ಮಣಿಪುರದ ಹಿಂಸಾಚಾರ ಖಂಡಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್‍ನಿಂದ ಪ್ರತಿಭಟನೆ
ಪುತ್ತೂರು: ಮಣಿಪುರ ರಾಜ್ಯದಲ್ಲಿ ಎರಡು ಜನಾಂಗಗಳ ಮಧ್ಯೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಪುತ್ತೂರು ಬ್ಲಾಕ್ ಕಾಂಗ್ರೆಸ್‍ನಿಂದ ಪುತ್ತೂರು ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆಯ ಬಳಿ ಮೊಂಬತ್ತಿ ಉರಿಸಿ, ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿ, ಮಣಿಪುರದ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮೆರುಗಿಗೆ ಕುಂದುಂಟಾಗಿದೆ. ಹಿರಿಯರ ದೂರದರ್ಶಿತದ ಚಿಂತನೆಗಳ ಮಣ್ಣು ಪಾಲಾಗಿದೆ. ಚುನಾವಣೆಯಲ್ಲಿ ಗೆಲ್ಲುವುದೇ ಪ್ರಜಾಪ್ರಭುತ್ವವಲ್ಲ. ಎಲ್ಲರ ಪ್ರಾಣ, ಮಾನ ರಕ್ಷಣೆ ಪ್ರಧಾನಿಯ ಕರ್ತವ್ಯ. ರಷ್ಯಾ-ಉಕ್ರೇನ್ ಯುದ್ದ ನಿಲ್ಲಿಸಲಾಗುವ ಪ್ರಧಾನಿಗೆ ಮಣಿಪುರದ ಗಲಭೆ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ, ಮಣಿಪುರದಲ್ಲಿ ಜನಾಂಗೀಯ ಧ್ವೇಷದಲ್ಲಿ ಗಲಭೆಗಳು ನಡೆಯುತ್ತಿದೆ. ಇದನ್ನು ತಡೆಯದ ಹುನ್ನಾರದ ವಿರುದ್ದ ಹೋರಾಟ ನಡೆಯುತ್ತಿದೆ. ಸಂತ್ರಸ್ಥರನ್ನು ವಿಚಾರಿಸಲು ಹೋದಾಗ ರಾಹುಲ್ ಗಾಂದಿಯನ್ನು ತಡೆದು ಹಿಂದಕ್ಕೆ ಕಳುಹಿಸಲಾಗಿದೆ. ಗೋದ್ರಾ ಮಾದರಿಯಲ್ಲಿಯೇ ಮಣಿಪುರದಲ್ಲಿಯೂ ನಡೆಯುತ್ತಿದೆ. ಉಡುಪಿಯ ವಿಚಾರದಲ್ಲಿ ಗುಲ್ಲೆಬ್ಬಿಸುವ ಮಹಿಳಾ ಆಯೋಗ, ಮಾನವ ಹಕ್ಕು ಮಣಿಪುರಕ್ಕೆ ಹೋಗುವುದಿಲ್ಲ. ಈ ಕೃತ್ಯವನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ. ಸುಮ್ಮನಿರುವ ಪ್ರಧಾನಿಗೆ ದೇವರು ಬುದ್ದಿಕಲಿಸಲಿದ್ದಾರೆ. ಆರ್‍ಎಸ್‍ಎಸ್ ದೇಶಕ್ಕೆ ಕ್ಯಾನ್ಸರ್ ಅದನ್ನು ಓಡಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೈ,,ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್,ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ,ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜ, ಜಿಲ್ಲಾ ಕಿಸಾನ್ ಘಟಕದ ರವೀಂದ್ರ ರೈ ನೆಕ್ಕಿಲು, ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಸೇರಿದಂತೆ ಹಲವು ಮಂದಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.