ಮೂಡುಬಿದಿರೆ : ಸಿಸಿ ಕೆಮರಾ ಅಳವಡಿಸಿದ್ದಲ್ಲಿಯೇ ತ್ಯಾಜ್ಯದ ರಾಶಿ

ಮೂಡುಬಿದಿರೆ :ಪುರಸಭಾ ವ್ಯಾಪ್ತಿಯಲ್ಲಿ ಕಸದ ರಾಶಿ ಬೀಳುವುದನ್ನು ತಪ್ಪಿಸಲು ಹಾಗೂ ಯಾರು ಕಸವನ್ನು ತಂದು ಸುರಿಯುತ್ತಾರೆ ಎಂಬುದನ್ನು ಪತ್ತೆ ಹಚ್ಚಲು ಪುರಸಭೆಯ ವತಿಯಿಂದ ವಿವಿಧ ಕಡೆಗಳಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಆದರೆ ಸಿಸಿ ಕೆಮರಾದ ಬುಡದಲ್ಲಿಯೇ ಕಸದ ರಾಶಿ ತುಂಬುತ್ತಿದೆ. ಇದಕ್ಕೆ ಏನು ಕ್ರಮ ಕೈಗೊಳ್ಳುತ್ತೀರಿ ಈವರೆಗೆ ಯಾವ ಕ್ರಮವನ್ನು ಕೈಗೊಂಡಿದ್ದೀರಿ ಸಿಸಿ ಕೆಮರಾದ ಬಆಯೇ ಕಸದ ರಾಶಿ ಬೀಳುವುದಾದರೆ ಸಿಸಿ ಕೆಮರಾದ ಅಗತ್ಯವಿದೆಯೇ. ಪರಿಸರ ಅಭಿಯಂತರೆ ಏನು ಮಾಡುತ್ತೀದ್ದೀರಿ.. ನೀವು ಫೀಲ್ಡ್‍ಗೆ ಹೋಗಿ ತನಿಖೆ ನಡೆಸಿ ಇಲ್ಲದಿದ್ದರೆ ಅಳವಡಿಸಿರುವ ಸಿಸಿ ಕೆಮರಾಗಳನ್ನೆಲ್ಲಾ ತೆಗೆಯಿರಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಗರಂ ಆದ ಘಟನೆ ಮೂಡುಬಿದಿರೆ ಪುರಸಭೆಯಲ್ಲಿ ನಡೆದಿದೆ.

ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭಾಧಿವೇಶನದಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆದವು. ಸದಸ್ಯೆ ರೂಪಾ ಸಂತೋಷ್ ಶೆಟ್ಟಿ ಅವರು ಮಾತನಾಡಿ ನಮ್ಮ ಪುರಸಭೆಗೆ ಸ್ವಚ್ಛತೆಗಾಗಿ ಪ್ರಶಸ್ತಿಗಳು ಬಂದಿವೆ. ಆದರೆ ಕಾಯರ್‍ಗುಂಡಿ ಪ್ರದೇಶದಲ್ಲಿ ಕಸದ ರಾಶಿಯನ್ನು ಕಂಡರೆ ಪ್ರಶಸ್ತಿ ಕೊಟ್ಟವರು ಹಿಂದೆ ಪಡೆದುಕೊಳ್ಳಬಹುದು ಈ ಬಗ್ಗೆ ಕ್ರಮಕೈಳ್ಳುವಂತೆ ಸಭೆಯ ಗಮನಕ್ಕೆ ತಂದಾಗ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಅವರು ತ್ಯಾಜ್ಯ ರಾಶಿ ಬೀಳುತ್ತಿರುವುದರ ಬಗ್ಗೆ ಪರಿಸರ ಅಭಿಯಂತರೆ ಶಿಲ್ಪಾ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಸಿಸಿ ಕೆಮರಾದ ಕ್ಲ್ಯಾರಿಟಿಯ ಬಗ್ಗೆ ವಿಚಾರಿಸಿದರು. ಸದಸ್ಯರಾದ ಪುರಂದರ ದೇವಾಡಿಗ ಮತ್ತು ಸುರೇಶ್ ಕೋಟ್ಯಾನ್ ಅವರೂ ಧ್ವನಿಗೂಡಿಸಿ ವಿದ್ಯಾಗಿರಿ, ಮತ್ತಿತರ ಪ್ರದೇಶಗಳಲ್ಲಿ ಬೇರೆಡೆಯಿಂದ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಕೆಲವು ಅಂತಹವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ಪ್ರಸಾದ್ ಕುಮಾರ್ ಅವರು ಇನ್ನು ಮುಂದೆ ಆಯಾಯ ಏರಿಯಾದಲ್ಲಿರುವ ಸಿಸಿ ಕೆಮರಾದ ಕನೆಕ್ಷನ್‍ನ್ನು ಅದೇ ವಾರ್ಡಿನ ಸದಸ್ಯರ ಮೊಬೈಲ್‍ಗೆ ಕೊಡುವ ಆಗ ತಮ್ಮ ಏರಿಯಾದಲ್ಲಿ ಯಾರು ಕಸದ ರಾಶಿಯನ್ನು ತಂದು ಹಾಕುತ್ತಾರೆಂದು ತಿಳಿಯಲು ಸಹಕಾರಿಯಾಗುತ್ತದೆ ಇದಕ್ಕೆ ಎಲ್ಲಾ ಸದಸ್ಯರು ಸ್ಪಂದಿಸುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಜಾತ ಶಶಿಧರ್, ಸದಸ್ಯರಾದ ಪಿ.ಕೆ.ಥೋಮಸ್, ಜೊಸ್ಸಿ ಮಿನೇಜಸ್, ಮಮತಾ ಆನಂದ್, ಶಕುಂತಳಾ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಾಧಿಕಾರಿ ಇಂದು ಎಂ, ಇಂಜಿನಿಯರ್ ಪದ್ಮನಾಭ ಉಪಸ್ಥಿತರಿದ್ದರು.

Related Posts

Leave a Reply

Your email address will not be published.