ಮೂಡುಬಿದಿರೆ: ಆಳ್ವಾಸ್ ಶಾಲೆಯಲ್ಲಿ ಇಂಡಿಯನ್ ಸೈನ್ಸ್ ಸೊಸೈಟಿ ಸ್ಪರ್ಧೆ: 5 ಮಾದರಿಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ

ಮೂಡುಬಿದಿರೆ:‘ಆವಿಷ್ಕಾರದ ಫಲ ಸಮುದಾಯಕ್ಕೆ ತಲುಪಿದಾಗ ಸಾರ್ಥಕ’ಎಂದು ಅಮೆರಿಕ ಫ್ಲಾರಿಡಾದ ಹೂಡಿಕೆ ಬ್ಯಾಂಕರ್ ಎಮಿಲಿ ಆಳ್ವ ಹೇಳಿದರು.

ಭಾರತೀಯ ವಿಜ್ಞಾನ ಸಮಾಜ(ಇಂಡಿಯನ್ ಸೈನ್ಸ್ ಸೊಸೈಟಿ) ಸಹಯೋಗದಲ್ಲಿ ಆಳ್ವಾಸ್ ಕೇಂದ್ರೀಯ ಶಾಲೆ (ಸಿಬಿಎಸ್‌ಸಿ)ಯಲ್ಲಿ ಶನಿವಾರ ನಡೆದ ‘ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿAಗ್ ಮೇಳ (ಇನ್‌ಸೆಫ್)’ದ ಪ್ರಾದೇಶಿಕ ಮೇಳ ಮತ್ತು ವಿಜ್ಞಾನ ವಿಸ್ತರಣಾ ಕಾರ್ಯಕ್ರಮ’ದಲ್ಲಿ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.

‘ಕುತೂಹಲ ಹಾಗೂ ಸೃಜನಶೀಲತೆಯು ವಿಜ್ಞಾನದ ಮಡಕೆಯಲ್ಲಿ ಇರುತ್ತವೆ. ಸಮುದಾಯದಲ್ಲಿ ಅವಶ್ಯಕತೆ ಇರುವ ಜನರಿಗೆ ಅದನ್ನು ಉಣಬಡಿಸಿದಾಗ ಸಾರ್ಥಕವಾಗುತ್ತದೆ’ ಎಂದರು.

‘ಸಂಶೋಧನೆಗಳು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಬೇಕು. ವಿಜ್ಞಾನವು ಬದುಕಿನಲ್ಲಿ ಬದಲಾವಣೆತರಬೇಕು. ಪರಿವರ್ತನೆಗೆ ಕಾರಣವಾಗಬೇಕು. ನಿಮ್ಮೆಲ್ಲರಲ್ಲಿ ಅಂತಹ ಆತ್ಮವಿಶ್ವಾಸ ಇದೆ. ಅದು ಫಲಪ್ರದಗೊಳ್ಳಲಿ’ ಎಂದು ಹಾರೈಸಿದರು.

ಭಾರತೀಯ ವಿಜ್ಞಾನ ಸಮಾಜದ ನಾರಾಯಣ ಅಯ್ಯರ್ ಮಾತನಾಡಿ, ‘ವೈಜ್ಞಾನಿಕ ಮನೋಭಾವ ಮೂಡಿಸುವ ನಮ್ಮ ಪ್ರಯತ್ನದ ಈ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ವಿವೇಕ್ ಆಳ್ವರಿಗೆ ಕರೆ ಮಾಡಿದಾಗ ಕ್ಷಣಾರ್ಧದಲ್ಲಿ ಆತಿಥ್ಯ ವಹಿಸಿಕೊಂಡರು. ಅವರದ್ದು ಕ್ರಿಯಾತ್ಮಕ ನಾಯಕತ್ವ. ಯಶಸ್ಸು ನಿಮ್ಮ ಮುಂದಿದೆ’ ಎಂದರು.

‘ಚಿನ್ನದ ಪದಕ ಪಡೆದ ನಾಲ್ಕು ಹಾಗೂ ಬೆಳ್ಳಿ ಪಡೆದ ಒಂದು (ಅದ್ವಿಜ್ ಸಜೇಶ್) ಮಾದರಿಯು ರಾಜ್‌ಕೋಟ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ರಾಷ್ಟ್ರಮಟ್ಟದ ವಿಜೇತರು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತೆರಳಲಿದ್ದಾರೆ’ ಎಂದು ಘೋಷಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಶಾಲೆಗಳ ಆಡಳಿತಾಧಿಕಾರಿ ಪ್ರೀತಮ್ ಕುಂದರ್, ಶಾಲೆಗಳ ಮುಖ್ಯ ಶಿಕ್ಷಕರುಗಳಾದ ಮೊಹಮ್ಮದ್ ಶಫಿ ಶೇಕ್, ಜಾನೆಟ್ ಪಾಯಸ್, ಶೈಲಜಾ ರಾವ್, ಉಮಾರಿ ಫಾಜ್, ವಿಜಯಾ ಇದ್ದರು.

ತೀರ್ಪುಗಾರರಾದ ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಧ್ಯಾಪಕರಾದ ಡಾ.ವಿನಯ್, ಡಾ.ಸಿದ್ದೇಶ್, ಡಾ.ವಿನುತಾ, ಡಾ.ಶಶಿಕುಮಾರ್, ಡಾ.ದತ್ತಾತ್ರೇಯ, ಡಾ.ಉಮೇಶ್ಚಂದ್ರ ಹಾಗೂ ಆಳ್ವಾಸ್ ಪದವಿ ಕಾಲೇಜಿನ ಡಾ.ರಾಮ್ ಭಟ್ ಪಾಲ್ಗೊಂಡರು.
ಮುಖ್ಯ ಶಿಕ್ಷಕಿ ಸರ್ವಾಣಿ ಡಿ. ಹೆಗ್ಡೆ ಹಾಗೂ ಸಹ ಶಿಕ್ಷಕಿ ಸಪ್ನಾ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಶಾಲೆಗಳಿಂದ ಬಂದಿದ್ದ ವಿಜ್ಞಾನ ಮಾದರಿಗಳ ಪೈಕಿ 35 ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದು, ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡವು. ವಿದ್ಯಾರ್ಥಿಗಳ ಜೊತೆ ಮಾರ್ಗದರ್ಶಕ ಶಿಕ್ಷಕರು ಹಾಜರಿದ್ದರು

Related Posts

Leave a Reply

Your email address will not be published.