ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ – ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಗಂಭೀರ ಚರ್ಚೆ ಮಂಗಳೂರು ಮಹಾನಗರ ಪಾಲಿತೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ನವೀನ್ ಡಿಸೋಜ ನಗರದ ಬಹುತೇಕ ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆಯಾಗದೆ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗಾಲ ಹತ್ತಿರವಾಗುತ್ತಿದ್ದು, ಚರಂಡಿಗಳ ಹೂಳೆತ್ತುವ ಕಾರ್ಯವೂ ಸಮರ್ಪಕವಾಗಿ ಆಗಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಪಾಲಿಕೆ ಸದಸ್ಯರಾದ ಅಬ್ದುಲ್ ರವೂಫ್, ಪ್ರವೀಣ್‍ಚಂದ್ರ ಆಳ್ವ, ಟ್ಯಾಂಕರ್ ಮೂಲಕವಾದರೂ ನೀರು ಪೂರೈಸುವ ವ್ಯವಸ್ಥೆ ಕೈಗೊಳ್ಳಬೇಕು. ಬಹುತೇಕ ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಜಯಾನಂದ ಅಂಚನ್, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಈಗಾಗಲೇ ಎಚ್ಚರ ವಹಿಸಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಪೂರೈಸುವ ವ್ಯವಸ್ಥೆ ಇದೆ. ಗಂಭೀರ ಸಮಸ್ಯೆ ಇರುವ ಕಡೆಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ಪಾಲಿಕೆ ಆಯುಕ್ತ ಚನ್ನಬಸಪ್ಪ ಕೆ ಮಾತನಾಡಿ, ನಗರದಲ್ಲಿ ಸದ್ಯ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ಇನ್ನೂ ಒಂದು ವಾರ ನೀರಿನ ರೇಷನಿಂಗ್ ಮುಂದುವರಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ವಿಪಕ್ಷ ಸದಸ್ಯ ಎ.ಸಿ.ವಿನಯರಾಜ್ ಮಾತನಾಡಿ, ಡಿಸೆಂಬರ್ ಬಳಿಕ ವಿದ್ಯುತ್ ಉತ್ಪಾದನೆಗೆ ನೀರು ಬಳಸಬಾರದು ಎಂಬ ಷರತ್ತು ಇದ್ದರೂ ಎಎಂಆರ್ ಡ್ಯಾಂನಿಂದ ನೀರು ಬಳಸಲಾಗಿದೆ. ಪಾಲಿಕೆ ನೀರು ಸಂಗ್ರಹ ಬಗ್ಗೆ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಉತ್ತರಿಸಿದ ಆಯುಕ್ತ ಚೆನ್ನಬಸಪ್ಪ, ತುಂಬೆಯಲ್ಲಿ ಎಎಂಆರ್ ಡ್ಯಾಂನಿಂದ ಪಾಲಿಕೆ ಡ್ಯಾಂಗೆ ನೀರು ಹರಿಸಲಾಗಿದೆ. ಅಲ್ಲದೆ ಹರೇಕಳ ಡ್ಯಾಂನಿಂದ ಪ್ರತಿದಿನ 160 ಎಂಎಲ್‍ಡಿ ನೀರನ್ನು ತುಂಬೆ ಡ್ಯಾಂಗೆ ಲಿಫ್ಟ್ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಎತ್ತರ ಪ್ರದೇಶಗಳಿಗೆ ಪ್ರತಿದಿನ 10ರಿಂದ 20 ಟ್ರಿಪ್‍ಗಳಷ್ಟು ಟ್ಯಾಂಕರ್‍ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ನೆರೆ ಮುನ್ನೆಚ್ಚರಿಕೆಗೆ ವಾಟ್ಸ್‍ಆಪ್ ಗ್ರೂಪ್ಈ ಬಾರಿ ರಾಜಾ ಕಾಲುವೆಗಳಿಂದ ಹೂಳೆತ್ತುವ ಕೆಲಸ ನಡೆಸಲಾಗುತ್ತಿದೆ. ಮೇ 30ರೊಳಗೆ ಕಾಮಗಾರಿ ಮುಕ್ತಾಯಗೊಳಿಸುವಂತೆ ಸೂಚನೆ ನೀಡಲಾಗಿದೆ. ಕಳೆದ ಬಾರಿ 41 ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸಿತ್ತು. ಇದಕ್ಕೆ ರಾಜಾ ಕಾಲುವೆ ಒತ್ತುವರಿ ಕಾರಣವಾಗಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಸಿಬ್ಬಂದಿ, ಪಾಲಿಕೆ ಸದಸ್ಯರು ಹಾಗೂ ನಾಗರಿಕರ ಒಳಗೊಂಡ ವಾಟ್ಸ್‍ಆಪ್ ಗ್ರೂಪ್ ರಚಿಸಲಾಗಿದೆ. ಮಳೆಗಾಲದಲ್ಲಿ ಅನುಕೂಲವಾಗಲು ಪ್ರತಿ ವಾರ್ಡ್‍ಗೆ ರಾತ್ರಿ ಗ್ಯಾಂಗ್‍ಮೆನ್, ಜೆಸಿಬಿ, ಟಾರ್ಚ್‍ಲೈಟ್, ಕಂಟ್ರೋಲ್ ರೂಂ ತೆರೆಯಲಾಗಿದ್ದು, ಮೆಸ್ಕಾಂ ಮತ್ತು ಫಾರೆಸ್ಟ್ ಸಹಕಾರ ಕೋರಲಾಗಿದೆ ಎಂದರು.