ಮೂಡುಬಿದಿರೆ: ಮಾಂಟ್ರಾಡಿ ಗ್ರಾಮದಲ್ಲಿ ಕೂಸಿನ ಮನೆ ಉದ್ಘಾಟನೆ
ಮೂಡುಬಿದಿರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಆಯ್ಕೆಯಾಗಿರುವ ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಗ್ರಾಮದಲ್ಲಿ ಕೂಸಿನ ಮನೆ ಕೇಂದ್ರವು ಉದ್ಘಾಟನೆಗೊಂಡಿತು.
ಪಂಚಾಯತ್ ಅಧ್ಯಕ್ಷ ಉದಯ್ ಪೂಜಾರಿ ಅವರು ಕೂಸಿನ ಮನೆಯನ್ನು ಉದ್ಘಾಟಿಸಿ, ಗ್ರಾಮಸ್ಥರ ಪ್ರೋತ್ಸಾಹದಿಂದ ಹೆಚ್ಚಿನ ಮಕ್ಕಳ ನೋಂದವಣೆಯಾಗಿ ಯೋಜನೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ಅವರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾಬ್ ಕಾರ್ಡ್ ಹೊಂದಿರುವ ಫಲಾನುಭವಿಗಳು ತಮ್ಮ ೩ ವರ್ಷದ ಕೆಳಗಿನ ಮಕ್ಕಳಿದ್ದಲ್ಲಿ ಕೂಸಿನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಬಹುದು ಎಂದರು.
ತಾಲೂಕು ಐಇಸಿ ಸಂಯೋಜಕರಾದ ಅನ್ವಯ ಮಾತನಾಡಿ, ಕೂಸಿನ ಮನೆಯ ಮಾನದಂಡಗಳು, ಮಕ್ಕಳ ಆರೈಕೆ, ತರಬೇತಿ ಪಡೆದುಕೊಂಡ ಆರೈಕೆದಾರರು ಯಾವ ರೀತಿಯಲ್ಲಿ ಮಕ್ಕಳನ್ನು ಜಾಗರೂಕತೆಯಿಂದ ಪೋಷಿಸುತ್ತಾರೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನೀಡಿದರು.ಬಳಿಕ ಕೂಸಿನ ಮನೆಯ ಮಾಹಿತಿಯನ್ನೊಳಗೊಂಡ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಶೀಲ, ಸದಸ್ಯರಾದ ಜಯಂತ್ ಹೆಗ್ಡೆ, ಸಾಧು, ಲಲಿತಾ, ಮೋಹಿನಿ ನಾಯ್ಕ, ಆಶಾಲತಾ, ಸುನಂದ, ಗ್ರಾ.ಪಂ ಸಿಬ್ಬಂದಿಗಳು, ಅಂಗನವಾಡಿ ಕಾರ್ಯ ಕರ್ತೆ, ಕೂಸಿನ ಮನೆ ಶಿಶುಪಾಲನ ಕೇಂದ್ರದ ಕೇರ್ ಟೇಕರ್ಸ್, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.