ನೆಲ್ಯಾಡಿ: ಕೌಕ್ರಾಡಿ ಪೇಟೆ ಉಳಿಸಿ- ಹೋರಾಟಕ್ಕೆ ಸಮಾಲೋಚನೆ ಸಭೆ: ನ.23ರಂದು ಪ್ರತಿಭಟನೆಗೆ ನಿರ್ಧಾರ
ನೆಲ್ಯಾಡಿ ಪೇಟೆಯ ಎರಡೂ ಬದಿ ತಡೆಗೋಡೆಯೊಂದಿಗೆ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ರಸ್ತೆ ಕೈಬಿಟ್ಟು ಕಲ್ಲಡ್ಕದಲ್ಲಿ ನಿರ್ಮಾಣವಾಗುತ್ತಿರುವ ಮಾದರಿಯಲ್ಲಿಯೇ ಫ್ಲೈಓವರ್ ಮಾಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸಲು ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯ ವಠಾರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಗಿದೆ.
ನೆಲ್ಯಾಡಿ ಭಾರತ್ ಪೆಟ್ರೋಲ್ ಪಂಪ್‍ನ ಬಳಿಯಿಂದ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದ ತನಕ ಸುಮಾರು 1 ಕಿ.ಮೀ.ದೂರಕ್ಕೆ ಪೇಟೆಯ ಎರಡೂ ಬದಿ ಸರ್ವೀಸ್ ರಸ್ತೆ, ತಡೆಗೋಡೆ ನಿರ್ಮಿಸಿ ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಪೇಟೆಯ ಒಂದು ಬದಿ ಇನ್ನೊಂದು ಬದಿಗೆ ಕಾಣಿಸುತ್ತಿಲ್ಲ. ಎರಡು ಕಡೆಯಲ್ಲಿ ಅಂಡರ್ ಪಾಸ್ ಆಗುತ್ತಿದ್ದರೂ ಪೇಟೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಜನರಿಗೆ ಸಂಚಾರಕ್ಕೆ ಕಷ್ಟವಿದೆ. ಸರ್ವೀಸ್ ರಸ್ತೆಯೂ ಇಕ್ಕಟ್ಟಾಗಿರುವುದರಿಂದ ಸಮಸ್ಯೆಯಾಗಿದೆ.
ಒಟ್ಟಿನಲ್ಲಿ ನೆಲ್ಯಾಡಿ ಪೇಟೆಯಲ್ಲಿ ಈಗ ನಡೆಯುತ್ತಿರುವ ಕಾಮಗಾರಿಯು ಊರು, ಪೇಟೆಯ ಅಭಿವೃದ್ಧಿಗೆ ಮಾರಕವಾಗಲಿದೆ. ಆದ್ದರಿಂದ ಈಗ ನಡೆಯುತ್ತಿರುವ ಅಂಡರ್ಪಾಸ್ ಕಾಮಗಾರಿ ಕೈಬಿಟ್ಟು ಫ್ಲೈಓವರೇ ಮಾಡುವ ನಿಟ್ಟಿನಲ್ಲಿ ತೀವ್ರ ಹೋರಾಟ, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಬಂದ ಅಭಿಪ್ರಾಯದಂತೆ ನೆಲ್ಯಾಡಿಯಲ್ಲಿ ಫ್ಲೈಓವರ್ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಒತ್ತಡ ತರುವ ನಿಟ್ಟಿನಲ್ಲಿ ಹೋರಾಟ ಸಮಿತಿ ರಚಿಸಲಾಯಿತು.
ಸಭೆಯಲ್ಲಿ ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಸತೀಶ್ ಕೆ.ಎಸ್.ದುರ್ಗಾಶ್ರೀ, ನಾಝೀಂ ಸಾಹೇಬ್, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಇಬ್ರಾಹಿಂ ಎಂ.ಕೆ., ಪೂವಪ್ಪ ಕರ್ಕೇರ, ಗಣೇಶ್ ರಶ್ಮಿ, ಟೆಂಪೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಹನೀಫ್ ಕರಾವಳಿ ಸೇರಿದಂತೆ ನೆಲ್ಯಾಡಿ, ಕೌಕ್ರಾಡಿ ಗ್ರಾ.ಪಂ.ಸದಸ್ಯರು ಮೊದಲಾದವರು ಪಾಲ್ಗೊಂಡಿದ್ದರು.