ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ.ಗೆ ಕುಂದೇಶ್ವರ ಸಮ್ಮಾನ್

ಮಂಗಳೂರು: ಕಾರ್ಕಳ ಹಿರ್ಗಾನ ಕ್ಷೇತ್ರದಿಂದ ಪ್ರತಿ ವರ್ಷ ನೀಡಲಾಗುವ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಬಹುಮುಖ ಪ್ರತಿಭೆಯ ಯಕ್ಷ ಕಲಾವಿದ ರಂಗದ ಬಿರ್ಸೆ ಪ್ರಶಾಂತ್ ಸಿ.ಕೆ. ಆಯ್ಕೆಯಾಗಿದ್ದಾರೆ. ಜ.21ರಂದು ನಡೆಯುವ ಶ್ರೀ ಕುಂದೇಶ್ವರ ಜಾತ್ರೆಯ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯಕ್ಷಗಾನ ವೃತ್ತಿಪರ ಮೇಳದಲ್ಲಿ ಹಾಸ್ಯ ಕಲಾವಿದರಾಗಿರುವ ಪ್ರಶಾಂತ್ ಸಿ.ಕೆ. ಅವರು, ಅನೇಕ ಯಕ್ಷಗಾನ ಪ್ರಸಂಗ, ತುಳು ನಾಟಕಗಳನ್ನು ರಚಿಸಿದ್ದಾರೆ. ಸಿನಿಮಾ ರಂಗದಲ್ಲಿ ದಾಖಲೆ ನಿರ್ಮಿಸಿದ ಕಾಂತಾರದಲ್ಲಿ ನಟಿಸಿದ್ದು, ಯಕ್ಷಗಾನ ಆಧಾರಿತ ವದನ ಕಲಾತ್ಮಕ ಚಿತ್ರದಲ್ಲಿ ಪ್ರಧಾನ ಭೂಮಿಕೆಯಲ್ಲಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ಪಿಂಗಾರ ಸಿನಿಮಾದಲ್ಲಿ ದೈವಪಾತ್ರಧಾರಿಯಾಗಿ ಅಭಿನಯಿಸಿದ್ದು, ಟಿವಿ ವಾಹಿನಿಗಳಲ್ಲಿ ಹಾಸ್ಯ ಸರಣಿಗಳು, ಯಕ್ಷ ರಸ ಮೊದಲಾದ ಹಾಸ್ಯ ಯಕ್ಷಗಾನ ಪ್ರಸಂಗಗಳನ್ನು ನಿರ್ದೇಶಿಸಿ ಅಭಿನಯಿಸುತ್ತಿದ್ದಾರೆ. ವೃತ್ತಿಪರ ಮೇಳಗಳಲ್ಲಿದ್ದು ಅನೇಕ ತಿರುಗಾಟ ಮಾಡಿರುವ ಸಿ.ಕೆ. ಅವರು ತುಳು ರಂಗಭೂಮಿಯ ಅನರ್ಘ್ಯ ರತ್ನ.

ಅವರ ಬಹುಮುಖ ಪ್ರತಿಭೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ. ಶನಿವಾರ ರಾತ್ರಿ 7 ಗಂಟೆಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಹಿರಣ್ಯಾಕ್ಷ ಹಿರಣ್ಯ ಕಶಿಪು ತುಳು ಮತ್ತು ಕನ್ನಡ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ. ದೈವಮಹಿಮೆ ಸಾರುವ ಮಾಯದಪ್ಪೆ ಮಂತ್ರದೇವತೆ ತುಳು ನಾಟಕ ನಡೆಯಲಿದೆ.

Related Posts

Leave a Reply

Your email address will not be published.