ಮೂಡುಬಿದಿರೆ: ಅಂಚೆ ಪಾಲಕ ಅಶೋಕ್ ವಿರುದ್ಧ ವಂಚನೆ ದೂರು ದಾಖಲು
ಮೂಡುಬಿದಿರೆ: ಮೂರು ವರ್ಷಗಳ ಹಿಂದೆ ಕಡಂದಲೆ ಗ್ರಾಮೀಣ ಅಂಚೆ ಕಚೇರಿಯಲ್ಲಿ ಗ್ರಾಹಕರ ಸುಮಾರು ರೂ 13.50 ಲಕ್ಷ ಹಣ ದುರ್ಬಳಕೆ ಮಾಡಿದ ಆರೋಪದಲ್ಲಿ ಅಂಚೆ ಪಾಲಕ ಅಶೋಕ್ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಾಗಿದೆ.
2010ರಿಂದ 2021ರ ಅವಧಿಯಲ್ಲಿ ಅಶೋಕ್ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಸುಮಾರು 22 ಅಂಚೆ ಗ್ರಾಹಕರ ಉಳಿತಾಯ ಖಾತೆ ಮತ್ತು 4 ಗ್ರಾಹಕರ ವಿವಿಧ ವಿಮಾ ಪಾಲಿಸಿಗಳ ಸುಮಾರು 13.50 ಲಕ್ಷ ಹಣವನ್ನು ವಂಚಿಸಿದ್ದಾರೆನ್ನಲಾಗಿದೆ. ಗ್ರಾಹಕರು ಅಂಚೆ ಇಲಾಖೆಗೆ ಕಟ್ಟಿದ ಹಣವನ್ನು ಅವರ ಪಾಸ್ ಪುಸ್ತಕದಲ್ಲಿ ಮಾತ್ರ ನಮೂದಿಸುತ್ತಿದ್ದು ಇಲಾಖೆಯ ದಾಖಲಾತಿಯಲ್ಲಿ ಇರುತ್ತಿರಲಿಲ್ಲ ಎನ್ನಲಾಗಿದೆ. ಗ್ರಾಹಕರಿಂದ ಸಂಗ್ರಹವಾಗುತ್ತಿದ್ದ ಹಣವನ್ನು ಹತ್ತಿರದ ಮಿತ್ತಬೈಲು ಉಪ ಅಂಚೆ ಕಚೇರಿಗೆ ದಿನಂಪ್ರತಿ ನೀಡಬೇಕಾಗಿತ್ತು. ಆದರೆ ಆರೋಪಿ ಕೆಲವು ಗ್ರಾಹಕರ ಹಣವನ್ನು ಇಲಾಖೆಯ ಲೆಕ್ಕಕ್ಕೆ ತೋರಿಸದೆ ಉಳಿದ ಹಣವನ್ನು ಮಾತ್ರ ಮಿತ್ತಬೈಲು ಅಂಚೆ ಕಚೇರಿಗೆ ನೀಡುತ್ತಿದ್ದ ಎನ್ನಲಾಗಿದೆ. ಹಳ್ಳಿಯ ಜನರಿಗೆ ಈತನ ವಂಚನೆ ಬಗ್ಗೆ ಅರಿವಿಲ್ಲದೆ ತಮ್ಮ ಪಾಸ್ ಪುಸ್ತಕಗಳನ್ನು ಕೂಡ ಅಂಚೆ ಕಚೇರಿಯಲ್ಲೆ ಬಿಟ್ಟು ಹೋಗುತ್ತಿದ್ದರೆನ್ನಲಾಗಿದೆ. ಏತನ್ಮಧ್ಯೆ ಬಂಟ್ವಾಳ ಉಪವಿಭಾಗದ ಸಹಾಯಕ ಸುಪರಿಂಟೆಂಡೆಂಟ್ ಆಗಿದ್ದ ಲೋಕನಾಥ್ ಅವರು ಈ ವಂಚನೆ ಪ್ರಕರಣವನ್ನು ಬಯಲಿಗೆಳೆದು ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಿಗೆ ತನಿಖಾ ವರದಿಯನ್ನು ಸಲ್ಲಿಸಿದ್ದರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬಂಟ್ವಾಳ ಉಪವಿಭಾಗದ ಈಗಿನ ಸಹಾಯಕ ಸುಪರಿಂಟೆಂಡೆಂಟ್ ಪ್ರಹ್ಲಾದ ನಾಯಕ್ ಆರೋಪಿ ಅಶೋಕ್ ವಿರುದ್ಧ ಬುಧವಾರ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾರೆ. ಆರೋಪಿಯಿಂದ ಈಗಾಗಲೇ ರೂ 8 ಲಕ್ಷ ವಸೂಲಿ ಮಾಡಲಾಗಿದ್ದು ಉಳಿದ ಹಣವನ್ನು ಅಂಚೆ ಇಲಾಖೆ ಸೇರಿಸಿ ಗ್ರಾಹಕರಿಗೆ ಹಿಂತಿರುಗಿಸಿದೆ ಎನ್ನಲಾಗಿದೆ. ಪ್ರಾಂತ್ಯ ಲಾಡಿ ನಿವಾಸಿಯಾಗಿರುವ ಆರೋಪಿ ಅಶೋಕ್‍ನನ್ನು ಕೆಲಸದಿಂದ ವಜಾ ಮಾಡಲಾಗಿದೆ.