ಶಿಥಿಲಾವಸ್ಥೆಯಲ್ಲಿ ಕರ್ನಾಟಕ-ಕೇರಳ ಸಂಪರ್ಕದ ಕೊಂಡಿ
ಪುತ್ತೂರು; ಎರಡು ಪ್ರಬಲ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಕಿರುಸೇತುವೆಯೊಂದು ಯಾರೂ ಕೇಳುವವರಿಲ್ಲದೆ ಅನಾಥಪ್ರಜ್ಞೆಯಿಂದ ಶಿಥಿಲಗೊಂಡು ಬಳಲುತ್ತಿದೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬಲಾಡ್ಯವಾಗಿರುವ ಈ ರಾಜ್ಯಗಳ ನಡುವೆ ಈ ಕಿರುಸೇತುವೆಗೆ ಕಾಯಕಲ್ಪವಾಗದೆ ಇಲ್ಲಿ ಸಂಚರಿಸುವ ವಾಹನಗಳಿಗೆ ಮಾರಕ ಪ್ರದೇಶವಾಗಿ ಮಾರ್ಪಟ್ಟಿದೆ.
ಸುಮಾರು 42 ವರ್ಷಗಳ ಹಿಂದೆ ನಿರ್ಮಿತವಾಗಿರುವ ಕಿರುಸೇತುವೆಯ ಅನಾಥ ಸ್ಥಿತಿ ಎರಡೂ ರಾಜ್ಯಗಳಿಗೆ ಅರ್ಥವಾಗಿಲ್ಲ. ಎರಡೂ ರಾಜ್ಯಗಳಿಗೆ ಆದಾಯ ತರುವ ಈ ಸಂಪರ್ಕದ ಕೊಂಡಿ ಅಪಾಯಮುಕ್ತವಾಗುವುದನ್ನು ಜನತೆ ಕಾಯುತ್ತಿದ್ದಾರೆ.
ಇದು ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ಸಂಪರ್ಕದ ಕೊಂಡಿ. ಪುತ್ತೂರು ತಾಲೂಕಿನ ಸುಳ್ಯಪದವು ಪ್ರದೇಶದಿಂದ ಬಡಿಯಡ್ಕ ಕಾಸರಗೋಡು ಸಂಪರ್ಕಿಸುವ ದೇವಸ್ಯ ಎಂಬಲ್ಲಿ ನಿರ್ಮಿತವಾದ ಈ ಹಳೆಯ ಕಿರುಸೇತುವೆಗೆ ಇನ್ನೂ ಅಭಿವೃದ್ಧಿ ಭಾಗ್ಯ ದೊರೆತಿಲ್ಲ. 1980ರಲ್ಲಿ ಸಂಸದರಾಗಿದ್ದ ಜನಾರ್ಧನ ಪೂಜಾರಿ ಅವರ ಅನುದಾನದ ಮೂಲಕ ನಿರ್ಮಿತವಾದ ಈ ಸಂಪರ್ಕ ಸೇತುವೆ ಈಗ ಶಿಥಿಲಗೊಂಡು ಅಪಾಯವನ್ನು ಆಹ್ವಾನಿಸುತ್ತಿದೆ.
ಅತ್ಯಂತ ಇಕ್ಕಟ್ಟಿನ ಸೇತುವೆಯಾಗಿರುವ ಈ ಕಿರುಸೇತುವೆ ಪ್ರಸ್ತುತ ಕುಸಿದು ಬೀಳುವ ಪರಿಸ್ಥಿಯಲ್ಲಿದ್ದು, ಇದರ ಎರಡೂ ಭಾಗದಲ್ಲಿರುವ ರಕ್ಷಾ ಬೇಲಿಗಳು ತುಕ್ಕುಹಡಿದು ಬಿದ್ದಿವೆ. ಈಗಾಗಲೇ ಹಲವು ವಾಹನಗಳು ಈ ಕಿರುಸೇತುವೆಯಿಂದ ಕೆಳಗೆ ಬಿದ್ದು ಅಪಾಯ ಉಂಟಾಗಿದೆ. ನಿತ್ಯ ನೂರಾರು ವಾಹನಗಳು ಓಡಾಡುವ ರಸ್ತೆಯಲ್ಲಿರುವ ಸೇತುವೆಯ ಅತ್ತ ಕೇರಳ, ಇತ್ತ ಕರ್ನಾಟಕದ ಸಂಪರ್ಕ ರಸ್ತೆಗಳು ಅಗಲೀಕರಣಗೊಂಡು ಅಭಿವೃದ್ಧಿ ಹೊಂದಿವೆ. ಆದರೆ ಸೇತುವೆ ಮಾತ್ರ ಹಾಗೆಯೇ ಉಳಿದಿದೆ.
ಖಜಾನೆ ತುಂಬುವ ಕೊಂಡಿ ತಮಾಷೆ ಎಂದರೆ ಈ ಕಿರುಸೇತುವೆ ಕುಸಿತವಾಗಿ ಸಂಪರ್ಕ ಕಡಿತವಾದರೆÀ ರಾಜ್ಯಗಳ ನಡುವಿನ ಸಂಪರ್ಕಕ್ಕೆ ಕೊರತೆ ಉಂಟಾಗುವುದರ ಜತೆಗೆ ಕರ್ನಾಟಕ ಮತ್ತು ಕೇರಳ ರಾಜ್ಯದ ಆದಾಯಕ್ಕೂ ಚ್ಯುತಿ' ಉಂಟಾಗಲಿದೆ. ಕೇರಳದಲ್ಲಿ ಪಾನನಿಷೇಧ, ಕರ್ನಾಟಕದಲ್ಲಿ ಲಾಟರಿ ನಿಷೇಧವಿದ್ದು, ಕೇರಳದ ಪಾನಪ್ರಿಯ ಮಂದಿ ಕರ್ನಾಟಕ ರಾಜ್ಯದ ಆದಾಯದ ಖಜಾನೆಗೆ ತಮ್ಮದೇ ಪಾಲು ನೀಡುತ್ತಿದ್ದಾರೆ.
ಕೇರಳದ ಲಾಟರಿಗೆ
ಫಿದಾ’ ಆಗಿರುವ ಕರ್ನಾಟಕದ ಮಂದಿ ಅಲ್ಲಿನ ಖಜಾನೆಗೂ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಸಂಪೂರ್ಣ ಶಿಥಿಲಗೊಂಡಿರುವ ದೇವಸ್ಯದ ಕಿರುಸೇತುವೆ ಪ್ರಸ್ತುತ ಎರಡೂ ರಾಜ್ಯಗಳಿಗೆ ಲಾಭದಾಯಕವಾಗಿದ್ದರೂ ಅಭಿವೃದ್ಧಿಯತ್ತ ರಾಜ್ಯಗಳ ದೃಷ್ಟಿ ಹರಿದಿಲ್ಲ. ಕಿರುಸೇತುವೆಯ ಒಂದು ತುದಿ ಕೇರಳ, ಮತ್ತೊಂದು ತುದಿ ಕರ್ನಾಟಕ. ಹಾಗಾಗಿ ಸೇತುವೆ ಯಾರದ್ದು ಎಂಬ ವಿಚಾರವೇ ಅಭಿವೃದ್ಧಿಯ ತೊಡಕಿಗೆ ಕಾರಣವೇ ಎಂಬ ಪ್ರಶ್ನೆಯೂ ಇಲ್ಲಿನ ಜನತೆಯನ್ನು ಕಾಡುತ್ತಿದೆ.