* ಮೂಡುಬಿದಿರೆ: ಶ್ರೀ ರಾಮನ ಮಂದಿರ ನಿರ್ಮಾಣಕ್ಕಾಗಿ ಬೆಳುವಾಯಿಯಲ್ಲಿ ನಿರಂತರ ಬೆಳಗಿದ ನಂದಾದೀಪ

ಮೂಡುಬಿದಿರೆ : ಅಯೋಧ್ಯೆಯಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮನ ಮಂದಿರವು ಯಾವುದೇ ಅಡೆತಡೆಯಿಲ್ಲದೆ ನಿರ್ಮಾಣವಾಗಬೇಕೆಂಬ ಸಂಕಲ್ಪದೊಂದಿಗೆ ಬೆಳುವಾಯಿಯ ಮನೆಯೊಂದರ ದೇವರ ಕೋಣೆಯಲ್ಲಿ ಕಳೆದ ಮೂರೂವರೆ ವರ್ಷಗಳಿಂದ “ನಂದಾದೀಪ” ನಿರಂತರ ಬೆಳಗುತ್ತಿದೆ.

2020 ರ ಆಗಸ್ಟ್ 4ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವಾಯಿತು. ಆ ದಿನದಿಂದಲೇ ಬಿಜೆಪಿಯ ಸ್ಥಾನೀಯ ಸಮಿತಿಯ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಬೆಳುವಾಯಿ ಮತ್ತು ಅವರ ಕುಟುಂಬದ ಸದಸ್ಯರೆಲ್ಲರೂ ಸೇರಿ ಇಂತಹ ಕಾರ್ಯವೊಂದನ್ನು ಕೈಗೊಂಡರು.
ಜ.22ರಂದು ಶ್ರೀ ರಾಮನ ಮಂದಿರ ಉದ್ಘಾಟನೆಗೊಳ್ಳಲಿದ್ದು ಅಲ್ಲಿ ವರೆಗೆ 1267 ದಿನಗಳು ಸರಿಯುತ್ತವೆ. ಇಷ್ಟು ದಿನಗಳಲ್ಲಿ ಒಂದು ದಿನವೂ ಚಾಚು ತಪ್ಪದೆ ನಂದಾದೀಪವು ಬೆಳಗುತ್ತಿದೆ.
5 ಲೀಟರ್ ನ ಮೂವತ್ತಾರು ಬಾಕ್ಸ್ ನ 180 ಲೀಟರ್ ಎಳ್ಳೆಣ್ಣೆ ಖರ್ಚಾಗುತ್ತದೆ. ಮೊದಲಿಗೆ 5 ಲೀಟರ್ ಎಳ್ಳೆಣ್ಣೆ 24 ದಿನಗಳವರೆಗೆ ಬರುತ್ತಿತ್ತು. ನಂತರದ ದಿನಗಳಲ್ಲಿ 1 ತಿಂಗಳು 10 ದಿನಗಳವರೆಗೆ ಬರುತ್ತಿದೆ.

ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಅಡೆತಡೆ ಬರಬಾರದು ಎಂಬ ಉದ್ದೇಶದಿಂದ ಬೆಳುವಾಯಿಯ ಸುರೇಶ್ ಭಟ್ ಅವರು ಪ್ರತಿ ವರ್ಷಕ್ಕೊಮ್ಮೆ ಅಲ್ಲಿಗೆ ಬಂದು ಅಲಂಕಾರ ಪೂಜೆ, ಗಣಹೋಮ ವಿಧಿ ವಿಧಾನಗಳನ್ನು ಪೂರೈಸಿ ಹೋಗುತ್ತಿದ್ದರು.
ಸುರೇಶ್ ಕುಮಾರ್ ಅವರ ಪುತ್ರಿ ಸುಪ್ರಿತಾ ಅವರು ಪ್ರತಿದಿನ ದೀಪಕ್ಕೆ ಎಳ್ಳೆಣ್ಣೆಯನ್ನು ಹಾಕಿ ಬತ್ತಿ ಹಚ್ಚಿ ನಂದಾದೀಪವನ್ನು ಬೆಳಗಿಸುತ್ತಾ ಬಂದಿದ್ದಾರೆ. ಪತ್ನಿ ಉಷಾ ಮತ್ತು ಪುತ್ರ ಸುಜಿತ್ ಈ ಕಾರ್ಯಕ್ಕೆ ಸಹಕಾರವನ್ನು ನೀಡುತ್ತಾ ಬರುವ ಮೂಲಕ ರಾಮನ ಮಂದಿರ ಆದಷ್ಟು ನಿರ್ಮಾಣವಾಗಲೆಂದು ಪ್ರಾರ್ಥಿಸುತ್ತಾ ಬಂದಿದ್ದಾರೆ.
