ಟಯರ್ಸ್ ಉದ್ಯಮಿ ಪೂವಪ್ಪ ಕುಂದರ್ ನಿಧನ
ಮೂಡುಬಿದಿರೆ : ಕಳೆದ ಹಲವು ವರ್ಷಗಳಿಂದ ಟಯರ್ ಉದ್ಯಮವನ್ನು ನಡೆಸುತ್ತಾ ಬಂದಿರುವ ಹನುಮಾನ್ ಟಯರ‍್ಸ್ ನ ಮಾಲಕ, ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಪೂವಪ್ಪ ಕುಂದರ್ ಅವರು ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೂಲತ: ಪರಂಗಿಪೇಟೆಯ ನಿವಾಸಿಯಾಗಿದ್ದ ಪೂವಪ್ಪ ಕುಂದರ್ ಮೂಡುಬಿದಿರೆಗೆ ಉದ್ಯೋಗವನ್ನು ಅರಸಿಕೊಂಡು ಬಂದು ಮೂಡುಬಿದಿರೆಯಲ್ಲಿ ಮಂಜುನಾಥ ಟೈರ್ ರಿಸೋಲಿಂಗ್ ಘಟಕದ ಮೂಲಕ ಅನುಭವ ಗಳಿಸಿ ಬಳಿಕ ಸ್ವರಾಜ್ಯ ಹನುಮಾನ್ ಟಯರ‍್ಸ್ ಉದ್ಯಮ ಪ್ರಾರಂಭಿಸಿ ಕಳೆದ ನಾಲ್ಕು ದಶಕಗಳಲ್ಲಿ ರಿಸೋಲಿಂಗ್ ಉದ್ಯಮದಲ್ಲಿ ಉತ್ತಮ ಹೆಸರು ಗಳಿಸಿದರು.
ಬಾಲ್ಯದಿಂದಲೇ ರಾ.ಸೇ.ಯೋ. ಕಾರ್ಯಕರ್ತರಾಗಿದ್ದ ಅವರು ವಿ.ಹಿಂ.ಪ.ನಲ್ಲೂ ಸಕ್ರಿಯರಾಗಿದ್ದರು . 2002 ರಲ್ಲಿ ಮೂಡುಬಿದಿರೆಯ ನಾರಾಯಣ ಗುರು ಸೇವಾದಳದ ಅಧ್ಯಕ್ಷರಾಗಿ ಬಳಿಕ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಅವರು ಮಾತೃಭೂಮಿ ಸೌಹಾರ್ದ ಸಹಕಾರಿಯ ನಿರ್ದೇಶಕರಾಗಿದ್ದರ
ಮೃತರು ಪತ್ನಿ, ಪುತ್ರಿ, ಮೂವರು ಪುತ್ರರನ್ನು ಅವರು ಅಗಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್, ಸಾರಿಗೆ ಉದ್ಯಮಿ ನಾರಾಯಣ ಪಿ.ಎಂ., ಮಾತೃಭೂಮಿ ಸೌಹಾರ್ದ ಸಹಕಾರಿಯ ಪರವಾಗಿ ಮೂ.ವೆ. ಚಂದ್ರಹಾಸ್, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ಪಿ.ಕೆ. ರಾಜುಪೂಜಾರಿ, ರವೀಂದ್ರ ಸುವರ್ಣ, ಸುರೇಶ್ ಕೋಟ್ಯಾನ್, ಶಂಕರ ಕೋಟ್ಯಾನ್ ಮತ್ತಿತರ ಪ್ರಮುಖರು ಪೂವಪ್ಪ ಕುಂದರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.