಕೊನೆ

ನಗರ ನಿವಾಸಿಗಳ ನಿರೀಕ್ಷೆಗಳು ಹುಸಿಯಾಗಿವೆ. ನಗರ ಸಂಪರ್ಕದ ಕಾಂಕ್ರೀಟ್ ರಸ್ತೆಗಳು ಮಾನ್ಸೂನ್‌ನಲ್ಲಿ ಬಾಳಿಕೆ ಬರುವಲ್ಲಿ ವಿಫಲವಾಗಿವೆ. ವಾಹನ ಮಾಲೀಕರಿಗೆ ಮತ್ತು ಪಾದಚಾರಿಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದ್ದು, ಮಂಗಳೂರು ಮಹಾನಗರಪಾಲಿಕೆ ವಿರುದ್ದ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.

ಕಾಂಕ್ರೀಟ್ ರಸ್ತೆ ಯೋಜನೆಗಳು ಅವೈಜ್ಞಾನಿಕವಾಗಿದ್ದು ವಿವಿಧ ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ನೆಪದಲ್ಲಿ ವಿವಿಧೆಡೆ ರಸ್ತೆ ಅಗೆಯುತ್ತಿರುವುದು ಮಾತ್ರ ನಿತ್ಯ ಕಾಯಕವಾಗಿದೆ. ವಾಹನ ಚಾಲಕರು ನಗರದಲ್ಲಿ ಹಾವಿನ ಹೆಡೆಯ ಮೇಲೆ ಓಡಾಡುವಂತೆ ಈ ಅಗೆದ ರಸ್ತೆಗಳು ಮಾಡಿವೆ. ಕೆಲವೆಡೆ ರಸ್ತೆಗಳನ್ನು ಮೂರು ನಾಲ್ಕು ಭಾರಿ ಅಗೆದು ಮತ್ತೆ ಮತ್ತೆ ಪೈಪ್ ಲೈನ್ ಅಳವಡಿಕೆ ಮಾಡುತ್ತ ಮಂಗಳೂರು ಮಹಾನಗರ ಪಾಲಿಕೆಯ ಹಣ ಲೂಟಿಯ ಕಾಮಗಾರಿಗಳಂತೆ ಇವು ಕಾಣಿಸುತ್ತಿವೆ.

ಬಹಳ ಸ್ಥಳಗಳಲ್ಲಿ ಕಾಂಕ್ರೀಟ್ ರಸ್ತೆಗಳ ಮಧ್ಯದಲ್ಲೇ ಬೃಹತ್ ಹೊಂಡಗಳನ್ನು ಅಗೆದಿರುವುದರಿಂದ ವಾಹನ ಸವಾರರು ಹಲವಾರು ಕಡೆ ಕೆಂಪು ಪತಾಕೆಗೆ ಹೆದರಿ ಸಂಚರಿಸಬೇಕಾಗಿದೆ. ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಕೆಲವು ಕಾಮಗಾರಿಗಳು ನಡೆಯುತ್ತಿದ್ದು ವಾಹನ ಸವಾರರು ಅನಿವಾರ್ಯವಾಗಿ ಆಮೆ ವೇಗದಲ್ಲಿ ಸಂಚರಿಸಬೇಕಾಗಿದೆ. ಎಂಸಿಸಿಯು ಕಾಂಕ್ರೀಟ್ ರಸ್ತೆಗಳನ್ನು ಅಗೆಯುವುದಕ್ಕೇ ನಿರ್ಮಿಸಿದಂತೆ ಕಾಣುತ್ತಿದೆ. ಅಧಿಕಾರಿಗಳು ಸರಿಯಾದ ಕಾರಣಗಳನ್ನು ನೀಡದೆ ಸುಮ್ಮಸುಮ್ಮನೆ ರಸ್ತೆಗಳನ್ನು ಅಗೆಯುತಿದ್ದು, ಕಾರ್ಮಿಕರು ಎಂಜಿನಿಯರುಗಳ ಆದೇಶದಂತೆ ಕಾರ್ಯನಿರ್ವಹಿಸುತ್ತಿದ್ದೇವೆಂದಷ್ಟೇ ಹೇಳುತ್ತಾರೆ.

ಮಂಗಳೂರು ಸದ್ಯ ಅತಿ ವೇಗವಾಗಿ ಬೆಳೆಯುತ್ತಿರುವ ನಗರ. ಬಹುತೇಕ ಕಡೆ ಸಿಮೆಂಟ್ ರಸ್ತೆ ನಿರ್ಮಾಣವಾಗಿ ಬಹುಕಾಲ ಆಗಿದೆ. ನೀರಿನ ಪೈಪ್, ಕೇಬಲ್, ಇಂಟರ್‌ನೆಟ್ ಜಾಲ ಎಂದೆಲ್ಲ ಪದೇ ಪದೆ ರಸ್ತೆಗಳನ್ನು ಅಗೆದು ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ರಸ್ತೆ ಕಾಂಕ್ರೀಟ್ ಮಾಡುವುದಕ್ಕೆ ಮೊದಲು ರಸ್ತೆಯ ಇಕ್ಕೆಲಗಳಲ್ಲಿ ಕೇಬಲ್. ಪೈಪ್ ಲೈನ್ ಅಳವಡಿಕೆಗೆ ಸ್ಥಳ ಬಿಟ್ಟಿದ್ದರೆ ವಾಹನ ಸವಾರರಿಗೆ ಯಾವುದೆ ರೀತಿಯ ತೊಂದರೆ ಆಗುತ್ತಿರಲಿಲ್ಲ.

ಸ್ಮಾರ್ಟ್ ಸಿಟಿ ಸ್ಮಾರ್ಟ್ ಮಂಗಳೂರು ಹೆಸರಿನಲ್ಲಿ ಎಂ.ಸಿ.ಸಿ.ಯು ರಸ್ತೆಗಳನ್ನು ಮತ್ತೆ ಮತ್ತೆ ಅಗೆದು ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಮಾಡುತಿರುವುದು ವಿಷಾದನಿಯ.

Related Posts

Leave a Reply

Your email address will not be published.