ಪಡುಬಿದ್ರಿ: ಪಿಡಬ್ಲ್ಯುಡಿ ಇಲಾಖಾ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ, ಕಾಮಗಾರಿಗೆ ತಡೆಯೊಡ್ಡಿದ್ದ ಅಧಿಕಾರಿಗಳು
ಅಕ್ರಮವಾಗಿ ಪಿಡಬ್ಲ್ಯೂಡಿ ರಸ್ತೆಯಂಚಿನಲ್ಲಿ ನಿರ್ಮಾಣ ನಡೆಸುತ್ತಿದ್ದ ನಾಲ್ಕು ಕಟ್ಟಡ ಪ್ರದೇಶಕ್ಕೆ ಸ್ವತಃ ಪಿಡಬ್ಲ್ಯೂಡಿ ಅಧಿಕಾರಿಗಳೇ ಸ್ಥಳಕ್ಕೆ ಬಂದು ಪರಿಶೀಲಿಸಿ ಕಾಮಗಾರಿ ನಡೆಸದಂತೆ ಕಟ್ಟಡ ಕಾಮಗಾರಿ ತಡೆಯೊಡ್ಡಿದ ಘಟನೆ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಈ ಅಕ್ರಮಕ್ಕೆ ಸ್ವತಃ ಗ್ರಾ.ಪಂ. ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬುದಾಗಿ ಸಾರ್ವಜನಿಕ ಲಿಖಿತ ದೂರು ಜಿಲ್ಲಾಧಿಕಾರಿಗಳು ಸಹಿತ ಎಲ್ಲಾ ಇಲಾಖೆಗಳಿಗೂ ರವಾನೆ ಆಗಿದೆ.
ಸದ್ಯಕ್ಕೆ ಪಲಿಮಾರು ಉದ್ಯಮಿ ದಿನೇಶ್ ಪ್ರಭು, ಬಾಲಕೃಷ್ಣ ಶೆಟ್ಟಿ ಅಡ್ವೆ, ಜಯರಾಮ ಗೋಪಾಲಕೃಷ್ಣ ಶೆಟ್ಟಿ ನಂದಿಕೂರು ಹಾಗೂ ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘ ಇವರ ಕಟ್ಟಡಗಳು ಪಿಡಬ್ಲ್ಯೂಡಿ ಇಲಾಖಾ ನಿಯಮಗಳನ್ನು ತೂರಿ ರಸ್ತೆಯಂಚಿನಲ್ಲಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನನ್ವಯ ಪಡುಬಿದ್ರಿ ಪೆÇಲೀಸ್ ಅಧಿಕಾರಿಗಳ ರಕ್ಷಣೆಯಲ್ಲಿ ಪಿಡಬ್ಲ್ಯೂಡಿ ಅಧಿಕಾರಿ ಮನೋಜ್ ಕಾಮಗಾರಿ ಮುಂದುವರಿಸದಂತೆ ಎಚ್ಚರಿಕೆ ನೀಡಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಮಾಜಿ ತಾ.ಪಂ. ಸದಸ್ಯರಾದ ದಿನೇಶ್ ಕೋಟ್ಯಾನ್ ಪಲಿಮಾರು ಅವರು ಮಾತನಾಡಿ, ಈ ಅಕ್ರಮ ಕಾಮಗಾರಿಗಳಲ್ಲಿ ಪಲಿಮಾರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಾಮೀಲಾಗಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಅವರು ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತ ಪಡಿಸಿದ್ದಾರೆÉ ಎಂದರು.
ಕಾರ್ಯಚರಣೆಯ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಪಿಡಬ್ಲ್ಯೂಡಿ ಅಧಿಕಾರಿ ಮನೋಜ್ ಇಲಾಖೆಗೆ ಬಂದ ದೂರಿನಂತೆ ಪಲಿಮಾರು ಗ್ರಾ.ಪಂ. ವ್ಯಾಪ್ತಿಯ ನಾಲ್ಕು ಕಟ್ಟಡಗಳ ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಮುಂದಿನ ದಿನದಲ್ಲಿ ನಮ್ಮ ಇಲಾಖಾ ಮೂಲಕ ಸರ್ವೆ ಕಾರ್ಯ ನಡೆಸಿ ಅಕ್ರಮ ಸಾಭೀತು ಆದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.