ಪಚ್ಚನಾಡಿ ತ್ಯಾಜ್ಯ ಸಂಸ್ಕರಣಾ ಘಟಕ ಸುರಕ್ಷತೆಗೆ ಬೋರ್‍ವೆಲ್ ನೀರಿನ ವ್ಯವಸ್ಥೆ : ಮೇಯರ್ ಸುಧೀರ್ ಶೆಟ್ಟಿ
ಪಚ್ಚನಾಡಿಯ ಕಸ ವಿಲೇವಾರಿ ಘಟಕದ ಸುತ್ತ ಪೈಪ್‍ಲೈನ್ ಅಳವಡಿಸಿ ಸ್ಪ್ರಿಂಕ್ಲರ್ ಹಾಕಿ ಆಕಸ್ಮಿಕ ಬೆಂಕಿ ಅನಾಹುತ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು. ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಂದೊಗೆ ಮಾತನಾಡಿದರು.
ಕಳೆದ ವರ್ಷ ಬೇಸಿಗೆಯಲ್ಲಿ ಕಸ ವಿಲೇವಾರಿ ಘಟಕಕ್ಕೆ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿತ್ತು. ಹೀಗಾಗಿ ಈ ಬಾರಿ ಮುನ್ನೆಚ್ಚರಿಕೆಯಾಗಿ ಎರಡು ಬೋರ್‍ವೆಲ್ ಕೊರೆಯಲಾಗಿದ್ದು, 5.5 ಇಂಚು ನೀರು ಇದೆ. ಘಟಕದ ಸುತ್ತಲೂ ಪೈಪ್‍ಲೈನ್ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಕಿ ಅವಘಡ ಸಂಭವಿಸಿದರೆ, ಬೋರ್‍ವೆಲ್ ನೀರು ಬಳಸಿಕೊಳ್ಳಲಾಗುತ್ತದೆ. 40 ಲಕ್ಷ ವೆಚ್ಚದ ಕಾಮಗಾರಿ ಶೀಘ್ರ ನಡೆಯಲಿದೆ ಎಂದರು.
ವಾರಕ್ಕೊಮ್ಮೆ ನಗರದಲ್ಲಿ ಒಣ ಕಸ ಸಂಗ್ರಹವಾಗುತ್ತಿದೆ. ಮದರ್ ನೇಚರ್ ಮತ್ತು ನೇಚರ್ ಫ್ರೆಂಡ್ಲಿ ಎಂಬ ಎರಡು ಕಂಪನಿಗಳು ಇವುಗಳ ನಿರ್ವಹಣೆ ಮಾಡುತ್ತಿವೆ. ಥ್ರೋಮಿಲ್ಸ್ ಯಂತ್ರದ ಮೂಲಕ ಮಿಶ್ರ ಕಸವನ್ನು ಒಣಗಿಸಿ, ಪ್ರತ್ಯೇಕಿಸಿ ವಿಲೇವಾರಿ ಮಾಡಲಾಗುತ್ತದೆ. ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಕಲಬುರಗಿಯ ಸಿಮೆಂಟ್ ಫಾಕ್ಟರಿಗೆ ಕಳುಹಿಸಲಾಗುತ್ತಿದೆ.
ಕಸ ನಿರ್ವಹಣೆಯಿಂದ ಪಾಲಿಕೆಗೆ ಹೆಚ್ಚು ಹೊರೆಯಾಗುತ್ತಿಲ್ಲ. 40 ಕಾರ್ಮಿಕರನ್ನು ಮಾತ್ರ ಪಾಲಿಕೆ ಒದಗಿಸಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಉಪಮೇಯರ್ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಭರತ್, ಪಾಲಿಕೆ ಸದಸ್ಯರಾದ ಭಾಸ್ಕರ್ ಎಂ, ಸಂಗೀತಾ ಆರ್. ನಾಯಕ್ ಉಪಸ್ಥಿತರಿದ್ದರು.