ಮುನ್ನೂರು ಗ್ರಾ.ಪಂ. : ಅಧ್ಯಕ್ಷರಾಗಿ ವಿಶಾಲಾಕ್ಷಿ ಮತ್ತು ಉಪಾಧ್ಯಕ್ಷರಾಗಿ ಮಹಾಬಲ ಟಿ.ದೆಪ್ಪೆಲಿಮಾರ್ ಆಯ್ಕೆ

ಮುನ್ನೂರು ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿದ್ದು ಕಾಂಗ್ರೆಸ್ ಮತ್ತು ಸಿಪಿಐಎಂ ಮೈತ್ರಿ ಆಡಳಿತ ಮುಂದುವರಿದಿದೆ. ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ವಿಶಾಲಾಕ್ಷಿ ಮತ್ತು ಉಪಾಧ್ಯಕ್ಷರಾಗಿ ಸಿಪಿಐಎಂ ಬೆಂಬಲಿತ ಸದಸ್ಯ ಮಹಾಬಲ ಟಿ.ದೆಪ್ಪೆಲಿಮಾರ್ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 9, ಸಿಪಿಐಎಂ 3 ಸ್ಥಾನಗಳ ಪೈಕಿ ಓರ್ವ ಸದಸ್ಯ ಮೃತಪಟ್ಟಿದ್ದಾರೆ. ಬಿಜೆಪಿ 9, ಎಸ್‍ಡಿಪಿಐ ಮತ್ತು ಪಕ್ಷೇತರ ತಲಾ ಒಂದು ಸ್ಥಾನ ಇದೆ. ಆಡಳಿತಕ್ಕೆ ಮೈತ್ರಿ ಅನಿವಾರ್ಯ ಆಗಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೊತೆ ಸಿಪಿಐಎಂ ಮೈತ್ರಿ ಮುಂದುವರಿಸಿದೆ.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ವಿಶಾಲಾಕ್ಷಿ ಅವರು 13,ಬಿಜೆಪಿ ಬೆಂಬಲಿತೆ ಚಂದ್ರಕಲಾ 9, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿಪಿಐಎಂ ಬೆಂಬಲಿತ ಮಹಾಬಲ ಟಿ.ದೆಪ್ಪೆಲಿಮಾರ್ 13 ಹಾಗೂ ಬಿಜೆಪಿ ಬೆಂಬಲಿತ ಸುರೇಖ 9 ಮತಗಳನ್ನು ಪಡೆದರು. ಎಸ್ ಡಿಪಿಐ ಮತ್ತು ಪಕ್ಷೇತರ ಸದಸ್ಯರು ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಬೆಂಬಲ ನೀಡಿದ್ದರಿಂದ ಎರಡು ಮತಗಳು ಹೆಚ್ಚುವರಿಯಾಗಿ ಲಭಿಸಿದವು.

ಸಿಪಿಐಎಂ ಉಳ್ಳಾಲ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಮಾತನಾಡಿ, ಗ್ರಾಮದಲ್ಲಿ ಸಾಮರಸ್ಯ ಉಳಿಸುವ, ಎಲ್ಲರಿಗೂ ಅಧಿಕಾರ ಸಿಗಬೇಕೆನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಜೊತೆ ಸಿಪಿಐಎಂ ಮೈತ್ರಿ ಮಾಡಿಕೊಂಡಿದೆ ಎಂದು ತಿಳಿಸಿದರು.

ಮುನ್ನೂರು ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಅವಧಿಗೂ ಜಾತ್ಯತೀತ ಪಕ್ಷಗಳ ಬೆಂಬಲಿತರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರ ಅವಧಿಯಲ್ಲಿ ಗ್ರಾಮ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.

ಸಿಪಿಐಎಂ ಮುಖಂಡ ಜಯಂತ್ ನಾಯಕ್, ನಿಕಟಪೂರ್ವ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ದಿನೇಶ್ ರೈ, ಆರ್‍ಕೆಸಿ ಅಝೀಝ್ ಮತ್ತಿತರರು ಶುಭ ಹಾರೈಸಿದರು

Related Posts

Leave a Reply

Your email address will not be published.