ಮೂಡುಬಿದಿರೆ : ಮುರುಕು ಮನೆಯಲ್ಲಿ ಜೀವಿಸುತ್ತಿರುವ ಅಸಹಾಯಕ ಕುಟುಂಬಕ್ಕೆ ಬೇಕಾಗಿದೆ ನೆರವು
ಮೂಡುಬಿದಿರೆ: ಮಳೆಗಾಲ ಬಂತೆಂದರೆ ಸಾಕು “ಉಳ್ಳವರು” ತಮಗೆ ಮನೆಗೆ ಬೇಕಾದ ವ್ಯವಸ್ಥೆಯನ್ನು ಬೇಗನೇ ಮಾಡಿ ಮುಗಿಸುತ್ತಾರೆ. ಆದರೆ ಒಂದು ತುತ್ತು ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿಯಲ್ಲಿರುವ ಬಡವರು ಮಾತ್ರ ಹೊಟ್ಟೆ ತುಂಬಿಸುವುದು ಹೇಗೆ ಎಂಬುದೇ ಚಿಂತೆ ಇರುವಾಗ ಮನೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲು ಕಷ್ಟ ಸಾಧ್ಯವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಇರುವೈಲಿನಲ್ಲೊಂದು ಅಸಹಾಯಕ ಕುಟುಂಬವು ಇಂದೋ, ನಾಳೆಯೋ ಬಿದ್ದು ಹೋಗಲಿರುವ ಮನೆಯಲ್ಲಿ ಜೀವನ ಸಾಗಿಸುತ್ತಿರುವುದು ಚಿಂತಾಜನಕ ಸ್ಥಿತಿ ಕಂಡು ಬಂದಿದೆ.
ಮೂಡುಬಿದಿರೆಯಿಂದ 12 ಕಿ.ಮೀ ದೂರದಲ್ಲಿರುವ ಇರುವೈಲು ಗ್ರಾಮದ ದಡ್ಡೆಗುರಿಯಲ್ಲಿರುವ ಗೀತಾ ಎಂಬ ಮಹಿಳೆಯು ತನ್ನ ಇಬ್ಬರು ಮಕ್ಕಳೊಂದಿಗೆ ಅಸಹಾಯಕ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬ. ಗಂಡನನ್ನು ಕಳೆದು ಕೊಂಡಿರುವ ಗೀತಾ ಅವರು ಕಾಡಿನಿಂದ ಬೀಳುಗಳನ್ನು ತಂದು ಅದರಿಂದ ಬುಟ್ಟಿಗಳನ್ನು ಹೆಣೆದು ಮಾರಾಟ ಮಾಡಿ ಅದರಿಂದ ಬರುತ್ತಿರುವ ಆದಾಯದಿಂದ ತನ್ನಿಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ.
ಪ್ರಸ್ತುತ ಎಲ್ಲಾ ಸೌಲಭ್ಯ-ಸವಲತ್ತುಗಳು ಸರಕಾರದಿಂದ ದೊರೆಯುತ್ತಿದ್ದರೂ ಆ ಸವಲತ್ತುಗಳನ್ನು ಪಡೆದುಕೊಳ್ಳಲು ವಿವಿಧ ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದಿರುವ ಗೀತಾ ಅವರ ಕುಟುಂಬವು ತಮಗೆ ಮನೆಗೆ ಬೇಕಾದ ದಾಖಲೆಗಳನ್ನು ಮಾಡಿಸಿಕೊಳ್ಳದಿರುವುದರಿಂದ ಮನೆ ನಿರ್ಮಾಣಕ್ಕೆ ಪಂಚಾಯತ್ ನಿಂದ ಸಿಗಬೇಕಾದ ಸವಲತ್ತುಗಳಿಂದ ವಂಚಿತವಾಗಿದೆ.
ಗೀತಾ ಅವರ ಇಬ್ಬರು ಮಕ್ಕಳಲ್ಲಿ ದುಡಿಯುವ ವಯಸ್ಸಿನವನಾಗಿರುವ ಮಗ ಕೊರೋನಾ ಸಂದರ್ಭದಲ್ಲಿ ದೃಷ್ಠಿ ಕಳೆದುಕೊಂಡು ಯಾವುದೇ ಕೆಲಸ ಕಾರ್ಯಗಳಿಗೆ ತಾಯಿಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯಲ್ಲಿದ್ದಾನೆ. ಇತ್ತ ಮಗಳು 9ನೇ ತರಗತಿಯನ್ನು ಕಲಿಯುತ್ತಿದ್ದು ಮನೆಯ ಕಷ್ಟ ನೋಡಲಾರದೇ ಶಾಲೆ ಬಿಟ್ಟು ಮನೆಯಲ್ಲಿಯೇ ಉಳಿದುಕೊಂಡಿದ್ದಾಳೆ.
