ಪಡುಬಿದ್ರಿ: ಆನ್‍ಲೈನ್ ವಂಚನೆಯಿಂದ ಮೂರು ಲಕ್ಷ ಕಳೆದುಕೊಂಡ ಎರ್ಮಾಳು ನಿವಾಸಿ
ಬ್ಯಾಂಕ್ ಮ್ಯಾನೇಜರ್ ಎಂಬುದಾಗಿ ಕನ್ನಡ ಬಾಷೆಯಲ್ಲಿ ಪರಿಚಯಿಸಿ ಕೆವೈಸಿ ಲಿಂಕ್ ಆಗಿಲ್ಲ ಒಟಿಪಿ ನೀಡಿ ಎಂದು ಹೇಳಿ, ಒಟಿಪಿ ನೀಡುತ್ತಿದಂತೆ ಮೂರು ಬಾರಿ ಖಾತೆಯಿಂದ ಹಣ ಡ್ರಾ ಆಗಿದ್ದು ಮೂರು ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ತೆಂಕ ಎರ್ಮಾಳಿನಲ್ಲಿ ನಡೆದಿದೆ.
ಎರ್ಮಾಳು ತೆಂಕ ಕಿನಾರ ಶಾಲೆಯ ಬಳಿಯ ನಿವಾಸಿ ಶಂಕರ್ ಎಂಬವರೇ ಹಣ ಕಳೆದುಕೊಂಡವರು. ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದ ಇವರು ರಾತ್ರಿ ಹಗಲೆನ್ನದೆ, ಬಿಸಿಲು ಮಳೆಗೆ ಮೀನುಗಾರಿಕೆ ನಡೆಸಿ ಕೂಡಿಟ್ಟ ಹಣ ವಂಚಕರ ವಂಚನೆಯಿಂದ ಕಳೆದುಕೊಳ್ಳುವಂತ್ತಾಗಿದೆ. ಎಲ್ಲಾ ಮಾಧ್ಯಮಗಳಲ್ಲೂ ಈ ಆನ್‍ಲೈನ್ ವಂಚನೆಯ ಬಗ್ಗೆ ಮೋಸ ಹೋಗದಂತೆ ಎಚ್ಚರಿಕೆ ನೀಡಲಾಗುತ್ತಿದೆಯಾದರೂ ದಿನದಿಂದ ವಂಚನೆಗೊಳಗಾಗುವವರ ಸಂಖ್ಯೆ ಅಧಿಕವಾಗುತ್ತಿದೆ. ಹಣ ಕಳೆದುಕೊಂಡ ಶಂಕರ್ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.