ಶ್ರೀ ಮಹಾಲಕ್ಷ್ಮಿ ದೇವಸ್ಥಾನ : ಉಚ್ಚಿಲ ದಸರಾ-2023 ಅದ್ಧೂರಿಯಾಗಿ ನಡೆಸಲು ತೀರ್ಮಾನ
ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಚ್ಚಿಲ ದಸರಾ 2023 ಪೂರ್ವಭಾವಿ ಸಭೆಯು ಉಚ್ಚಿಲ ಮೊಗವೀರ ಭವನದಲ್ಲಿ ನಡೆಯಿತು. ಅಕ್ಟೋಬರ್ 15ರಿಂದ ಅ. 24ರ ವರೆಗೆ ವೈಭವದ ಉಚ್ಚಿಲ ದಸರಾ ನಡೆಯಲಿದೆ.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ನೇತೃತ್ವದಲ್ಲಿ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ಹಾಗೂ ಸಹೃದಯಿ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಕಳೆದ ಬಾರಿ ಪ್ರಪ್ರಥಮ ಬಾರಿಗೆ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಉಚ್ಚಿಲ ದಸರಾ ನಡೆದಿರುವುದು ಇತಿಹಾಸ. ಈ ರೂಪುರೇಷೆಗಳ ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆ ನಡೆಸಿದರು. ಈ ಬಾರಿಯ ಉಚ್ಚಿಲ ದಸರಾ 2023 ನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿದ್ದಾರೆ. ಮೈಸೂರು ದಸರಾ ಮಾದರಿಯಲ್ಲಿ ಆಯೋಜನೆ ಮಾಡುವುದಾಗಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ. ಜಿ. ಶಂಕರ್ ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ, ಬೆಣ್ಣೆಕುದ್ರು ಶ್ರೀ ಕುಲಮಾಹಾಸ್ತ್ರಿ ಅಮ್ಮನವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸುಧಾಕರ್ ಕುಂದರ್, ಸತೀಶ್ ಆಮೀನ್ ಪಡುಕೆರೆ, ಉಚ್ಚಿಲ ದೇಗುಲದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಆಮೀನ್, ಬಾಗ್ವಾಡಿ ಮೊಗವೀರ ಮಹಾಸಭಾದ ಅಧ್ಯಕ್ಷ ಉದಯ್ ಕುಮಾರ್ ಹಟ್ಟಿಯಂಗಡಿ, ಬೆಣ್ಣೆಕುದ್ರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಆಮೀನ್, ಬಾರ್ಕೂರು ಉರ್ವ ಮಾರಿಯಮ್ಮ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಲಕ್ಷ್ಮಣ್ ಕೋಡಿಕಲ್, ಉದ್ಯಮಿಗಳು, ದ. ಮೊಗವೀರ ಮಹಿಳಾ ಸಂಘದ ಸದಸ್ಯರು ಸೇರಿದಂತೆ ಅಪಾರ ಮಂದಿ ಪಾಲ್ಗೊಂಡಿದ್ದರು.