ಮಂಜೇಶ್ವರ : ರಾಗಂ ಜಂಕ್ಷನ್‌ನಲ್ಲಿ ಮುಷ್ಕರ
ಮಂಜೇಶ್ವರದ ರಾಗಂ ಜಂಕ್ಷನಿನಲ್ಲಿ ರಾ.ಹೆದ್ದಾರಿ ದಾಟಲು ಸುರಕ್ಷಿತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಏಳನೇ ದಿನಕ್ಕೆ ಕಾಲಿಟ್ಟಿದೆ. ಮಾಡು ಇಲ್ಲವೇ ಮಡಿ ಎಂಬ ಧ್ಯೇಯದಲ್ಲಿ ಸ್ಥಳೀಯರು ನಡೆಸುತ್ತಿರುವ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.
ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಭಿತ್ತಿ ಪತ್ರ ಎಲ್ಲೆಡೆ ರಾರಾಜಿಸುತ್ತಿರುವುದು ಹೆದ್ದಾರಿ ಪ್ರಾಧಿಕಾರಕ್ಕೆ ಬಿಸಿ ಮುಟ್ಟಿಸಿದೆ. ಹೆದ್ದಾರಿ ದಾಟಲು ಯಾವುದಾದರೂ ಪರ್ಯಾಯ ವ್ಯವಸ್ಥೆ ಲಭಿಸಬಹುದೆಂದು ಜಾತಕ ಪಕ್ಷಿಯಂತೆ ಕಾದು ಕುಳಿತ ಇಲ್ಲಿಯ ಮುಗ್ಧ ಜನತೆಯನ್ನು ವಂಚಿಸಿದ ಗುತ್ತಿಗೆದಾರರ ವಿರುದ್ಧ ಎಲ್ಲಾ ಕಡೆಯಿಂದಲೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಏಳನೇ ದಿನವಾದ ಪ್ರತಿಭಟನೆಯಲ್ಲಿ ಜನಪ್ರತಿನಿಧಿಗಳು ಪಾಲ್ಗೊಂಡು ತಮ್ಮ ಬೆಂಬಲವನ್ನು ವ್ಯಕ್ತಪಡಿಸುವುದರ ಜೊತೆಯಾಗಿ ರಾಗಂ ಜಂಕ್ಷನಿನ ನಾಗರೀಕರಿಗೆ ನ್ಯಾಯ ಸಿಗುವ ತನಕ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಭರವಸೆಯನ್ನು ನೀಡಿದರು.
ಮಂಜೇಶ್ವರದ ಶಾಸಕ ಎಕೆಎಂ ಅಶ್ರಫ್ ಅವರು ಮಾತನಾಡಿ, ತಿರುವನಂತಪುರದಲ್ಲಿರುವ ರಾ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಮಂಜೇಶ್ವರದಲ್ಲಿ ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.
ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ ಜಿಲ್ಲಾ ಪಂ . ಸದಸ್ಯ ಗೋಲ್ಡನ್ ರಹ್ಮಾನ್ ಸೇರಿದಂತೆ ಜನಪ್ರತಿನಿಧಿಗಳು, ರಾಜಕೀಯ ನೇತಾರರರು, ಸಾಮಾಜಿಕ ಕಾರ್ಯಕರ್ತರೂ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು.