ಕರ್ನಾಟಕವನ್ನು ಸುರಕ್ಷಿತವಾಗಿಡಲು ಮೋದಿ ಮತ್ತು ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯ : ಅಮಿತ್ ಶಾ

ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರೈತರ ಮತ್ತು ರಾಷ್ಟ್ರದ ಸಮಗ್ರ ಅಭಿವೃದ್ಧಿಯ ಧ್ಯೇಯೋದ್ದೇಶವನ್ನು ಒಳಗೊಂಡಿರುವ ವಿವಿಧ ಆಯಾಮಗಳನ್ನು ಹೊಂದಿರುವ ಏಕರೂಪಿ ನಿಯಮಾಧಾರಿತ ಕೃಷಿ ಪತ್ತಿನ ಸಹಕಾರಿ ಸಂಘ(ಪಿಎಸಿಎಸ್)ಗಳನ್ನು ದೇಶದ ಪ್ರತೀ ಗ್ರಾಮ ಪಂಚಾಯತ್‌ಗಳಲ್ಲಿ ಮುಂದಿನ ಮೂರು ವರ್ಷಗಳೊಳಗೆ ಸ್ಥಾಪಿಸಲಾಗುವುದು ಎಂದು ಕೇಂದ್ರದ ಪ್ರಥಮ ಸಹಕಾರಿ ಮತ್ತು ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದರು.

ಅವರು ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕ್ಯಾಂಪೊ?ಕ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರಂಭಗೊಳ್ಳಲಿರುವ ಈ ಪಿಎಸಿಎಸ್‌ಗಳಲ್ಲಿ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ದೊರಕುವಂತಹ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗುವುದು. ಇವುಗಳು ಕೇಂದ್ರೀಕೃತ ವ್ಯವಸ್ಥೆಯಡಿ ಕಾರ್ಯಾಚರಿಸಲಿದೆ ಎಂದು ತಿಳಿಸಿದರು.

ಸುರಂಗ ಮಾರ್ಗ

ದಕ್ಷಿಣ ಕನ್ನಡ ಜಿಲ್ಲೆ ಜಲ, ವಾಯು, ರಸ್ತೆ ಸಂಪರ್ಕ ಹೊಂದಿರುವಂತಹ ರಾಜ್ಯದ ಏಕೈಕ ಪಟ್ಟಣವಾಗಿದ್ದು, ವಾಣಿಜ್ಯ ವ್ಯವಹಾರಗಳಿಗೆ ಇದು ಬಹಳಷ್ಟು ಸಹಕಾರಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಅಡಿಕೆ, ಕಾಳುಮೆಣಸು, ಭತ್ತ, ರಬ್ಬರ್ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಲ್ಲಿನ ಅಡಿಕೆಗೂ ಗುಜರಾತಿಗೂ ನಿಕಟ ಬಾಂಧವ್ಯವಿದೆ. ಈ ನಿಟ್ಟಿನಲ್ಲಿ ವ್ಯಾಪಾರ ವ್ಯವಹಾರಗಳಿಗೆ ಅನುಕೂಲಕರವಾಗಿಸುವ ನಿಟ್ಟಿನಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ಸುಗಮ ಸಂಚಾರಕ್ಕಾಗಿ ಶಿರಾಡಿ ಘಾಟ್ ಪ್ರದೇಶದಲ್ಲಿ ಸುರಂಗ ಮಾರ್ಗದ ಯೋಜನೆ ಹಾಕಿಕೊಳ್ಳಲಾಗಿದೆ. ರೂ.1ಸಾವಿರ ಕೋಟಿ ವೆಚ್ಚದಲ್ಲಿ ಮಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ನಾರಾಯಣ ಗುರು ವಿದ್ಯಾಲಯ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದರು.

ದೀನ್ ದಯಾಳ್ ಪ್ರೇರಣೆ

ಕ್ಯಾಂಪ್ಕೊದ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರ ದೊರಕಿದಾಗ ನಾನು ಕಾರ್ಯಕ್ರಮಕ್ಕೆ ಹೋಗಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದೆ. ಆದರೆ, ಕ್ಯಾಂಪ್ಕೊ ಸಂಸ್ಥೆಯ ಸಾಧನೆ ನೋಡಿ ಕಾರ್ಯಕ್ರಮಕ್ಕೆ ಹೋಗಲೇಬೇಕೆಂದು ನಿಶ್ಚಯಿಸಿದೆ. ಇಂದು ದೀನ್ ದಯಾಳ್ ಉಪಾಧ್ಯಾಯರ ಪುಣ್ಯತಿಥಿಯೂ ಹೌದು. ಇವರ ಅವರ ವಿಚಾರಧಾರೆಗಳು ಸರಕಾರದ ಅಭಿವೃದ್ಧಿ-ಸಾಧನೆಗಳಿಗೆ ಪ್ರೇರಣೆಯಾಗಿದೆ. ಜನರಿಗೆ ಮೂಲಭೂತ ಸೌಕರ್ಯಗಳು, ರೂ.5ಲಕ್ಷದವರೆಗೆ ಆರೋಗ್ಯ ವಿಮೆ, ಉಚಿತ ಅಕ್ಕಿ ಇದೆಲ್ಲವೂ ದೀನ್ ದಯಾಳ್ ಅಂತ್ಯೋದಯ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವಂತಹ ಅಭಿವೃದ್ಧಿ ಯೋಜನೆಗಳಾಗಿವೆ. ಈ ನಿಟ್ಟಿನಲ್ಲಿ ಅವರಿಗೆ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಪ್ರಾಮಾಣಿಕತೆಯ ಪ್ರತಿಫಲ

ಯಾವುದೇ ಒಂದು ಸಹಕಾರಿ ಸಂಸ್ಥೆ 50 ವರ್ಷಗಳ ಕಾಲ ಅಭಿವೃದ್ಧಿ ಪಥದಲ್ಲಿ ಸಾಗಬೇಕೆಂದರೆ ಅದರಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪ್ರಾಮಾಣಿಕತೆಯನ್ನು ಎತ್ತಿ ತೋರಿಸುತ್ತದೆ. ವಾರಣಾಶಿ ಸುಬ್ರಾಯ ಭಟ್ಟರಿಂದ ಸ್ಥಾಪಿತವಾದ ಕ್ಯಾಂಪ್ಕೊ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಆರಂಭದಲ್ಲಿ ೩ ಸಾವಿರ ಸದಸ್ಯರೊಂದಿಗೆ ಆರಂಭಗೊಂಡ ಕ್ಯಾಂಪ್ಕೊ ಇಂದು 1.38 ಲಕ್ಷ ಸದಸ್ಯರೊಂದಿಗೆ ಬೆಳೆದು ನಿಂತಿದೆ. ಮೋದಿಯವರು ಸಹಕಾರಿ ಸಚಿವಾಲಯವನ್ನು ಸ್ಥಾಪಿಸಿ ರೈತರ ಹಾಗೂ ಗ್ರಾಮದ ಸೇವೆಯನ್ನು ಮಾಡುವಂತಹ ದಾರಿಯನ್ನು ಕಂಡುಕೊಂಡಿದ್ದಾರೆ ಎಂದು ಅಮಿತ್ ಶಾ ತಿಳಿಸಿದರು.

ನಿಮ್ಮ ಮತ ಯಾರಿಗೆ?

ಟಿಪ್ಪುವನ್ನು ನಂಬುವ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಮತ ನೀಡುತ್ತೀರಾ ಅಥವಾ ಶೌರ್ಯಕ್ಕೆ ಹೆಸರಾಗಿರುವ ರಾಣಿ ಅಬ್ಬಕ್ಕ ಅವರನ್ನು ನಂಬುವ ಬಿಜೆಪಿಗೆ ಓಟು ಹಾಕಬೇಕೋ ಎಂಬುದನ್ನು ನೀವೇ ತೀರ್ಮಾನಿಸಿ. ರಾಷ್ಟ್ರ ಭಕ್ತಿಯನ್ನು ಉದ್ದೀಪನಗೊಳಿಸುವ ಪಕ್ಷ ಮೋದಿ ನೇತೃತ್ವದ ಬಿಜೆಪಿಯಾದರೆ ಗಾಂಧಿ ಪರಿವಾರಕ್ಕೆ ಕರ್ನಾಟಕ ಒಂದು ಎಟಿಎಂ ಇದ್ದಂತೆ ಎಂದು ಅಮಿತ್ ಶಾ ವ್ಯಂಗ್ಯವಾಡಿದರು.

