ಸ್ಥಾವರ ಫೋನ್ ಸಾಯಿಸಿದ ಜಂಗಮ ಫೋನ್

ಭಾರತದ ಮೊಬೈಲ್ ರಫ್ತು ಒಂದು ದಶಕದಲ್ಲಿ ದುಪ್ಪಟ್ಟು ಆಗಿದೆ. ಆದರೆ ಜಾಗತಿಕವಾಗಿ ಭಾರತ ಇನ್ನೂ ಹಿಂದೆ ಇದೆ. ಆದರೂ ಭಾರತವು ಜಗತ್ತಿನ ಅತಿ ದೊಡ್ಡ ಎರಡನೆಯ ಮೊಬಾಯಿಲ್ ಮಾರುಕಟ್ಟೆ ಆಗಿ ಬದಲಾಗಿದೆ. ಅದಕ್ಕೆ ಕಾರಣ ಇಲ್ಲಿನ ಕೋಟಿ ಕೋಟಿ ಏರುಮುಖ ಜನಸಂಖ್ಯೆ.

ಇಂದು ಬುದ್ಧ ಇದ್ದು ಮೊಬೈಲ್ ಇಲ್ಲದ ಮನೆಯ ಸಾಸಿವೆ ತಾ ಎಂದು ಹೇಳಿದ್ದರೆ, ಕಿಸಾಗೋತಮಿಯು ಹುಡುಕಲು ಹೋಗುತ್ತಿರಲಿಲ್ಲ. ತಮಾಷೆ ಮಾಡುವಿರಾ ಸ್ವಾಮಿ, ಮೊಬೈಲ್ ಇಲ್ಲದ ಮನೆಯೂ ಇರುವುದೇ ಗುರು ಎಂದು ಕೇಳುತ್ತಿದ್ದಳು. ಯಾವುದೇ ಸಂಪರ್ಕ ಸಾಧನಗಳು ಇಲ್ಲದಿದ್ದರೂ ನಮ್ಮ ಪುರಾಣ, ಜನಪದಗಳು ಕ್ಷಿಪ್ರ ಸಂಪರ್ಕದ ಕತೆಗಳನ್ನು ಹೊಂದಿವೆ. ದ್ರೌಪದಿಯು ಕೃಷ್ಣಾ ಎಂದ ಕೂಡಲೇ ಸಾವಿರಾರು ಸೀರೆ ಮಿಲ್‍ನಿಂದ ಹೊರಬಂದಂತೆ ಬಂದು ಸುತ್ತಿಕೊಳ್ಳುತ್ತಿತ್ತು. ನಾರದ ಎಂಬ ಮಾಹಿತಿದಾರ ಎಲ್ಲೆಲ್ಲೋ ಈಗಿನ ಪತ್ರಕರ್ತರಂತೆ ದಿಢೀರ್ ಕಾಣಿಸಿಕೊಳ್ಳುತ್ತಿದ್ದ. ಕೆಲವು ಭಕ್ತರು ಕೂಗಿದ್ದು ಕೂಡಲೆ ದೇವರಿಗೆ ಕೇಳಿಸುತ್ತಿತ್ತು. ಪ್ರವಾದಿ ಏಸು ಕ್ರಿಸ್ತ, ಪ್ರವಾದಿ ಮುಹಮ್ಮದ್ ಮೊದಲಾದವರು ಭಕ್ತರಿಗೆ ಕೂಡಲೆ ಪರಿಹಾರ ಒದಗಿಸಿದ್ದು ಸಹ ಇವೆ. ತಪಸ್ಸು ಕೂತಾಗ ಮಾತ್ರ ಸುದ್ದಿ ಸ್ವಲ್ಪ ನಿಧಾನ ಹೋಗುತ್ತಿತ್ತು. ದೇವರು ಬಳಿಕ ಬಂದು ಭಕ್ತಾ ನಿನಗೇನು ಬೇಕು ಎಂದು ಕೇಳುತ್ತಿದ್ದರು. ಜನಪದದಲ್ಲೂ ಚಕಾ ಚಕ್ ಸಂಪರ್ಕದ ಕತೆ ಸಾವಿರಾರು.

ಮರದ ದಿಮ್ಮಿಯ ಎರಡು ಕಡೆ ಮಕ್ಕಳು ಕಿವಿಗೊಟ್ಟು ಶಬ್ದ ಆಲಿಸಿದ್ದು ನೋಡಿ ವೈದ್ಯಲೋಕ ಸ್ಟೆತಾಸ್ಕೋಪ್ ಕಂಡುಕೊಂಡಿತು. ಹಿಂದೆ ನದಿ ದಡದಲ್ಲಿ ಆ ಕಡೆ ಇದ್ದ ದೋಣಿ ಈ ಕಡೆ ಬರುವಂತೆ ಮಾಡಲು, ಮುಂಜಾನೆ ಒಟ್ಟಿಗೆ ಕೆಲಸಕ್ಕೆ ಹೋಗಲು ತುಳುವರು ಕೂ ಎಂದು ಕೂಪಾಡು ಹಾಕುತ್ತಿದ್ದರು. ಮಿಲ್ಲುಗಳು ಇದನ್ನು ಸೈರನ್ ಮಾಡಿಕೊಂಡವು. ಅದಕ್ಕೂ ಮೊದಲು ಇಗರ್ಜಿಗಳ ಗಂಟೆಗಳು ನಿಶ್ಚಿತ ಸಮಯಕ್ಕೆ ಬಾರಿಸಿ ಊರವರಿಗೆ ಸಮಯ ತಿಳಿಸುತ್ತಿದ್ದವು. ಶಾಲೆಯ ಗಂಟೆಗಳು ಮಕ್ಕಳಿಗೆ ಓಡಿ ಬಾ, ಓಡಿ ಹೋಗು ಎನ್ನುತ್ತಿದ್ದವು. ತೆಂಗಿನ ಚಿಪ್ಪು ಇಲ್ಲವೇ ಸಿಗರೆಟ್ ಬರಿದು ಪ್ಯಾಕ್ ಎರಡರ ನಡುವೆ ದಾರ ಕಟ್ಟಿ ಫೆÇೀನಾಟ ಆಡುತ್ತಿದ್ದರು ಆ ಕಾಲದ ಮಕ್ಕಳು. ಮೊಬಾಯಿಲಲ್ಲಿ ಕಳೆದು ಹೋಗುವವರು ಈ ಕಾಲದ ಮಕ್ಕಳು.

ಪಿಲಿಫ್ ರೆಯೀಸ್ 1861ರಲ್ಲಿ ಮೊದಲ ಟೆಲಿಫೋನ್ ಮಾದರಿ ತಯಾರಿಸಿದ. ಆದರೆ 1876ರಲ್ಲಿ ಅಲೆಗ್ಸಾಂಡರ್ ಗ್ರಹಾಂ ಬೆಲ್ ಅಮೆರಿಕದಲ್ಲಿ ಟೆಲಿಫೋನ್ ಹಕ್ಕುಸ್ವಾಮ್ಯ ಪಡೆದ. ಅರ್ಧ ಶತಮಾನದ ಹಿಂದೆ ಯಾರಿಗಾದರೂ ಯಾವ ಊರಿಗಾದರೂ ಫೋನ್ ಮಾಡಲು ಅಂಚೆ ಮತ್ತು ತಂತಿ ಕಚೇರಿಗೆ ಹೋಗಿ ಬುಕ್ ಮಾಡಿ ದಿನಗಟ್ಟಲೆ ಕಾಯಬೇಕಿತ್ತು. ರಾಜೀವ್ ಗಾಂಧಿಯವರು ಪ್ರಧಾನಿ ಇದ್ದಾಗ ಭಾರತದಲ್ಲಿ ಸ್ಯಾಂ ಪಿತ್ರೋಡಾರ ಮೂಲಕ ಎಲ್ಲೆಂದರಲ್ಲಿ ಫೋನ್ ಮಾಡಲು ಸಾಧ್ಯ ಇರುವ ಸಂಪರ್ಕ ಕ್ರಾಂತಿ ಭಾರತದಲ್ಲಿ ತಲೆಯೆತ್ತಿತು. ಕಂಪ್ಯೂಟರ್ ಕ್ರಾಂತಿಗೂ ತೆರೆದುಕೊಂಡಿತು. ಮಧ್ಯೆ ಪೇಜರ್ ಬಂತು. ಮೊಬಾಯಿಲ್ ದಾಳಿಯಿಂದ ಪೇಜರ್ ಕಾಯಿನ್ ಫೋನ್ ಬೂತುಗಳೆಲ್ಲ ಇತಿಹಾಸದ ಹೊಟ್ಟೆ ಸೇರಿದವು.

