ನಿಮ್ಮ ಆಶೆಯೇ ನನ್ನ ಆಶೆ- ಕ್ಷೇತ್ರದ ಜನತೆಗೆ ಕೋಟ್ಯಾನ್‌ ಅಭಯ

ಮೂಡುಬಿದಿರೆ: ಕ್ಷೇತ್ರದ ಜನತೆಯ ಮನದಲ್ಲಿರುವ ಆಶೆಯೇ ನನ್ನ ಆಶೆಯೂ ಆಗಿದೆ. ನಿಮ್ಮ ತಲೆಯಲ್ಲಿ ಏನೆಲ್ಲ ಯೋಚನೆಗಳಿವೆಯೋ ಅವೆಲ್ಲವೂ ನನ್ನ ಯೋಚನೆಯೂ ಆಗಿದೆ. ಸರ್ವಾಂಗೀಣ ರೀತಿಯಲ್ಲಿ ಮೂಡಬಿದರೆ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಷ್ಟೇ ನನ್ನ ಗುರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು. ಮೂಡುಬಿದರೆ ಕನ್ನಡ ಭವನದಲ್ಲಿ ನಡೆದ ಮುಲ್ಕಿ ಮೂಡುಬಿದಿರೆ ಮಂಡಲದ ಪ್ರಣಾಳಿಕೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈಗಾಗಲೇ ಬಹುಬೇಡಿಕೆಯ ಯುಜಿಡಿ ಕೆಲಸಕ್ಕೆ ಹಸಿರು ನಿಶಾನೆ ದೊರಕಿದೆ. ಎಫ್‌ ಎಸ್‌ ಡಿ ಪಿ ಮಾದರಿಯಲ್ಲಿ ಪ್ರಾಂತ್ಯ ಹಾಗೂ ಮಾರ್ಪಾಡಿ ಗ್ರಾಮಗಳ ಡ್ರೈನೇಜ್ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗಲಿದೆ. ಒಂದು ಎಕ್ಕರೆ ಪ್ರದೇಶದಲ್ಲಿ ಪ್ಲಾಂಟ್‌ ಸಿದ್ದಗೊಂಡು ಈ ಕಾರ್ಯ ನಡೆಯಲಿದೆ. ಒಂದು ವಾರಗಳೊಳಗಾಗಿ ಟೆಂಡರ್‌ ಕಾರ್ಯಗಳು ಮುಗಿಯಲಿದೆ ಎಂದು ಸಭೆಗೆ ತಿಳಿಸಿದರು.

ಕೈಗಾರಿಕಾ ಪ್ರಾಂಗಣಕ್ಕಾಗಿ ನಲುವತ್ತು ಎಕ್ಕರೆ ಪ್ರದೇಶವನ್ನು ಗೊತ್ತುಪಡಿಸಲಾಗಿದ್ದು, ಸುಸಜ್ಜಿತ ಕೈಗಾರಿಕಾ ಪ್ರಾಂಗಣವೂ ನಿರ್ಮಾಣವಾಗಲಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಮಗ್ರ ಚಿಂತನೆ ನಡೆಸಲಾಗಿದೆ. ಸಭೆಯಲ್ಲಿ ವ್ಯಕ್ತವಾಗಿರುವ ಅಂಶಗಳನ್ನು ಪರಿಗಣಿಸಿ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ ಎಂದು ಶಾಸಕರು ಭರವಸೆ ನೀಡಿದರು. ಪ್ರಣಾಳಿಕೆಯ ಅಂಶ ಜಾರಿಗೊಳಿಸುತ್ತೇವೆ: ಈ ಹಿಂದೆಯೂ ಭಾರತೀಯ ಜನತಾ ಪಕ್ಷ ನೀಡಿದ ಪ್ರಣಾಳಿಯ ಅಂಶಗಳನ್ನು ದೇಶ,ರಾಜ್ಯ,ಜಿಲ್ಲಾ ಮಟ್ಟಗಳಲ್ಲಿ ಜಾರಿಗೊಳಿಸಿದ ಸಾಕಷ್ಟು ಉದಾಹರಣೆಗಳು ಇವೆ ಎಂದು ಪ್ರಣಾಳಿಕೆ ಸಂಚಾಲಕ ಬಾಹುಬಲಿ ಪ್ರಸಾದ್‌ ಹೇಳಿದರು. ಕ್ಷೇತ್ರವ್ಯಾಪ್ತಿಯ ರೈತರ ಪ್ರತಿನಿಧಿಗಳು, ವಕೀಲರ ಪ್ರತಿನಿಧಿಗಳು, ಸಮಾಜದ ಮುಖಂಡರು, ಶಿಕ್ಷಕ ಪ್ರತಿನಿಧಿಗಳು, ಹೀಗೆ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಒಟ್ಟುಸೇರಿಸಿ ಅಭಿಪ್ರಾಯ ಕ್ರೋಢೀರಿಸುವ ಕಾರ್ಯ ಆಗಿದೆ. ಶೀಘ್ರದಲ್ಲಿ ರಾಜ್ಯದ ಪ್ರಮುಖರಿಗೆ ಈ ಅಂಶಗಳನ್ನು ತಿಳಿಸಲಾಗುವುದು ಎಂದರು. ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ್‌ ಶೆಟ್ಟಿಗಾರ್‌, ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕ ಪಿ.ಎಚ್.ವೇಣುಗೋಪಾಲ್‌ ಭಟ್‌, ಭೋಜರಾಜ ಶೆಟ್ಟಿ ಸೂರಿಂಜೆ ಉಪಸ್ಥಿತರಿದ್ದರು.

Related Posts

Leave a Reply

Your email address will not be published.