ಬಾರದ ಲೋಕಕ್ಕೆ ಮನೋಹರ ಪ್ರಸಾದ ಪಯಣ..

ಹಿರಿಯ ಪತ್ರಕರ್ತ, ಖ್ಯಾತ ನಿರೂಪಕ, ಮನೋಹರ ಪ್ರಸಾದ್ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ನವಭಾರತದಲ್ಲಿ ಪತ್ರಿಕಾರಂಗ ಪ್ರವೇಶಿಸಿದ್ದ ಅವರು, 1984ರಲ್ಲಿ ಉದಯವಾಣಿಯ ಮಂಗಳೂರು ವರದಿಗಾರರಾಗಿ ಪ್ರಸಿದ್ಧರಾದರು. ಆ ಬಳಿಕ ಪ್ರಧಾನ ವರದಿಗಾರರಾಗಿ, ಸುದ್ದಿ ವಿಭಾಗದ ಮುಖ್ಯಸ್ಥರಾಗಿ, ಸಹಾಯಕ ಸಂಪಾದಕರಾಗಿದ್ದರು. 2020ರಲ್ಲಿ ನಿವೃತ್ತಿ ಹೊಂದುವವರೆಗೆ 36ವರ್ಷ ಉದಯವಾಣಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು. ಮದರ್ ಥೆರೆಸಾ, ಅಮಿತಾಬ್ ಬಚ್ಚನ್, ಅಬ್ದುಲ್ ಕಲಾಂ, ಅಟಲ್ ಬಿಹಾರಿ ವಾಜಪೇಯಿ, ಡಾ.ರಾಜ್ ಕುಮಾರ್, ರಾಜೀವ ಗಾಂಧಿ, ಮೋಹನ್ ಲಾಲ್, ಮಮ್ಮುಟ್ಟಿ, ಐಶ್ವರ್ಯಾ ರೈ ಮುಂತಾದವರನ್ನು ಸಂದರ್ಶನ ಮಾಡಿರುವ ಹೆಗ್ಗಳಿಕೆ ಇವರದ್ದಾಗಿದೆ.

ಮೂಲತಃ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಅವಿವಾಹಿತರಾಗಿದ್ದ ಇವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ತುಳು, ಕೊಂಕಣಿ, ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಮೂರು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ನಿರೂಪಣೆ, ತಾಳಮದ್ದಳೆ ಅರ್ಥಧಾರಿ, ಕ್ರಿಕೆಟ್ ಆಟಗಾರ, ಕ್ರಿಕೆಟ್ ವೀಕ್ಷಕ ವಿವರಕ, ಕತೆ-ಕಾದಂಬರಿಕಾರ, ಅಂಕಣಗಾರ ಹೀಗೆ ವಿವಿಧ ಮಜಲುಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದವರು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅರಸಿ ಬಂದಿತ್ತು.

ಪ್ರಸ್ತುತ ವಿ4 ನ್ಯೂಸ್ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ದರ್ಪಣ ಕಾರ್ಯಕ್ರಮದಲ್ಲಿ ನಿರೂಪಕ ಹಾಗೂ ಮುಂದಾಳತ್ವ ವಹಿಸಿದ್ದರು. ದರ್ಪಣ ಕಾರ್ಯಕ್ರಮದ ಮೂಲಕ ಕರಾವಳಿಯ ವಿವಿಧ ದೇವಾಲಯಗಳ ಬಗೆ ವಿಸ್ತೃತವಾದ ಮಾಹಿತಿಯನ್ನು ಜನರಿಗೆ ಒದಗಿಸುವ ಪ್ರಯತ್ನ ಮಾಡುವ ಮೂಲಕ ಜನ ಮೆಚ್ಚುಗೆಯನ್ನ ಪಡೆದುಕೊಂಡಿದ್ದರು. ಮಾತ್ರವಲ್ಲದೆ ವಿ4 ನ್ಯೂಸ್ ನಲ್ಲಿ ವಿವಿಧ ಕಾರ್ಯಕ್ರಮಕ್ಕೂ ಸಾಥ್ ನೀಡುವ ಕೆಲಸವನ್ನು ಮನೋಹರ್ ಪ್ರಸಾದ್ ಮಾಡುತ್ತಾ ಬಂದಿದ್ದಾರೆ. ಇವರ ಅಗಲಿಕೆ ತುಂಬಲಾರದ ನಷ್ಟವಾಗಿದೆ.


Related Posts

Leave a Reply

Your email address will not be published.