1992ರ ನವೆಂಬರ್ 23ರಂದು ಲಾಸ್‍ವೇಗಾಸ್‍ನಲ್ಲಿ ಸೈಮನ್ ಪರ್ಸನಲ್ ಕಮ್ಯೂನಿಕೇಟರ್ ಎಂಬ ಆ್ಯಂಗ್ಲರ್ ಮೊಬೈಲ್ ಮೊದಲು ಬಿಡುಗಡೆ ಆಯಿತು. ಅದು ಬ್ಲ್ಯಾಕ್ ಬೆರ್ರಿ ಎಂದು ಮಾರುಕಟ್ಟೆ ಹಿಡಿಯಿತು. 1976ರಲ್ಲಿ ಯುಎಸ್‍ಎಯ ಸಿಲಿಕಾನ್ ವ್ಯಾಲಿ ಕ್ಯಾಲಿಫೋರ್ನಿಯಾದಲ್ಲಿ ಆ್ಯಪಲ್ ಇನ್ಕ್ ಕಂಪ್ಯೂಟರ್ ಕಂಪೆನಿ ಆರಂಭವಾಗಿತ್ತು. ಅದು ಆ್ಯಪಲ್ ಮೊಬೈಲ್ ತಯಾರಿಸಿದ ಮೇಲೆ ಬ್ಲ್ಯಾಕ್ ಬೆರ್ರಿ ಬಿದ್ದು ಹೋಯಿತು. 2010ರಲ್ಲಿ ಭದ್ರತಾ ವೈಫಲ್ಯದ ಕಾರಣಕ್ಕೆ ಬ್ಲ್ಯಾಕ್ ಬೆರ್ರಿಯನ್ನು ಭಾರತದಲ್ಲಿ ನಿಷೇಧಿಸಲಾಯಿತು. ಹಾಗಾಗಿ ಭಾರತದ ಯುವ ಜನಾಂಗಕ್ಕೆ ಅದು ತಿಳಿಯದು. ಆದರೆ ಮುಂದೆ ಚೀನಾದ್ದು ಜಾಗತಿಕ ಮೊಬೈಲ್ ವಿಜಯ. ಚೀನಾದ ಹೂವೇ, ಕ್ಸಿಯೋಮಿ, ಒಫೋ, ವಿವೋ ಮೊದಲಾದ ಸ್ಮಾರ್ಟ್ ಫೋನ್ಗಳು ಜಾಗತಿಕ ಬ್ರಾಂಡ್ ಆಗಿವೆ. ಅವುಗಳ ಹೊಡೆತ ಎಷ್ಟಿದೆ ಎಂದರೆ ಜಾಗತಿಕ ಮೊಬೈಲ್ ರಫ್ತಿನಲ್ಲಿ 14 ಶೇಕಡಾ ಇದ್ದ ಜಪಾನ್ ಮೊಬೈಲ್ ರಫ್ತು 4 ಶೇಕಡಾಕ್ಕೆ ಇಳಿದಿದೆ. ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲೂ ಇದೆ. 2002ರ ಸುತ್ತಿನಲ್ಲಿ ಕಾಂಗ್ರೆಸ್ ಸರಕಾರ ಬೆಂಗಳೂರಿನ ಸಿಲಿಕಾನ್ ವ್ಯಾಲಿ ಅರಳಿಸಿತು.

ಮೊಬಾಯಿಲ್‍ಗಳು ಮಿನಿ ಕಂಪ್ಯೂಟರುಗಳೇ ಆಗಿವೆ ಮೊಬೈಲ್ ಬಳಕೆಯಲ್ಲಿ ಜನಸಂಖ್ಯೆಯ ಪ್ರಕಾರ ಚೀನಾ, ಭಾರತ ಮೊದಲ ಎರಡು ಸ್ಥಾನಗಳಲ್ಲಿ ಇವೆ. ಚೀನಾ ತಯಾರಕೆಯಲ್ಲೂ ನಂಬರ್ ಒನ್. ಜಗತ್ತಿಗೆ ಅತಿ ಹೆಚ್ಚು ಸ್ಮಾರ್ಟ್ ಫೋನ್ ರಫ್ತು ಮಾಡುವ ಮೊದಲ ಹತ್ತು ದೇಶಗಳಲ್ಲಿ ಭಾರತ ಇಲ್ಲ. ಆದರೆ ಚೀನಾ ಮೊದಲ ಸ್ಥಾನದಲ್ಲಿ ಇದೆ. ಜಾಗತಿಕ ರಫ್ತು ಪ್ರಮಾಣ ಕ್ರಮವಾಗಿ ಚೀನಾ 34%, ತೈವಾನ್ 11%, ತೆಂಕಣ ಕೊರಿಯಾ 7%, ವಿಯೆಟ್ನಾಂ ಮತ್ತು ಮಲೇಶಿಯಾ 5%, ಜಪಾನ್, ಯುಎಸ್‍ಎ, ಜರ್ಮನಿಗಳು ತಲಾ 4%, ಮೆಕ್ಸಿಕೊ, ತಾಯ್‍ಲ್ಯಾಂಡ್‍ಗಳು ತಲಾ 3% ಜಾಗತಿಕ ರಫ್ತು ಮಾರುಕಟ್ಟೆ ಹಿಡಿದಿವೆ. ಚೀನಾವು ಪ್ರತಿ ವರುಷ ಭಾರತದ ನಾಲ್ಕು ಪಟ್ಟು ಮೊಬೈಲ್ ತಯಾರಿಸುತ್ತದೆ. ಆ ಪ್ರಮಾಣ ಜಗತ್ತಿನ 52.4%ಕ್ಕೆ ಸಮ ಎನ್ನಲಾಗಿದೆ. 2022ರಲ್ಲಿ ಚೀನಾ 138.8 ನೂರ್ಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್ ಫೋನ್ ರಫ್ತು ಮಾಡಿದೆ.