ಇತ್ತ ಮನೆಯ ಹಂಚು, ಪಕ್ಕಾಸುಗಳು, ಗೋಡೆಗಳು ದುಸ್ಥಿಯಲ್ಲಿದ್ದು ದಿನನಿತ್ಯವೂ ಭಯದಿಂದ ಜೀವನ ಸಾಗಿಸುವಂತ್ತಾಗಿದೆ. ನಿರ್ಮಾಣವಾಗಿದೆ.ಒಂದು ಹೊತ್ತಿನ ಊಟಕ್ಕೆ ಆ ಬಡ ಕುಟುಂಬ ಕಷ್ಟಪಡುವಂತಾಗಿದೆ. ಗೀತಾ ಕುಟುಂಬ ದಿನನಿತ್ಯದ ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಇಂತಹ ಪರಿಸ್ಥಿಯ ಮಧ್ಯೆ ತಮ್ಮ ಮನೆ ಯಾವಾಗ ಬೀಳುತ್ತದೆಯೋ ಎಂಬ ಭಯದಲ್ಲಿ ಕಾಲಕಳೆಯುವಂತಾಗಿದೆ.
ಈ ಬಗ್ಗೆ ಪಂಚಾಯತ್‍ನ ಗಮನಕ್ಕೆ ತಂದಾಗ ಅವರಲ್ಲಿ ಸರಿಯಾದ ದಾಖಲೆಗಳಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಯಾರೇ ಜನಪ್ರತಿನಿಧಿಗಳು ತಮ್ಮತ್ತ ಗಮನಹರಿಸುತ್ತಿಲ್ಲ. ಚುನಾವಣೆಯ ಸಂದರ್ಭದಲ್ಲಿ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿರುವ ಜನಪ್ರತಿನಿಧಿಗಳು ಈಗ ತಮ್ಮತ್ತ ತಿರುಗಿಯೂ ನೋಡುತ್ತಿಲ್ಲವೆಂದು ಗೀತಾ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಗೀತಾ ಕುಟುಂಬಕ್ಕೆ ಯಾವುದೇ ಸರ್ಕಾರದ ಸವಲತ್ತುಗಳು ದೊರಕುತ್ತಿಲ್ಲ. ಯಾವುದೇ ಸವಲತ್ತುಗಳನ್ನು ಪಡೆದುಕೊಳ್ಳಲು ಹೋಗಲು ಗೀತಾ ಅವರೇ ಓಡಾಡಿ ಅರ್ಜಿಗಳನ್ನು ಸಲ್ಲಿಸ ಬೇಕು. ಆದರೆ ಅವರು ಅನಕ್ಷರಸ್ಥರಾಗಿದ್ದಾರೆ. ನೆರೆಹೊರೆಯವರಾದ ಶ್ರೀಕಾಂತ್ ಕುಟುಂಬ ಇವರ ದಿನನಿತ್ಯದ ಜೀವನಕ್ಕೆ ಅಕ್ಕಿ ದಿನಸಿಗಳನ್ನು ನೀಡಿ ಸಹಕರಿಸುತ್ತಿದ್ದಾರೆ. ಈ ಬಡ ಕುಟುಂಬದ ಕಷ್ಟ ನೋಡಲಾರದ ಶ್ರೀಕಾಂತ್ ಇವರಿಗೆ ಸರ್ಕಾರದ ಸಿಗುವ ಸವಲತ್ತುಗಳು ಸಿಗಬೇಕೆನ್ನುವ ನಿಟ್ಟಿನಲ್ಲಿ ಪಂಚಾಯತ್ ನಲ್ಲಿ ಮಾತುಕತೆ ನಡೆಸಿದ್ದಾರೆ. ಈ ಬಡಕುಟುಂಬಕ್ಕೆ ನೆರವಾಗುವ ಸಹೃದಯಿಗಳು ಈ ಕೆಳಗಿನ ಅಕೌಂಟ್ ನಂಬರ್ ಗೆ A/c :71170100009305 IFSC: BARB0VJKUPP
ತಮ್ಮಲ್ಲಿ ಸಾಧ್ಯವಾದಷ್ಟು ಧನಸಹಾಯ ಮಾಡುವಂತೆ ಕೋರಿದೆ.