ಪಂಪ್‌ವೆಲ್ ಹಣದ ಬಂಡಲ್ ಪ್ರಕರಣ : ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿ

ಪಂಪ್‌ವೆಲ್ ಬಳಿ ಕೆಲವು ದಿನಗಳ ಹಿಂದೆ ಮೆಕ್ಯಾನಿಕ್ ಶಿವರಾಜ್ ಎಂಬವರಿಗೆ ಬಿದ್ದು ಸಿಕ್ಕಿದ್ದ ಹಣದ ಬಂಡಲ್‌ಗೆ ಸಂಬಂಧಿಸಿ ಮತ್ತೆ 2,99,500 ರೂ.ಗಳು ಪೊಲೀಸರ ವಶವಾಗಿದೆ.
ಹಣದ ಬಂಡಲ್‌ಗಳ ಪ್ರಕರಣದ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಈ ಅನಾಮಧೇಯ ಹಣದ ಕಟ್ಟುಗಳ ವಾರಿಸುದಾರರು ಇದ್ದಲ್ಲಿ, ಸಂಬಂಧಪಟ್ಟ ಠಾಣೆಗೆ ಸೂಕ್ತ ಮಾಹಿತಿಯೊಂದಿಗೆ ಭೇಟಿ ನೀಡಿದರೆ ವಾಪಾಸು ನೀಡುವ ಪ್ರಕ್ರಿಯೆ ನಡೆಯಲಿದೆ ಎಂದರು.
ನ. 26ರಂದು ಶಿವರಾಜ್ ಎಂಬ ವ್ಯಕ್ತಿಗೆ ಬೆಳಗ್ಗಿನ ಹೊತ್ತು ಪಂಪ್‌ವೆಲ್ ಬಳಿ ಬಾಕ್ಸ್ ಹಾಗೂ ಪ್ಲಾಸ್ಟಿಕ್ ಚೀಲದಲ್ಲಿ ಹಣದ ಬಂಡಲ್‌ಗಳು ಸಿಕ್ಕಿತ್ತು. ಅದರಲ್ಲಿ ಎಷ್ಟು ಹಣ ಇತ್ತೆಂಬ ಬಗ್ಗೆ ಸ್ಪಷ್ಟವಾಗಿ ಆ ವ್ಯಕ್ತಿ ಹೇಳುತ್ತಿಲ್ಲ. ಮಾಧ್ಯಮದಲ್ಲಿ 10 ಲಕ್ಷ ರೂ. ಹಣದ ಕವರ್ ಸಿಕ್ಕಿರುವುದಾಗಿ ವರದಿಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಹಣ ದೊರೆತಿರುವ ಪ್ರದೇಶದ ಸಿಸಿ ಕ್ಯಾಮರಾ ಕೂಡಾ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಶಿವರಾಜ್ ಹಣದ ಕಟ್ಟು ಸಿಕ್ಕಿದ ತನ್ನ ಜತೆ ಮದ್ಯಪಾನ ಮಾಡುವ ವ್ಯಕ್ತಿ ತುಕರಾಂ ಎಂಬವರಿಗೆ 500 ರೂ.ಗಳ ಆರು ಕಟ್ಟು ಹಣವನ್ನು ನೀಡಿದ್ದಾಗಿ ಹೇಳಿಕೊಂಡಿದ್ದ. ಈ ಬಗ್ಗೆ ಮಾದ್ಯಮದಲ್ಲಿ ಮಾಹಿತಿ ಬಂದ ಹಿನ್ನೆಲೆಯಲ್ಲಿ ತುಕರಾಂ ಎಂಬ ವ್ಯಕ್ತಿ 2,99,500 ರೂ.ಗಳನ್ನು ಠಾಣೆಗೆ ತಂದು ನೀಡಿದ್ದಾನೆ. ಶಿವರಾಜ್‌ನಿಂದ ಹಣದ ಕಟ್ಟುಗಳನ್ನು ಪಡೆದಿದ್ದ ತುಕಾರಾಂ ಒಂದು ಕಟ್ಟಿನಿಂದ 500 ರೂ. ತೆಗೆದು ಮದ್ಯಪಾನ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಈ ಬಗ್ಗೆ ಶಿವರಾಜ್ “ಹಣದ ಕಟ್ಟು ಹಿಡಿದುಕೊಂಡು ಮಲಗಿದ್ದೆ. ತನ್ನದಲ್ಲಿದ್ದ ಹಣದ ಒಂದು ಕಟ್ಟಿನಿಂದ ಒಂದು ನೋಟು ತೆಗೆದು ಮದ್ಯಪಾನ ಮಾಡಿ ಮಲಗಿದ್ದೆ. ಬಳಿಕ ಎಚ್ಚರವಾದಾಗ ಒಂದು ನೋಟು ತೆಗೆದ ಕಟ್ಟು ಬಿಟ್ಟು ಬೇರೆ ಯಾವುದೇ ಹಣ ಇರಲಿಲ್ಲ” ಎನ್ನುತ್ತಾನೆ. ಒಟ್ಟು ಇದೀಗ ತುಕರಾಂ ತಂದು ಕೊಟ್ಟ 2,99,500 ಮತ್ತು 49,000 ರೂ. ಪೊಲೀಸರ ವಶದಲ್ಲಿದೆ. ಅದನ್ನು ಸೂಕ್ತ ದಾಖಲೀಕರಣದೊಂದಿಗೆ ಪೊಲೀಸರ ವಶದಲ್ಲಿರಿಸಲಾಗಿದೆ. ವಾರಿಸುದಾರರು ಬಾರದಿದ್ದಲ್ಲಿ ಮುಂದಿನ ಕ್ರಮ ವಹಿಸಲಾಗುವುದು. ಈಗಾಗಲೇ ಅದರಲ್ಲಿ 10 ಲಕ್ಷ ಇತ್ತೆಂದು ಹೇಳಲಾಗಿರುವಂತೆ, ಯಾರಾದರೂ ಶಿವರಾಜ್ ಬಳಿ ಇದ್ದ ಹಣವನ್ನು ಕೊಂಡು ಹೋಗಿದ್ದಲ್ಲಿ ಅದನ್ನು ಠಾಣೆಗೆ ಒಪ್ಪಿಸಿದರೆ ಅವರ ಮೇಲೆ ಯಾವುದೇ ರೀತಿಯ ಪ್ರಕರಣ ದಾಖಲಿಸಲಾಗುವುದಿಲ್ಲ. ಒಂದು ವೇಳೆ ತನಿಖೆಯ ವೇಳೆ, ಸಿಸಿ ಕ್ಯಾಮರಾ ಫೂಟೇಜ್ ತಪಾಸಣೆಯ ಸಂದರ್ಭ ಯಾರಾದರೂ ಶಿವರಾಜ್ ಬಳಿ ಇದ್ದ ಹಣ ಕದ್ದುಕೊಂಡು ಹೋಗಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಸುಲಿಗೆ, ದರೋಡೆ ಪ್ರಕರಣ ದಾಖಲಾಗುತ್ತದೆ. ಉಳಿದಂತೆ ಶಿವರಾಜ್ ಅಥವಾ ತುಕರಾಂ ಮೇಲೆ ಯಾವುದೇ ರೀತಿಯ ಅಪರಾಧ ಪ್ರಕರಣ ದಾಖಲಿಸಲಾಗಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪೊಲೀಸ್ ಆಯಕ್ತರು ವಿವರ ನೀಡಿದರು.
ಪ್ರಕರಣ ನಡೆದು ಹಲವು ದಿನಗಳಾದರೂ ಹಣ ಯಾರಿಗೆ ಸೇರಿದ್ದು ಎಂಬ ಬಗ್ಗೆ ಪರಿಶೀಲನೆಗೆ ಸಂಬಂಧಿಸಿ ಸಿಸಿ ಕ್ಯಾಮರಾ ಪರಿಶೀಲನೆ ವಿಳಂಬ ಯಾಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ, ಹಣ ಸಿಕ್ಕಿರುವುದು ಗೊತ್ತಾಗಿರುವ ದಿನ ಠಾಣಾಧಿಕಾರಿ ವ್ಯಕ್ತಿಯಿಂದ ಹೇಳಿಕೆ ಪಡೆದು ಸ್ಥಳದಲ್ಲೇ ಹಣವನ್ನು ಲೆಕ್ಕ ಮಾಡಿ ಶಿವರಾಜ್ ಬಳಿ 49500 ರೂ. ಇದ್ದಿದ್ದನ್ನು ದಾಖಲಿಸಿಕೊಂಡಿದ್ದರು. ಈ ಬಗ್ಗೆ ಯಾರೂ ವಾರಿಸುದಾರರು ಬಂದಿಲ್ಲ. ಇದೀಗ ಹಣ 10 ಲಕ್ಷ ಇತ್ತೆಂಬ ಮಾಹಿತಿ ಮಾಧ್ಯಮದಲ್ಲಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಈಗಾಗಲೇ ತುಕರಾಂ ಎಂಬ ವ್ಯಕ್ತಿಯೂ ತನ್ನದಲ್ಲಿದ್ದ ಹಣವನ್ನು ನೀಡಿದ್ದಾನೆ. ಹಾಗಾಗಿ ಉಳಿದಂತೆ ಸಿಸಿ ಕ್ಯಾಮರಾ ಸೇರಿದಂತೆ ಸೂಕ್ತ ರೀತಿಯ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗಿನ ವಿಚಾರಣೆಯಲ್ಲಿ ಸಿಬ್ಬಂದಿ, ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದಲ್ಲಿಯೂ ಶಿಸ್ತಿನ ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು. ಡಿಸಿಪಿ ದಿನೇಶ್ ಕುಮಾರ್, ಎಸಿಪಿ ದಿನಕರ ಶೆಟ್ಟಿ ಉಪಸ್ಥಿತರಿದ್ದರು.
