ಮಂಗಳೂರು: ಸೌದಿ ಅರೇಬಿಯಾದಲ್ಲಿ ಜೈಲು ಪಾಲಾಗಿದ್ದ ಯುವಕ ಕೊನೆಗೂ ತಾಯ್ನಾಡಿಗೆ..!!
ಮಾಡದ ತಪ್ಪಿಗೆ ಸೌದಿ ಅರೇಬಿಯಾದಲ್ಲಿ 11 ತಿಂಗಳ ಸೆರೆಮನೆ ವಾಸದ ಬಳಿಕ ಈಗ ಬಂಧಮುಕ್ತವಾಗಿರುವ ಕಡಬದ ಚಂದ್ರಶೇಖರ್ ಸುರಕ್ಷಿತವಾಗಿ ಮನೆ ಸೇರಿದ್ದಾರೆ. ಸೋಮವಾರ ರಾತ್ರಿ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇದೇ ವೇಳೆ ಅವರ ತಾಯಿ ಹೇಮಾವತಿ, ಅಣ್ಣ ಹರೀಶ್, ಬಿಡುಗಡೆಗೆ ಯತ್ನಿಸಿದ್ದ ಕೊಕ್ಕಡ ಶ್ರೀಧರ ಗೌಡ ಮತ್ತಿತರರು ಅವರನ್ನು ಸ್ವಾಗತಿಸಿದರು.
ಇದೇ ವೇಳೆ ಮಾತನಾಡಿದ ಚಂದ್ರಶೇಖರ್ ಮಾಧ್ಯಮಗಳಲ್ಲಿ ನನ್ನ ವಿಚಾರದ ಬಗ್ಗೆ ವರದಿ ಬಂದಿರುವ ಕಾರಣ ನನ್ನ ಬಿಡುಗಡೆ ಸುಲಭಗೊಂಡಿದೆ. ಮಂಗಳೂರಿನವರು ತುಂಬಾ ಜನ ನೆರವಾಗಿದ್ದಾರೆ. ಅವರೆಲ್ಲರಿಗೂ ಕೃತಜ್ಞನಾಗಿದ್ದೇನೆ ತಾಯ್ನಾಡಿಗೆ ಬಂದಿರುವುದು ಮತ್ತು ಅಮ್ಮನನ್ನು ನೋಡಿ ತುಂಬಾ ಖುಷಿಯಾಗಿದೆ. ಮುಂದೆ ಬೇರೆ ಉದ್ಯೋಗ ಸಿಗುವ ಭರವಸೆ ಇದೆ ಎಂದು ಹೇಳಿದರು.
ಬೆಂಗಳೂರಿನಲ್ಲಿದ್ದ ಚಂದ್ರಶೇಖರ್ ಭಡ್ತಿಯೊಂದಿಗೆ ಸೌದಿಗೆ ತೆರಳಿದ್ದರು. ಅಲ್ಲಿ ಅವರು ಮೊಬೈಲ್ ಸಿಮ್ ಖರೀದಿಗೆಂದು ಬೆರಳಚ್ಚು ಹಾಗೂ ಇತರ ವಿವರ ನೀಡಿದ್ದರು. ಕೆಲವು ದಿನಗಳಲ್ಲಿ ರಿಯಾದ್ ಪೊಲೀಸರು ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮಹಿಳೆಯೊಬ್ಬರು ನೀಡಿದ ದೂರಿನಂತೆ ಚಂದ್ರಶೇಖರ್ ಅವರ ಖಾತೆಗೆ ಮಹಿಳೆ ಖಾತೆಯಿಂದ 22 ಸಾವಿರ ರೂ. ವರ್ಗಾವಣೆಯಾಗಿತ್ತು.
ಆದರೆ ಇದು ಕೆಲವು ದುಷ್ಕರ್ಮಿಗಳ ಸಂಚಾಗಿದ್ದು, ಚಂದ್ರಶೇಖರ ಅವರ ನಕಲಿ ಖಾತೆಯನ್ನು ತೆರೆದು ಈ ಕೃತ್ಯ ಎಸಗಲಾಗಿತ್ತು. ಚಂದ್ರಶೇಖರ್ ಅವರ ವಾದವನ್ನು ಪರಿಗಣಿಸದೆ ಪೊಲೀಸರು ಅವರನ್ನು ಜೈಲಿಗೆ ಹಾಕಿದ್ದರು. ಅವರ ಗೆಳೆಯರು, ಕೆಲಸ ಮಾಡುತ್ತಿದ್ದ ಕಂಪೆನಿಯ ಪ್ರತಿನಿಧಿಗಳು ಸೇರಿ ದಂಡ ಪಾವತಿಸಿ, ಬಿಡುಗಡೆಗೆ ಶ್ರಮಿಸಿದ್ದಾರೆ. ಕೊನೆಗೂ ಚಂದ್ರಶೇಖರ್ ತಾಯ್ನಾಡಿಗೆ ಆಗಮಿಸುವಂತಾಗಿದೆ.