ಮೂಡಣ ಏಶಿಯಾದಲ್ಲಿ ಮೊಬಾಯಿಲ್ ಜೋಡಣೆ, ತಯಾರಿಕೆ ಮನೆ ಉದ್ಯಮವಾಗಿ ಬೆಳೆದಿದೆ ಎನ್ನುವುದು ವಿಶೇಷ. ನಮ್ಮಲ್ಲಿ ನಾರಿಯರು ಬೀಡಿ ಕಟ್ಟಿ ಕಂಪೆನಿಗೆ ಮುಟ್ಟಿಸುವಂತೆ ಅದು ಬೆಳೆದಿದೆ. ಭಾರತದ ಮೊಬಾಯಿಲ್ ರಫ್ತಿನಲ್ಲಿ ಯುಎಇ 23.40%, ಯುಎಸ್‍ಎ 19.70%, ನೆದರ್ಲ್ಯಾಂಡ್ಸ್ 9.73%, ಬ್ರಿಟನ್ 7.77%, ಇಟೆಲಿ 6.54%, ಆಸ್ಟ್ರಿಯಾ 6.43%, ಜೆಕ್ ಗಣರಾಜ್ಯ 5.97%, ಜರ್ಮನಿ 4.18%, ಸೌದಿ ಅರೇಬಿಯಾ 2.73%, ಫ್ರಾನ್ಸ್ 2.26% ಇತರೆ 4.99% ಹೋಗುತ್ತಿದೆ. ಮೇಡ್ ಇನ್ ಇಂಡಿಯಾ ಹೆಸರಿನಲ್ಲಿ ಇವು ಇಲ್ಲಿ ತಯಾರಾಗುತ್ತಿವೆ. ಕಂಪೆನಿಗಳು ಬಹುತೇಕ ವಿದೇಶೀ ಬಂಡವಾಳ ಹೂಡಿಕೆಯವು. ಭಾರತದ ಮೊದಲ ಸ್ಮಾರ್ಟ್ ಫೆÇೀನ್ 2008ರಲ್ಲಿ ಬಂದ ನೋಕಿಯಾ.

2003ರಲ್ಲಿ ಮೊದಲ ಆಂಡ್ರಾಯ್ಡ್, 2007ರಲ್ಲಿ ಆಪಲ್‍ನವರಿಂದ ಮೊದಲ ಐಫೋನ್ ಬಂತು. ವಿದ್ಯುನ್ಮಾನ ಕ್ಷೇತ್ರ ನಿತ್ಯ ಮೇಲೇರಿಕೆ ಕಾಣುತ್ತಿದೆ. ಹಾಗಾಗಿ ನಿತ್ಯ ಕಲಿ, ನಿತ್ಯ ಮುಳುಗು ಎರಡೂ ಮೊಬೈಲ್‍ನಿಂದ ಸಾಧ್ಯ. ಅಂತರಬಲೆ ದಾರಿಯಾಗಿ ಬಂದು ನಾನಾ ವಂಚನೆ ಮಾಡುವವರು ಇದ್ದಾರೆ. ಮೆಲ್ಲ ಮೆಲ್ಲನೆ ಬಂದನೆ ಮೊಬೈಲೊಳಗಿಂದ, ಮೆಲ್ಲ ಮೆಲ್ಲನೆ ಬಂದು ಫ್ಲೈಯಿಂಗ್ ಕಿಸ್ಸು ಕೊಟ್ಟು, ನಿಲ್ಲದೆ ಸ್ವಿಚ್ ಆಫ್ ಆದ ಕಳ್ಳನ ಕಿವಿ ಹಿಂಡುವವರು ಯಾರು?

✍ ಬರಹ: ಪೇರೂರು ಜಾರು

.

Related Posts

Leave a Reply

Your email address will not be published.