ಮೂಡುಬಿದರೆ : ಬಡ ಕುಟುಂಬಕ್ಕೆ ಆಸರೆಯಾದ ಪವರ್ ಫ್ರೆಂಡ್ಸ್
ಪವರ್ ಫ್ರೆಂಡ್ಸ್ ಬೆದ್ರ ಸೇವಾ ಯೋಜನೆಯಡಿ ಇರುವೈಲು ಗ್ರಾಮದ ಕಲ್ಲಾಡಿ ಎಂಬಲ್ಲಿನ ಬಡ ಕುಟುಂಬಕ್ಕೆ ಮನೆ ನಿರ್ಮಿಸಲಾಗಿದ್ದು, ಹಸ್ತಾಂತರ ಕಾರ್ಯಕ್ರಮ ಜೂನ್ 11ರಂದು ನಡೆಯಲಿದೆ ಎಂದು ಪವರ್ ಫ್ರೆಂಡ್ಸ್ ಬೆದ್ರ ಅಧ್ಯಕ್ಷ ವಿನಯ ಕುಮಾರ್ ತಿಳಿಸಿದರು.
ಅವರು ಮೂಡುಬಿದರೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಲ್ಲಾಡಿಯ ನೋಣಯ್ಯ ಪರವ ಎಂಬವರ ಬಡ ಕುಟುಂಬವು ಸಣ್ಣದಾದ ಮನೆಯಲ್ಲಿ ವಾಸವಾಗಿದ್ದರು. ಯಾವುದೇ ಮೂಲಭೂತ ಸೌಕರ್ಯಗಳು ಇರಲಿಲ್ಲ.
ಇದನ್ನು ಮನಗಂಡು ಪವರ್ ಫ್ರೆಂಡ್ಸ್ ಸದಸ್ಸರು ಆ ಬಡ ಕುಟುಂಬಕ್ಕೆ ಆಸರೆಯಾಗಲು ನಿರ್ಧರಿಸಿದ್ದೇವು. ಇದೀಗ ಎಲ್ಲ ಸೌಲಭ್ಯಗಳೊಂದಿಗೆ ಮನೆ ನಿರ್ಮಿಸಲಾಗಿದ್ದು , ನಮಗೆ ಮಾರ್ಗದರ್ಶಕರಾಗಿದ್ದ ಮೂಡುಬಿದಿರೆ ಮಾರುಕಟ್ಟೆಯಲ್ಲಿ ತರಕಾರಿ ಉದ್ಯಮಿಯಾಗಿದ್ದ ದಿ.ಹರೀಶ್ ಮಾಂಟ್ರಾಡಿ ಅವರ ನೆನಪಿಗಾಗಿ ಮನೆಗೆ ಹರೀಶ್ ನಿವಾಸ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.
ಜೂನ್ 11ರಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ವಜ್ರದೇಹಿ ಮಠದ ದೀಪ ಪ್ರಜ್ವಲನೆ ಮಾಡಲಿದ್ದು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಶಾಸಕ ಅಭಯಚಂದ್ರ ಜೈನ್‍ಮಿಥುನ್ ರೈ, ಶ್ರೀಪತಿ ಭಟ್, ಸುದರ್ಶನ್ ಎಂ, ಭಾಸ್ಕರ ಕಟ್ಟೆಮಾರ್,ವಲೇರಿಯನ್ ಕುಟನ್ಹಾ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಉಪಾಧ್ಯಕ್ಷ ಜಯಪ್ರಕಾಶ್ ಭಂಡಾರಿ, ಸದಸ್ಯರಾದ ಗುರುಪ್ರಸಾದ್, ಅವಿನಾಶ್, ಪ್ರದೀಪ್ ಉಪಸ್ಥಿತರಿದ್ದರು.