ಭ್ರಷ್ಟ ಕಾಂಗ್ರೆಸ್‌ನಿಂದ ಈ ದೇಶ ಹಾಳಾಗಿದೆ. ಆದರೆ, ಯಡಿಯೂರಪ್ಪನವರ ಆಡಳಿತದಿಂದ ಕರ್ನಾಟಕ ಅಭಿವೃದ್ಧಿ ಪಥದಲ್ಲಿದೆ. ಕಾಂಗ್ರೆಸ್ ಸರಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 17೦೦ ಮತಾಂಧರ ಮೇಲಿದ್ದ ಪ್ರಕರಣಗಳನ್ನು ಮುಚ್ಚಿ ಬಿಡುಗಡೆ ಮಾಡಿತ್ತು. ಆದರೆ, ಮೋದಿ ನೇತೃತ್ವದ ಕೇಂದ್ರ ಸರಕಾರ ಈ ಸಂಘಟನೆಯನ್ನೇ ಮಟ್ಟ ಹಾಕಿದರು. ಕರ್ನಾಟಕವನ್ನು ಸುರಕ್ಷಿತವಾಗಿಡಲು ಮೋದಿ ಮತ್ತು ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯ ಎಂದ ಅವರು, ಕಾಶ್ಮೀರದಲ್ಲಿ ೩೭೦ ವಿಧಿಯನ್ನು ರದ್ದುಗೊಳಿಸಿದಾಗ ಕಾಂಗ್ರೆಸ್, ಜೆಡಿಎಸ್ ವಿರೋಧವನ್ನು ವ್ಯಕ್ತಪಡಿಸಿದ್ದವು. ರಕ್ತದ ಓಕುಳಿ ಹರಿಯಬಹುದು ಎಂದು  ಹೇಳಿದ್ದರು. ಆದರೆ, ಯಾವುದೇ ರೀತಿ ತೊಂದರೆಯಾಗದಂತೆ ೩೭೦ನೇ ವಿಧಿಯನ್ನು ತೆಗೆದು ಹಾಕಲಾಯಿತು ಎಂದು ಅವರು ಹೇಳಿದರು.

ಅಡಿಕೆ ವಿಶೇಷ ಅನುದಾನ

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕರಾವಳಿ ಭಾಗದ ರೈತ ಬೆಳೆಯಾಗಿರುವ ಅಡಿಕೆ ಸಂಶೋಧನೆಗೆ ಈಗಾಗಲೇ ರೂ.10 ಕೋಟಿ ನೀಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಇದಕ್ಕಾಗಿ ವಿಶೇಷ ಅನುದಾನವನ್ನು ಒದಗಿಸಲಾಗುವುದು. ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಪರಿಹರಿಸಿ ಸುಮಾರು ಆದಿವಾಸಿಗಳಿಗೆ ಸೌಲಭ್ಯ ಒದಗಿಸಿಲಾಗಿದೆ. ಅದೇ ರೀತಿ ಕಾಣೆ, ಬಾಣೆ ಮತ್ತು ಕುಮ್ಕಿ ಸಮಸ್ಯೆಗಳಿಗೆ ಅತೀ ಶೀಘ್ರದಲ್ಲಿ ಪರಿಹಾರವನ್ನು ಕಂಡುಕೊಳ್ಳುತ್ತೇವೆ. ಇದಕ್ಕೆ ನಾವೇ ಪರಿಹಾರ ಒದಗಿಸುತ್ತೇವೆ ಎಂದು ಹೇಳಿದರು.

ಬಂಡವಾಳಶಾಹಿ ಮತ್ತು ಕಮ್ಯುನಿಸಂಗೆ ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿರುವ ಕ್ಯಾಂಪ್ಕೊ ಉತ್ತರವಾಗಿದೆ. ಕ್ಯಾಂಪ್ಕೊ ಸಂಸ್ಥೆ ಏಷ್ಯಾದಲ್ಲೇ ಅತೀ ಹೆಚ್ಚು ೨೬ ಸಾವಿರ ಮೆಟ್ರಿಕ್ ಟನ್ ಚಾಕೊಲೇಟ್ ಉತ್ಪಾದಿಸುವ ಮೂಲಕ ರೈತರ ಪಾಲಿಗೆ ತಾಯಿಯಾಗಿ ಮಾರ್ಗದರ್ಶನ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್‌ನಲ್ಲಿ ಹೆದ್ದಾರಿ ಅಭಿವೃದ್ಧಿ ಮತ್ತು ರೈಲ್ವೇ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ. ರೈಲ್ವೇ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯಕ್ಕೆ ರೂ.೭೫೦೦ ಕೋಟಿ ಒದಗಿಸಿರುವುದು ಅಭಿನಂದನೀಯ ಎಂದರು.

ಮೋದಿ-ಶಾಗೆ ಸರಿಸಾಟಿಯಿಲ್ಲ

ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡು ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಶಕ್ತಿಗೆ ಯಾರೂ ಸಟಿಸಾಟಿಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕ್ಯಾಂಪೊ?ಕೀ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ,ಇಂಧನ ಸಚಿವ ಸುನಿಲ್ ಕುಮಾರ್, ಗೃಹ ಸಚಿವ ಅರಗ ಜ್ಞಾನೇಂದ್ರ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಅಂಗಾರ ಎಸ್., ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ,ಕ್ಯಾಂಪೊ?ಕ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ಕೃಷ್ಣಕುಮಾರ್,ಕ್ಯಾಂಪೊ?ಕ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್, ಉಪಸ್ಥಿತರಿದ್ದರು.

Related Posts

Leave a Reply

Your email address will not be published.